ಹದಗೆಟ್ಟ ಬೇವಿನಬೆಂಚಿ ರಸ್ತೆ – ದುರಸ್ತಿಗೆ ಒತ್ತಾಯ

ರಾಯಚೂರು.ಏ.೨೩- ಗ್ರಾಮಾಂತರ ಕ್ಷೇತ್ರದ ಹೈದ್ರಾಬಾದ್ ಮುಖ್ಯ ರಸ್ತೆಯಿಂದ ಬೇವಿನಬೆಂಚಿ ಗ್ರಾಮ ಸಂಪರ್ಕ ರಸ್ತೆ ನಿನ್ನೆ ಸುರಿದ ಮಳೆಗೆ ಸಂಪೂರ್ಣ ಹದಗೆಟ್ಟು ಜನ ಓಡಾಡಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.
ಬೇವಿನಬೆಂಚಿ, ಮೀರಾಪೂರು ಹಾಗೂ ಗಬ್ಬೂರು ಗ್ರಾಮಕ್ಕೆ ನೇರ ಸಂಪರ್ಕ ಕಲ್ಪಿಸುವ ಈ ರಸ್ತೆ ಈ ಭಾಗದಲ್ಲಿ ಪ್ರಮುಖ ರಸ್ತೆಯಾಗಿದೆ. ಕಳೆದ ಎರಡು ವರ್ಷಗಳಿಂದ ರಸ್ತೆ ನಿರ್ಮಾಣ ಕೈಗೊಳ್ಳದ ಕಾರಣ ಪರಿಸ್ಥಿತಿ ಗಂಭೀರವಾಗಿದೆ. ನಿನ್ನೆ ರಾತ್ರಿ ಸುರಿದ ಮಳೆಗೆ ರಸ್ತೆಯ ತೆಗ್ಗುಗಳಲ್ಲಿ ನೀರು ತುಂಬಿ ಜನ ಓಡಾಟ ಸಾಧ್ಯವಿಲ್ಲದ ಸ್ಥಿತಿ ನಿರ್ಮಿಸಿದೆ. ಅನೇಕ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆ ಹದಗೆಟ್ಟಿದ್ದರಿಂದ ಜನ ಅಪಾಯದಲ್ಲಿ ಓಡಾಡುವುದು ಸಾಮಾನ್ಯವಾಗಿದೆ. ಹೆರಿಗೆ ಸಂದರ್ಭಗಳಲ್ಲಿ ಈ ರಸ್ತೆಯಲ್ಲಿ ಸಂಚರಿಸುವಾಗಲೇ ಹೆರಿಗೆ ಆದಂತಹ ಘಟನೆಗಳಿವೆ.
ಪದೇ ಪದೇ ಗ್ರಾಮದ ಜನ ರಸ್ತೆ ದುರಸ್ತಿಗಾಗಿ ಒತ್ತಾಯಿಸುತ್ತಿದ್ದರೂ, ಯಾರು ಸಹ ಈ ಬಗ್ಗೆ ಗಮನ ಹರಿಸದ ಪರಿಣಾಮ ಜನ ತೀವ್ರ ತೊಂದರೆ ಎದುರಿಸುವಂತಾಗಿದೆ. ಗ್ರಾಮಾಂತರ ಶಾಸಕರು ಇತ್ತ ಗಮನ ಹರಿಸಿ, ಕೂಡಲೇ ಈ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಜನರ ಒತ್ತಾಯವಾಗಿದೆ. ರಸ್ತೆ ಸಂಪೂರ್ಣವಾಗಿ ಕೆಟ್ಟು ಗಂಭೀರವಾಗಿದೆ. ಶೀಘ್ರವೇ ಈ ರಸ್ತೆ ದುರಸ್ತಿಯಾಗದಿದ್ದರೇ, ಈ ರಸ್ತೆ ಸಂಪರ್ಕ ಕಲ್ಪಿಸುವ ಗ್ರಾಮಗಳ ಜನರು ಪ್ರತಿಭಟನೆಗಿಳಿಯಬೇಕಾಗುತ್ತದೆಂದು ಎಚ್ಚರಿಸಿದ್ದಾರೆ.