ಹದಗೆಟ್ಟ ಕಾನೂನು ಸುವ್ಯವಸ್ಥೆ: ಕಠಿಣ ಕ್ರಮಕ್ಕಾಗಿ ಆಗ್ರಹ

ಅಫಜಲಪುರ:ಮೇ.17: ರಾಷ್ಟ್ರಾದ್ಯಂತ ಸದ್ದು ಮಾಡಿದ್ದ ನೇಹಾ ಹಿರೇಮಠ ಕೊಲೆ ಪ್ರಕರಣ ಜನಮಾನಸದಿಂದ ಮಾಸುವ ಮುನ್ನವೇ ಹುಬ್ಬಳ್ಳಿಯಲ್ಲಿ ಅಂಥದ್ದೇ ಮತ್ತೊಂದು ಕೊಲೆ ಪ್ರಕರಣ ನಡೆದಿದೆ. ಕೊಲೆಯಂತಹ ಪಾತಕ ಕೃತ್ಯ ಎಸಗಿಯೂ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಬಹುದು ಎನ್ನುವ ಧೈರ್ಯ ಬರಲು ಕಾರಣ ಹದಗೆಟ್ಟ ಕಾನೂನು ಸುವ್ಯವಸ್ಥೆ ಕಾರಣ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ ನಾಟೀಕಾರ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಹುಬ್ಬಳ್ಳಿಯ ವೀರಾಪುರ ಬಡಾವಣೆಯ ಅಂಜಲಿ ಅಂಬಿಗೇರ ಎನ್ನುವ ಯುವತಿ ಕೊಲೆಯಾಗಿದ್ದಾಳೆ. ರಾಜ್ಯದಲ್ಲಿ ಮೇಲಿಂದ ಮೇಲೆ ಇಂತಹ ದುರ್ಘಟನೆಗಳು ನಡೆಯುತ್ತಿರುವುದಕ್ಕೆ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ಮುಂಜಾಗ್ರತಾ ಕ್ರಮವಾಗಿ ಅಂಜಲಿ ಕುಟುಂಬಸ್ಥರು ದೂರು ನೀಡಿದ್ದರೂ ಸಹ ಪೆÇೀಲಿಸ್ ಇಲಾಖೆ ನಿರ್ಲಕ್ಷ್ಯ ತೋರಿರುವ ಕ್ರಮವನ್ನು ತೀವ್ರವಾಗಿ ಖಂಡಿಸುತ್ತೇನೆ.

ಸಾರ್ವಜನಿಕರ ರಕ್ಷಣೆಯ ಜವಾಬ್ದಾರಿ ಸರ್ಕಾರದ ಆದ್ಯ ಕರ್ತವ್ಯ. ಹೀಗಾಗಿ ಹಂತಕನಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಂಡು, ಕಾನೂನು ವ್ಯವಸ್ಥೆ ಸುಸ್ಥಿತಿಯಲ್ಲಿರುವಂತೆ ಸರ್ಕಾರ ನೋಡಿಕೊಳ್ಳಬೇಕು ಹಾಗೂ ಅಂಜಲಿ ಕುಟುಂಬಸ್ಥರಿಗೆ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.