ಹದಗೆಟ್ಟ ಆರೋಗ್ಯ ವ್ಯವಸ್ಥೆಯಿಂದ ಜನತೆ ಸಂಕಷ್ಟಕ್ಕೆ

ಬಳ್ಳಾರಿ ಮೇ 21 : ತಜ್ಞರು ನೀಡಿದ ಎಲ್ಲಾ ಎಚ್ಚರಿಕೆಗಳ ಕಡೆಗಣನೆ, ಕೇಂದ್ರ ಸರ್ಕಾರದ ತಪ್ಪು ನೀತಿಗಳು, ಕೇಂದ್ರೀಕೃತ ನಿರ್ವಹಣಾ ವ್ಯವಸ್ಥೆ ಮತ್ತು ಮೂಲಭೂತ ಆರೋಗ್ಯ ಸೌಕರ್ಯಗಳ ಕೊರತೆ ಇವುಗಳೇ ಇಂದು ನಾವು ದೇಶದಲ್ಲೆಡೆ ಕಾಣುತ್ತಿರುವ ಹದಗೆಟ್ಟ ಆರೋಗ್ಯ ವ್ಯವಸ್ಥೆಗೆ ಮೂಲ ಕಾರಣಗಳಾಗಿವೆ ಎಂದು ಹಂಪಿ ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಎಂ. ಚಂದ್ರಪೂಜಾರಿ ಅವರು ಅಭಿಪ್ರಾಯಪಟ್ಟರು. ಅವರು ಆಲ್ ಇಂಡಿಯ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್(ಎಐಡಿವೈಓ) ರಾಜ್ಯ ಸಮಿತಿ ವತಿಯಿಂದ ಹದಗೆಟ್ಟ ಆರೋಗ್ಯ ವ್ಯವಸ್ಥೆ: ಕಾರಣವೇನು? ಎಂಬ ವಿಷಯದ ಕುರಿತು ನಡೆಸಲಾದ ರಾಜ್ಯಮಟ್ಟದ ವೆಬಿನಾರ್‍ನಲ್ಲಿ ಮಾತನಾಡುತ್ತಿದ್ದರು.
2021ರ ಮಾರ್ಚ್ ವೇಳೆಗೆ ಕೋವಿಡ್ ಎರಡನೇ ಅಲೆಯು ದೇಶದಲ್ಲಿ ತೀವ್ರವಾಗಿ ಕಾಡಲಿದೆ ಎಂಬ ತಜ್ಞರ ಸಮಿತಿಯ ಎಲ್ಲ ಎಚ್ಚರಿಕೆಯನ್ನು ಕಡೆಗಣಿಸಿದ ಪರಿಣಾಮ ಇಂದು ಜನರು ಬೆಲೆ ತೆರಬೇಕಾಗಿದೆ ಎಂದರು.
ವಲ್ರ್ಡ್ ಹೆಲ್ತ್ ಆರ್ಗನೈಸೇಷನ್ ಹೇಳುವಂತೆ ಪ್ರತಿ 10 ಸಾವಿರ ಜನರಿಗೆ ವೈದ್ಯರು ದಾದಿಯರು ಸೇರಿ 44.5ರಷ್ಟು ಆರೋಗ್ಯ ಕಾರ್ಯಕರ್ತರು ಇರಬೇಕು. ಆದರೆ ನಮ್ಮ ದೇಶದಲ್ಲಿ ಪ್ರತಿ 10 ಸಾವಿರಕ್ಕೆ 16.7ರಷ್ಟು ಮಾತ್ರ ಆರೋಗ್ಯ ಕಾರ್ಯಕರ್ತರಿದ್ದಾರೆ. ಅದರಲ್ಲೂ ನಮ್ಮ ರಾಜ್ಯದಲ್ಲಿ ಕೇವಲ 15.1ರಷ್ಟು ಆರೋಗ್ಯ ಕಾರ್ಯಕರ್ತರು ಇದ್ದಾರೆ ಅಷ್ಟೇ. ಮೇ ಅಂತ್ಯದ ವೇಳೆಗೆ ಪ್ರತಿದಿನ ನಾಲ್ಕು ಲಕ್ಷ ಜನ ಈ ಸೋಂಕಿಗೆ ತುತ್ತಾಗಲಿದ್ದಾರೆ ಎಂದು ಸರ್ಕಾರವೇ ಅಂದಾಜಿಸಿದೆ. ಆದರೆ ಅದಕ್ಕೆ ತಕ್ಕದಾದ ಆರೋಗ್ಯ ಸೌಲಭ್ಯಗಳ ಸಿದ್ಧತೆ ಇಲ್ಲಿ ನಡೆಯುತ್ತಿಲ್ಲ. ಆರೋಗ್ಯ ಸೌಲಭ್ಯಗಳ ಮೇಲೆ ಸರ್ಕಾರ ಮಾಡುತ್ತಿರುವ ಖರ್ಚು ತೀರಾ ಕಡಿಮೆ ಪ್ರಮಾಣದಲ್ಲಿದೆ. ನಮ್ಮ ದೇಶದ ಬಜೆಟ್‍ನಲ್ಲಿ ಆರೋಗ್ಯಕ್ಕೆ ನೀಡಿರುವ ಹಣ ಕೇವಲ 1.3 ರಷ್ಟು ಮಾತ್ರ. ಶ್ರೀಲಂಕಾ, ಭೂತಾನ್‍ನಂತಹ ಚಿಕ್ಕ ರಾಷ್ಟ್ರಗಳು 1.7ರಷ್ಟು ಹಣವನ್ನು ಆರೋಗ್ಯಕ್ಕಾಗಿ ಮೀಲಸಲಿಟ್ಟಿವೆ. ಕೆಲ ಮುಂದುವರೆದ ರಾಷ್ಟ್ರಗಳು ತಮ್ಮ ಜಿ.ಡಿ.ಪಿಯ ಶೇ.11 ರಿಂದ 16ಕ್ಕೂ ಹೆಚ್ಚು ಹಣವನ್ನು ಆರೋಗ್ಯಕ್ಕಾಗಿ ಖರ್ಚುಮಾಡುತ್ತಿವೆ. ಎಂದರು.
ನಂತರ ಮಾತನಾಡಿದ ಎಐಡಿವೈಓ ನ ಅಖಿಲ ಭಾರತ ಅಧ್ಯಕ್ಷರಾದ ರಾಮಾಂಜನಪ್ಪ ಆಲ್ದಳ್ಳಿ ಅವರು ದೇಶದ ಪ್ರತೀ ಹಳ್ಳಿಗೊಂದು ಆರೋಗ್ಯ ಕೇಂದ್ರ ನಗರದ ಪ್ರತಿ ವಾರ್ಡ್‍ಗೊಂದು ಆರೋಗ್ಯ ಘಟಕ ಬೇಕೆಂಬ ಘೋಷಣೆಯೊಂದಿಗೆ ನಮ್ಮ ಹೋರಾಟವನ್ನು ಕಟ್ಟಬೇಕು ಎಂದರು. ಈ ವೇಬಿನರ್‍ನಲ್ಲಿ ಪಾಲ್ಗೊಂಡಿರುವ ನೂರಾರು ಸಂಖ್ಯೆಯ ಯುವಕರು ರಾಜ್ಯದ ಜನತೆಯನ್ನು ಇಂತಹ ಹೋರಾಟಕ್ಕೆ ಸಜ್ಜುಗೊಳಿಸಲು ಸಿದ್ಧರಾಗಬೇಕು. ಅದಕ್ಕಾಗಿ ವಿಷಯಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ವೈಚಾರಿಕ ತಳಹದಿಯಲ್ಲಿ ನಮ್ಮ ಹೋರಾಟವನ್ನು ರೂಪಿಸಬೇಕು ಎಂದು ಕರೆ ನೀಡಿದರು.
ವೆಬಿನಾರ್‍ನ ಕೊನೆಯಲ್ಲಿ ಎಐಡಿವೈಓ ನ ರಾಜ್ಯಾಧ್ಯಕ್ಷರಾದ ಎಂ.ಉಮಾದೇವಿ ಅವರು ಮಾತನಾಡಿ, “ಹದಗೆಟ್ಟ ಆರೋಗ್ಯ ವ್ಯವಸ್ಥೆಯ ಸುಧಾರಣೆಗಾಗಿ ಮೊದಲು ಆರೋಗ್ಯ ಕ್ಷೇತ್ರದಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಭರ್ತಿಮಾಡಬೇಕು. ಕೇವಲ ವೈದ್ಯಕೀಯ ಸೌಲಭ್ಯಗಳನ್ನು ಪೂರೈಸಿದರೆ ಸಾಲದು, ಅವುಗಳನ್ನು ಜನರಿಗೆ ತಲುಪಿಸುವ ಮತ್ತು ಎಲ್ಲ ಅರ್ಹತೆ ಹೊಂದಿದ್ದು ಉದ್ಯೋಗಕ್ಕಾಗಿ ಕಾಯುತ್ತಿರುವ ತಜ್ಞ ವೈದ್ಯರನ್ನೂ, ಶುಶ್ರೂಷಕರನ್ನೂ ಮತ್ತು ಇನ್ನಿತರ ತಂತ್ರಜ್ಞರನ್ನು ಖಾಯಂ ಆಗಿ ನೇಮಿಸಬೇಕು. ಇದಕ್ಕಾಗಿ ನಾವು ಇದೇ ತಿಂಗಳ 23ರಂದು ಆನ್‍ಲೈನ್ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದೇವೆ. ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸಿ ಮತ್ತು ಜನಗಳ ಜೀವ ಉಳಿಸಿ! ಆರೋಗ್ಯ ಕ್ಷೇತ್ರದಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಿ. ಬಜೆಟ್‍ನಲ್ಲಿ ಆರೋಗ್ಯಕ್ಕಾಗಿ ಮೀಸಲಿಡುವ ಹಣವನ್ನು ಹೆಚ್ಚಿಸಿ. ಕೋವಿಡ್ ನಿರ್ವಹಣೆಗಾಗಿ ಎಲ್ಲ ಸಮುದಾಯ ಭವನಗಳನ್ನು ಆಸ್ಪತ್ರೆಗಳನ್ನಾಗಿ ಮಾರ್ಪಡಿಸಿ ಜನರಿಗೆ ಉಚಿತ ಆರೋಗ್ಯ ಸೇವೆ ಒದಗಿಸಿ. ಆಕ್ಸಿಜನ್ ಬೆಡ್‍ಗಳು ಮತ್ತು ಐಸಿಯುಗಳ ಸಂಖ್ಯೆ ಹೆಚ್ಚಿಸಿ. ಎಲ್ಲರಿಗೂ ಉಚಿತವಾಗಿ ವ್ಯಾಕ್ಸಿನ್ ಒದಗಿಸಿ ಎಂಬ ಹಕ್ಕೊತ್ತಾಯಗಳಿಗಾಗಿ ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ರಾಜ್ಯದ ಜನತೆ ಈ ಪ್ರತಿಭಟನೆಯನ್ನು ಬೆಂಬಲಿಸಬೇಕು” ಎಂದು ಮನವಿ ಮಾಡಿದರು. ಫೇಸ್ಬುಕ್‍ನಲ್ಲಿ ನಡೆದ ಈ ವೆಬಿನಾರನ್ನು ಕಾರ್ಯಕ್ರಮ ನಡೆದ ಒಂದೇ ಗಂಟೆಯಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ಮಂದಿ ಇದನ್ನು ವೀಕ್ಷಿಸಿದರು ಎಂದು ಎಐಡಿವೈಓ ಜಿಲ್ಲಾ ಸಮಿತಿ ಪರವಾಗಿ ಹುಲುಗಪ್ಪ ಪ್ರಕಟೆಣೆಯಲ್ಲಿ ತಿಳಿಸಿದ್ದಾರೆ.