ಹದಗೆಟ್ಟಿ ರಸ್ತೆಗಳ ದುರಸ್ತಿಗೆ ರೈತ ಸಂಘ ಆಗ್ರಹ

ಬಂಗಾರಪೇಟೆ,ಜು.೩೧- ಗಡಿ ಭಾಗಗಳಲ್ಲಿ ಹದಗೆಟ್ಟಿರುವ ರಸ್ತೆಗಳಿಗೆ ದುರಸ್ತಿ ಮಾಡಿ ಮುಕ್ತಿ ನೀಡಿ ಇಲ್ಲವೆ ಪ್ರತಿ ಹದಗೆಟ್ಟಿರುವ ರಸ್ತೆಯಲ್ಲಿ ಬೈಕ್ ರಿಪೇರಿ ಗ್ಯಾರೇಜ್ ತೆರೆದು ಪುಣ್ಯ ಪಟ್ಟಿಕೊಳ್ಳಿ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿ
ಆಗಸ್ ೪ ರ ಶುಕ್ರವಾರ ಹದಗೆಟ್ಟಿರುವ ಯರಗೋಳ್ ರಸ್ತೆ ಬಂದ್ ಮಾಡಲು ರೈತ ಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಹದಗೆಟ್ಟಿರುವ ಯರಗೋಳ್ ರಸ್ತೆಯಲ್ಲಿ ರೈತ ಸಂಘದ ಸಭೆ ನಡೆಸಿ ಮಾತನಾಡಿದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಗಡಿಭಾಗದ ಬಡ ರೈತ ಕೂಲಿಕಾರ್ಮಿಕರು ಏನು ಪಾಪ ಮಾಡಿದ್ದಾರೋ ಗೊತ್ತಿಲ್ಲ. ರಸ್ತೆಯಿಂದ ಹಿಡಿದು ಬೆಳೆ ರಕ್ಷಣೆಯ ವರೆಗೆ ಪ್ರತಿ ಸಮಸ್ಯೆಗೂ ಬೀದಿಗೆ ಬರುವಂತಹ ಪರಿಸ್ಥಿತಿ ತಾಲ್ಲೂಕು ಆಡಳಿತ ನಿರ್ಮಿಸಿದೆ ಎಂದು ಅವ್ಯವಸ್ಥೆ ವಿರುದ್ದ ಆಕ್ರೋಷ ವ್ಯಕ್ತಪಡಿಸಿದರು.
ಸುಮಾರು ಒಂದು ವರ್ಷದಿಂದ ಯರಗೋಳ್ ರಸ್ತೆ ಸೇರಿದಂತೆ ಕಾಮಸಮುದ್ರ ಮುಖ್ಯ ರಸ್ತೆಗಳು ಗಡಿಬಾಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಮಳೆ ಬಂದರೆ ಕೆರೆ ಕುಂಟೆಗಳಾಗುತ್ತವೆ. ಬಿಸಿಲು ಬಂದರೆ ದೂಳಿನ ರಸ್ತೆಗಳಾಗಿ ಮಾರ್ಪಡುತ್ತಿದ್ದರೂ ಸರಿ ಪಡಿಸಬೇಕಾದ ಗುತ್ತಿಗೆದಾರರು ಅಧಿಕಾರಿಗಳು ನಾಪತ್ತೆಯಾಗಿದ್ದಾರೆಂದು ಕಿಡಿಕಾರಿದರು.
ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ್ ಮಾತನಾಡಿ ರಸ್ತೆ ಅಭಿವೃದ್ದಿ ಹೆಸರಿನಲ್ಲಿ ಗುತ್ತಿಗೆದಾರರು ಜಲ್ಲಿಯನ್ನು ಅಳವಡಿಸಿ ಅದಕ್ಕೆ ಡಾಂಬರೀಕರಣ ಮಾಡದೆ ನಿರ್ಲಕ್ಷೆ ಮಾಡುತ್ತಿರುವುದರಿಂದ ಪ್ರತಿದಿನ ಆ ರಸ್ತೆಗಳಲ್ಲಿ ಸಂಚರಿಸುವ ವಾಹನ ಸವಾರರು ಶಾಲಾ ಮಕ್ಕಳು, ಜಲ್ಲಿ ಕಲ್ಲಿನ ಮೇಲೆ ತಮ್ಮ ಪ್ರಾಣವನ್ನು ಅಂಗೈಯಲ್ಲಿಟ್ಟುಕೊಂಡು ಓಡಾಡುವ ಜೊತೆಗೆ ವಾಹನಗಳು ಸ್ಕಿಡ್‌ಆಗಿ ಬಿದ್ದು ಕೈಕಾಲು ಮುರಿದುಕೊಂಡಿರುವ ಜೊತೆಗೆ ಕೆಲವರು ಪ್ರಾಣವನ್ನು ಕಳೆದುಕೊಳ್ಳುತ್ತಿದ್ದರೂ ಅಧಿಕಾರಿಗಳ ಮನಸ್ಸು ಮಾತ್ರ ರಸ್ತೆ ಸರಿಪಡಿಸಲು ಆಗುತ್ತಿಲ್ಲವೆಂದು ಆರೋಪ ಮಾಡಿದರು.