ಹತ್ಯೆ ಆರೋಪಿ ಪರಾರಿ: ಲುಕ್‌ಔಟ್ ನೋಟಿಸ್ ಹೊರಡಿಸಿದ ಪೊಲೀಸ್

ಕಾಸರಗೋಡು, ನ.೧೨- ಪೊಲೀಸರಿಂದ ತಪ್ಪಿಸಿ ಪರಾರಿಯಾಗಿದ್ದ ಹತ್ಯೆ ಪ್ರಕರಣದ ಆರೋಪಿಯ ಪತ್ತೆಗೆ ಕಾಸರಗೋಡು ಪೊಲೀಸರು ಲುಕ್ ಔಟ್ ನೋಟಿಸ್ ಬಿಡುಗಡೆಗೊಳಿಸಿದ್ದಾರೆ.

ಬೇಕಲ ಠಾಣಾ ವ್ಯಾಪ್ತಿಯಲ್ಲಿ ೨೦೧೮ ರಲ್ಲಿ ನಡೆದ ಮಹಿಳೆಯೋರ್ವರ ಕೊಲೆ ಪ್ರಕರಣದ ಆರೋಪಿ ಸುಳ್ಯದ ಅಬ್ದುಲ್ ಅಝೀಜ್.ಎ (೩೩) ಪರಾರಿಯಾಗಿ ತಲೆಮರೆಸಿಕೊಂಡ ಆರೋಪಿ. ೨೦೧೮ರ ಸೆ.೧೪ರಂದು ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ ಕರೆದುಕೊಂಡು ಬರುತ್ತಿದ್ದಾಗ ಸುಳ್ಯ ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣದಿಂದ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದನು. ಆರೋಪಿಯ ಸುಳಿವು ನೀಡುವವರಿಗೆ ಪೊಲೀಸರು ಎರಡು ಲಕ್ಷ ರೂ. ಬಹುಮಾನ ಘೋಷಿಸಿದ್ದಾರೆ. ಸುಳಿವು ಲಭಿಸಿದವರು ೯೪೯೭೯೯೬೯೭೨, ೯೪೯೭೯೯೦೧೪೮, ೯೪೯೭೯೬೪೩೨೩ ನಂಬರ್‌ಗೆ ಮಾಹಿತಿ ನೀಡುವಂತೆ ತಿಳಿಸಿದ್ದಾರೆ. ಬೇಕಲ ಠಾಣಾ ವ್ಯಾಪ್ತಿಯ ಆಯಂಬಾರದಲ್ಲಿ ನಡೆದ ಸುಬೈದಾ ಎಂಬ ಮಹಿಳೆಯ ಕೊಲೆ ಪ್ರಕರಣದ ಆರೋಪಿಯಾಗಿದ್ದು, ಕೊಲೆಗೈದ ಬಳಿಕ ಚಿನ್ನಾಭರಣವನ್ನು ದೋಚಿದ್ದನು. ೨೦೧೮ರ ಜನವರಿ ೧೯ರಂದು ೬೦ವರ್ಷದ ಮಹಿಳೆ ಕೊಲೆಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತನಿಖೆ ನಡೆಸಿದ ಪೊಲೀಸರು ಅಜೀಜ್ ಸೇರಿದಂತೆ ನಾಲ್ವರನ್ನು ಬಂಧಿಸಿದ್ದರು. ಅಬ್ದುಲ್ ಅಜೀಜ್ ಅಲ್ಲದೆ ಮಧೂರು ಕೋಟೆ ಕಣಿಯ ಅಬ್ದುಲ್ ಖಾದರ್, ಪಡನ್ನದ ಬಾವ ಅಜೀಜ್, ಮಾನ್ಯದ ಹರ್ಷಾದ್‌ನನ್ನು ಬಂಧಿಸಲಾಗಿತ್ತು.