ಹತ್ತು-ಹಲವು ಯೋಜನೆಗಳಿಗೆ ಕೇಂದ್ರ ಸಮ್ಮತಿ

The Chief Minister of Karnataka, Shri Basavaraj Bommai calling on the Union Minister for Defence, Shri Rajnath Singh, in New Delhi on July 30, 2021.


ಬೆಂಗಳೂರು, ಸೆ.೯- ರಾಜ್ಯದ ಗ್ರಾಮೀಣ ಪ್ರದೇಶವನ್ನು ಡಿಜಿಟಲೀಕರಣಗೊಳಿಸುವ ಕಾರ್ಯಕ್ರಮ ರೂಪಿಸುವ ಜತೆಗೆ ಬೆಂಗಳೂರು-ಕೋಲಾರ ನಡುವೆ ಹಾರ್ಡ್‌ವೇರ್ ಪಾರ್ಕ್ ಸ್ಥಾಪನೆ, ಬೆಂಗಳೂರು ಉಪನಗರ ರೈಲ್ವೆ ಯೋಜನೆಗಳ ಕಾಮಗಾರಿಗಳ ಶೀಘ್ರ ಆರಂಭ, ನಾಲ್ಕು ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗೆ ಮೇಲ್ದರ್ಜೆಗೇರಿಸಲು, ಎರಡು ಹೊಸ ರೈಲು ಮಾರ್ಗಗಳ ನಿರ್ಮಾಣ ಸೇರಿದಂತೆ ರಾಜ್ಯದ ವಿವಿಧ ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಸಮ್ಮತಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ಬೆಂಗಳೂರಿನ ಆರ್‌ಟಿ ನಗರದ ತಮ್ಮ ನಿವಾಸದಲ್ಲಿಂದು ತಮ್ಮ ದೆಹಲಿಯಾತ್ರೆಯ ಸಫಲತೆಯ ಬಗ್ಗೆ ಸಮಗ್ರ ಮಾಹಿತಿ ನೀಡಿದ ಅವರು, ರಾಜ್ಯದ ಬಾಕಿ ಇರುವ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಕಾರ್ಯಗತಗೊಳಿಸಲು ಕೇಂದ್ರ ಸರ್ಕಾರ ಸಕರಾತ್ಮಕವಾಗಿ ಸ್ಪಂದಿಸಿದೆ ಎಂದರು.
ರಾಜ್ಯದ ವಿವಿಧ ಅಭಿವೃದ್ಧಿ ಯೋಜನೆಗಳ ಸಂಬಂಧ ಕೇಂದ್ರದ ಹಲವು ಸಚಿವರುಗಳನ್ನು ಭೇಟಿ ಮಾಡಿ ಚರ್ಚಿಸಿದ್ದೇನೆ. ಕೇಂದ್ರದ ಕೌಶಲ್ಯಾಭಿವೃದ್ಧಿ ಸಚಿವರಾದ ರಾಜೀವ್ ಚಂದ್ರಶೇಖರ್ ಅವರನ್ನು ಭೇಟಿ ಮಾಡಿದ್ದೆ. ಗ್ರಾಮೀಣ ಭಾಗದಲ್ಲಿ ಸಂಪರ್ಕ ಜಾಲವನ್ನು ಬಲಗೊಳಿಸಿ ಗ್ರಾಮೀಣ ಭಾಗವನ್ನು ಡಿಜಿಟಲೀಕರಣಗೊಳಿಸಲು ವಿಶೇಷ ಕಾರ್ಯಕ್ರಮವನ್ನು ಕೈಗೆತ್ತಿಕೊಳ್ಳುವ ಬಗ್ಗೆ ಚರ್ಚೆ ನಡೆದಿದೆ.
ಗ್ರಾಮೀಣ ಭಾಗದ ಸಂಪರ್ಕ ಜಾಲವನ್ನು ಬಲಗೊಳಿಸಲು ಆಪ್ಟಿಕಲ್ ಫೈಬರ್ ಇವುಗಳನ್ನೆಲ್ಲ ಬಳಸಿಕೊಂಡು ಡಿಜಟಲೀಕರಣಕ್ಕೆ ಒತ್ತು ನೀಡಲಾಗುವುದು ಎಂದರು. ರಾಜ್ಯದಲ್ಲಿ ಕೌಶಲ್ಯಾಭಿವೃದ್ಧಿಗೆ ಪ್ರತ್ಯೇಕ ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ಬಗ್ಗೆಯೂ ಕೇಂದ್ರ ಸಚಿವರುಗಳ ಜತೆ ಚರ್ಚೆಗಳು ನಡೆದವು.
ಹಾರ್ಡ್‌ವೇರ್ ಪಾರ್ಕ್
ಬೆಂಗಳೂರು-ಕೋಲಾರ ನಡುವೆ ಹಾರ್ಡ್‌ವೇರ್ ಸ್ಥಾಪಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ ಎಂದು ಅವರು ಹೇಳಿದರು. ಈ ಯೋಜನೆಗೆ ರಾಜ್ಯಸರ್ಕಾರ ಅಗತ್ಯ ಭೂಮಿ ಸೇರಿದಂತೆ ಎಲ್ಲ ಸಹಕಾರವನ್ನು ನೀಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರು ಸ್ಯಾಟಲೈಟ್ ರಸ್ತೆ
ಬೆಂಗಳೂರು ಸುತ್ತ ಸ್ಯಾಟಲೈಟ್ ರಸ್ತೆ ನಿರ್ಮಾಣ ಯೋಜನೆಯಂತೆ ಡಾಬರ್ಸ್‌ಪೇಟೆ ಮೈಸೂರು ರಸ್ತೆ ಸಂಪರ್ಕಿಸುವ ಸ್ಯಾಟಲೈಟ್ ಸಂಪರ್ಕಿಸುವ ರಿಂಗ್ ರೋಡ್(ಎಸ್‌ಟಿಆರ್‌ಆರ್) ನಿರ್ಮಾಣ ಕಾಮಗಾರಿಯನ್ನು ಆರಂಭಿಸಲು ಕೇಂದ್ರದ ಭೂ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಒಪ್ಪಿಗೆ ನೀಡಿದ್ದಾರೆ.
ಕಳೆದ ಕೆಲ ವರ್ಷಗಳಿಂದ ಈ ಯೋಜನೆ ನೆನೆಗುದಿಗೆ ಬಿದ್ದಿತ್ತು. ಇನ್ನು ೫-೬ ತಿಂಗಳಲ್ಲಿ ಕಾಮಗಾರಿಗಳು ಆರಂಭವಾಗಲಿದೆ ಎಂದರು.
ಪ್ರಧಾನಮಂತ್ರಿ ಆವಾಜ್ ಯೋಜನೆಯಡಿ ೪೦೦ ಕೋಟಿ ರೂ.ಗಳನ್ನು ಕೇಂದ್ರದ ನಗರಾಭಿವೃದ್ಧಿ ಸಚಿವ ಹರ್‌ದೀಪ್‌ಸಿಂಗ್ ಪುರಿ ನಿನ್ನೆಯೇ ಬಿಡುಗಡೆ ಮಾಡಿದ್ದು, ಉಳಿದ ೧೫೦೦ ಕೋಟಿ ರೂ.ಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ ಎಂದರು.
ಬೆಂಗಳೂರು ಉಪನಗರ ರೈಲು ಯೋಜನೆಯ ಕಾಮಗಾರಿಗಳನ್ನು ಶೀಘ್ರ ಅನುಷ್ಠಾನಗೊಳಿಸಲು ಕೇಂದ್ರ ಸಮ್ಮತಿಸಿದ್ದು, ಬೈಯಪ್ಪನಹಳ್ಳಿ ರೈಲು ನಿಲ್ದಾಣದ ಕಾಮಗಾರಿಗಳು ಆರಂಭವಾಗಲಿದೆ ಎಂದರು.
ಈ ಉಪನಗರ ರೈಲು ಯೋಜನೆಯ ಭೂಸ್ವಾಧೀನ ವೆಚ್ಚದ ೧,೫೬೦ ಕೋಟಿ ರೂ.ಗಳಲ್ಲಿ ಶೇ. ೩೦ ರಷ್ಟನ್ನು ವೆಚ್ಚವನ್ನು ಭರಿಸಲು ರಾಜ್ಯಸರ್ಕಾರ ಸಮ್ಮತಿಸಿದೆ ಎಂದು ಅವರು ಹೇಳಿದರು.
ರಸ್ತೆ ಮೇಲ್ದರ್ಜೆಗೆ
ರಾಜ್ಯದ ವಿಜಯಪುರ-ಸಂಕೇಶ್ವರ ಹೆದ್ದಾರಿಯನ್ನು ವಿಸ್ತರಿಸುವ ಕಾಮಗಾರಿಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಒಪ್ಪಿಗೆ ನೀಡಿದ್ದು, ಈ ರಸ್ತೆ ಅಭಿವೃದ್ಧಿಯ ಸಮಗ್ರ ಯೋಜನಾವಧಿ ತಯಾರಿ ಕಾರ್ಯ ಪ್ರಗತಿಯಲ್ಲಿದೆ ಎಂದರು.
ಶಿರಾಡಿಘಾಟ್‌ನಲ್ಲಿ ರಸ್ತೆ ವಿಸ್ತರಣೆ ಹಾಗೂ ಟೆನಲ್ ಬೈಪಾಸ್ ನಿರ್ಮಾಣ ಕಾಮಗಾರಿಗಳ ಸಂಬಂಧವು ಚರ್ಚೆಗಳು ನಡೆದಿದ್ದು, ಕೇಂದ್ರ ಸಕರಾತ್ಮಕವಾಗಿ ಸ್ಪಂದಿಸಿದೆ ಎಂದರು.
ರಾಜ್ಯದ ೪ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳನ್ನಾಗಿ ಮೇಲ್ದರ್ಜೆಗೇರಿಸಲು ಒಪ್ಪಿಗೆ ಸಿಕ್ಕಿದ್ದು, ಭಾರತ ಮಾಲಾ ಯೋಜನೆಯ ೨ನೇ ಹಂತದಲ್ಲಿ ಈ ೪ ಹೆದ್ದಾರಿಗಳು ರಾಷ್ಟ್ರೀಯ ಹೆದ್ದಾರಿಗಳಾಗಲಿವೆ ಎಂದು ಅವರು ಹೇಳಿದರು.
ರಾಜ್ಯದ ತುಮಕೂರು-ಚಿತ್ರದುರ್ಗ-ದಾವಣಗೆರೆ ಹಾಗೂ ಹುಬ್ಬಳ್ಳಿ-ಬೆಳಗಾವಿ ನೇರ ರೈಲು ಮಾರ್ಗ ನಿರ್ಮಾಣಕ್ಕೂ ಕೇಂದ್ರ ಒಪ್ಪಿಗೆ ನೀಡಿದೆ ಎಂದು ಅವರು ಹೇಳಿದರು.
ಈ ಯೋಜನೆಯ ಭೂಸ್ವಾಧೀನದ ಶೆ. ೫೦ರಷ್ಟು ವೆಚ್ಚವನ್ನು ರಾಜ್ಯಸರ್ಕಾರ ಭರಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಕೇಂದ್ರದ ಹಣಕಾಸು ಸಚಿವರನ್ನು ಭೇಟಿ ಮಾಡಿ ಜಿಎಸ್‌ಟಿ ಪರಿಹಾರವನ್ನು ಮುಂದುವರೆಸಲು ಮತ್ತೊಮ್ಮೆ ಮನವಿ ಮಾಡಿ, ಕೇಂದ್ರದ ನಬಾರ್ಡ್ ಮತ್ತು ಸಿರವಿ ಯೋಜನೆಯನ್ನು ಅನುಷ್ಠಾನಗೊಳಿಸಲು ಮನವಿ ಮಾಡಿದ್ದು, ಈ ಸಂಬಂಧ ಒಂದು ಸಭೆ ನಡೆದಿದೆ. ಮತ್ತೊಂದು ಸಭೆ ನಡೆಸಿ ಕೇಂದ್ರದ ಹಣಕಾಸು ಸಚಿವರೇ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅವರೇ ಇದರ ಕಾರ್ಯಾರಂಭಕ್ಕೆ ಚಾಲನೆ ನೀಡುವರು ಎಂದರು.
ದೆಹಲಿ ಭೇಟಿ ಸಂದರ್ಭದಲ್ಲಿ ರಾಜ್ಯದ ಬಾಕಿ ಇರುವ ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ಕೇಂದ್ರ ಸಕರಾತ್ಮಕವಾಗಿ ಶ್ರಮಿಸಿದೆ ಎಂದು ಅವರು ತಿಳಿಸಿದರು.

ಕಲಬುರಗಿ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಬಿಜೆಪಿಯವರೇ ಮೇಯರ್ ಆಗಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿದೆ. ಬಿಜೆಪಿಯವರೇ ಮೇಯರ್ ಆಗಲಿದ್ದಾರೆ ಎಂದು ಹೇಳಿದರು.
ಜೆಡಿಎಸ್ ಜತೆ ಬಿಜೆಪಿ ಮೈತ್ರಿ ಮಾಡಿಕೊಳ್ಳುತ್ತಿದೆಯೇ? ಇಲ್ಲವೇ ಎಂಬ ಬಗ್ಗೆ ಯಾವುದೇ ಗುಟ್ಟು ಬಿಟ್ಟು ಕೊಡದ ಅವರು, ಬಿಜೆಪಿಯವರು ಮೇಯರ್ ಆಗುತ್ತಾರೆ ಎಂದಷ್ಟೇ ಚುಟುಕಾಗಿ ಹೇಳಿದರು.

ದೆಹಲಿ ಭೇಟಿ ಸಂದರ್ಭದಲ್ಲಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಯಾವುದೇ ಚರ್ಚೆಗಳು ನಡೆದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಎರಡು ದಿನಗಳ ಹಿಂದೆ ದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರನ್ನು ಭೇಟಿ ಮಾಡಿದ್ದೆ. ಆದರೆ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಲಿಲ್ಲ ಎಂದರು.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರ ಆರೋಗ್ಯ ಸರಿಯಿರದ ಕಾರಣ ಹೆಚ್ಚಿನ ಚರ್ಚೆಗಳನ್ನು ಮಾಡಲು ಸಾಧ್ಯವಾಗಲಿಲ್ಲ ಎಂದರು.