ಹತ್ತು ವರ್ಷ ಪೂರೈಸಿದ ಹಿನ್ನೆಲೆ ಗುರುವಂದನಾ ಕಾರ್ಯಕ್ರಮ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಫೆ.25: ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾದ್ಯಕ್ಷರಾದ ಜಗದ್ಗುರು ಶ್ರೀಶ್ರೀಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ಪೀಠಾದ್ಯಕ್ಷರಾಗಿ ಹತ್ತು ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ದಿನಾಂಕ 02-03-2024 ರಂದು ಜಿಲ್ಲಾ ಒಕ್ಕಲಿಗರ ಸಂಘದ ವತಿಯಿಂದ ಮಂಡ್ಯದ ಅಂಬೇಡ್ಕರ್ ಭವನದಲ್ಲಿ ಗುರುವಂದನಾ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ತಿಮ್ಮೇಗೌಡ ತಿಳಿಸಿದರು.
ಅವರು ಪಟ್ಟಣದ ಪ್ರವಾಸಿಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಆದಿಚುಂಚನಗಿರಿ ಶ್ರೀ ಕ್ಷೇತ್ರಕ್ಕೆ ಪರಮಪೂಜ್ಯ ಜಗದ್ಗುರು, ಯುಗಯೋಗಿ, ಶ್ರೀಶ್ರೀಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿಗಳ ನಂತರ ಪೀಠಾದ್ಯಕ್ಷರಾಗಿ ನೇಮಕಗೊಂಡು ಶ್ರೀಕ್ಷೇತ್ರದ ಆಶೋತ್ತರಗಳನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಣೆ ಮಾಡುವ ಮೂಲಕ ಕ್ಷೇತ್ರದ ಹಿರಿಮೆಯನ್ನು ದೇಶವಿದೇಶಗಳಿಗೂ ಪಸರಿಸುತ್ತಾ ಸರ್ವಧರ್ಮೀಯರನ್ನೂ ಸಮನಾಗಿ ಕಾಣುವ ಶ್ರೀಶ್ರೀಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ಪೀಠಾದ್ಯಕ್ಷರಾಗಿ ನೇಮಕಗೊಂಡು ಹತ್ತು ವರ್ಷಗಳು ತುಂಬಿವೆ. ಇದರ ಅಂಗವಾಗಿ ಗುರುವಂದನಾ ಕಾರ್ಯಕ್ರಮ ಆಯೋಜಿಸಿದ್ದು ಈ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಪೂಜ್ಯ ಶ್ರೀಶ್ರೀ ಪುರುಷೋತ್ತಮಾನಂದ ಮಹಾಸ್ವಾಮಿಗಳು ಮತ್ತು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು ಭಾಗವಹಿಸಲಿದ್ದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ. ಅಲ್ಲದೇ ಜಿಲ್ಲೆಯ ಎಲ್ಲಾ ಶಾಸಕರನ್ನು ಅಭಿನಂದಿಸುವ ಮತ್ತು ಜಿಲ್ಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಲವರನ್ನು ಗುರುತಿಸಿ ಅವರುಗಳನ್ನು ಅಭಿನಂದಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ತಾಲ್ಲೂಕಿನಿಂದ ಒಕ್ಕಲಿಗ ಸಮುದಾಯದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಮಂಡ್ಯಕ್ಕೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಚಿತ್ರನಟ ದರ್ಶನ್ ಹೇಳಿಕೆಗೆ ಖಂಡನೆ:-
ಚಿತ್ರನಟ ದರ್ಶನ್ ಒಬ್ಬ ಪ್ರಸಿದ್ದ ನಟ. ರಾಜ್ಯಾದ್ಯಂತ ತಮ್ಮದೇ ಆದ ಅಭಿಮಾನಿಗಳನ್ನು ಹೊಂದಿದ್ದಾರೆ. ಆದರೆ ತಾವು ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು. ನಮ್ಮ ಸಮುದಾಯದ ಚಲನಚಿತ್ರ ನಿರ್ಮಾಪಕ ಹಾಗೂ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಉಮಾಪತಿಗೌಡರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ಅವರಿಗೆ ಶೋಭೆ ತರುವುದಿಲ್ಲ. ಅವರ ಹೇಳಿಕೆಯನ್ನು ಜಿಲ್ಲಾ ಒಕ್ಕಲಿಗರ ಸಂಘ ಖಂಡಿಸುತ್ತದೆ ಮುಂದಿನ ದಿನಗಳಲ್ಲಿ ಈ ತಪ್ಪು ಮರುಕಳಿಸದಂತೆ ದರ್ಶನ್ ನೋಡಿಕೊಳ್ಳಬೇಕು ಎಂದರು. ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ವಡ್ಡರಹಳ್ಳಿ ಮಹದೇವೇಗೌಡ ಮಾತನಾಡಿ ಮುಂದಿನ ತಿಂಗಳ ಎರಡನೇ ತಾರೀಖಿನ ಶನಿವಾರದಂದು ನಡೆಯಲಿರುವ ಗುರುವಂದನಾ ಹಾಗೂ ಅಭಿನಂದನಾ ಕಾರ್ಯಕ್ರಮಕ್ಕೆ ಹೋಗಿ ಬರಲು ಒಕ್ಕಲಿಗರ ಸಂಘದ ವತಿಯಿಂದ ವಾಹನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಆದ್ದರಿಂದ ತಾಲ್ಲೂಕಿನ ಒಕ್ಕಲಿಗ ಸಮುದಾಯದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಟಿಯಲ್ಲಿ ತಾಲ್ಲೂಕು ಒಕ್ಕಲಿಗರ ಸಂಘದ ಗೌರವಾದ್ಯಕ್ಷ ಟಿ.ವೈ.ಆನಂದ, ಉಪಾದ್ಯಕ್ಷ ನವೀನ್ ಗೌಡ, ಪಾಂಡವಪುರ ತಾಲ್ಲೂಕು ಅಧ್ಯಕ್ಷ ರಾಮಚಂದ್ರ, ಮಾಕವಳ್ಳಿ ಗ್ರಾಪಂ ಉಪಾದ್ಯಕ್ಷ ಎಂ.ಟಿ.ಮಂಜೇಗೌಡ, ಸಂಘಟನಾ ಕಾರ್ಯದರ್ಶಿ ಕುಪ್ಪಹಳ್ಳಿಮನು, ವರುಣ್‍ಗೌಡ, ಹೆಗ್ಗಡಹಳ್ಳಿ ರುದ್ರೇಶ್, ಪ್ರದೀಪ್, ಮಹೇಶ್, ಶ್ರೀನಿವಾಸ್, ಮಂಜು, ರಂಗಸ್ವಾಮಿ, ರಾಜು ಸೇರಿದಂತೆ ಹಲವರಿದ್ದರು.