ಹತ್ತು ವರ್ಷಗಳ ನಂತರ ಅಭಿವೃದ್ಧಿಯಾದ ರಸ್ತೆ

ಬಳ್ಳಾರಿ,ನ.21- ನಗರದ ಈ ರಸ್ತೆ ಕಳೆದು ಕಳೆದ ಹತ್ತು ವರ್ಷಗಳ ನಂತರ ಇದೀಗ ಅಭಿವೃದ್ಧಿಗೊಂಡಿದೆ. ರೂಪನಗುಡಿ ರಸ್ತೆಯ ಅಂಜಿನಪ್ಪ ಜಿನ್ ನಿಂದ ಬಾಪೂಜಿನಗರ ಸರ್ಕಲ್ ವರೆಗಿನ ಈ ರಸ್ತೆಯನ್ನು ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದು, ರಸ್ತೆಯ ಎರಡು ಕಡೆ ಚರಂಡಿ ನಿರ್ಮಿಸಲಾಗಿದ್ದು ಈಗ ಡಾಂಬರೀಕರಣ ಕಾರ್ಯ ಭರದಿಂದ ಸಾಗಿದೆ.
ಕಳೆದ ಹತ್ತು ವರ್ಷಗಳಿಂದ ಈ ರಸ್ತೆ ಹಾಳಾಗಿತ್ತು ದೊಡ್ಡ ದೊಡ್ಡ ಕುಣಿಗಳು ಬಿದ್ದು ವಾಹನಗಳ ಓಡಾಟಕ್ಕೆ ಸಂಕಷ್ಟ ತರುತ್ತಿತ್ತು. ಅಲ್ಲದೆ ಧೂಳು ಹೆಚ್ಚಿ ರಸ್ತೆಯ ಅಕ್ಕಪಕ್ಕದ ನಿವಾಸಿಗಳಿಗೆ, ವ್ಯಾಪಾರಿ ಮಳಿಗೆ ಮಾಲೀಕರಿಗೂ ಸಂಕಷ್ಟ ತಂದೊಡ್ಡುತ್ತಿತ್ತು. ಮಳೆ ಬಂದಾಗಲಂತೂ ಕುಣಿ ಎಲ್ಲಿ ಇದೆ ಎಂದು ಗೊತ್ತಾಗದೆ ರಸ್ತೆಯಲ್ಲಿ ಸಂಚರಿಸಿದ ಬೈಕ್ ಸವಾರರು ಬಿದ್ದು ಗಾಯಗೊಂಡಿದ್ದವರು ಅನೇಕರು. ಇದನ್ನು ನೋಡಲಾಗದೆ ಕರ್ನಾಟಕ ಜನ ಸೈನ್ಯ ಸಂಘಟನೆ ಕಲ್ಯಾಣ ಮಠದ ಶ್ರೀಗಳ ಸಮ್ಮುಖದಲ್ಲಿ ಹೋರಾಟ ನಡೆಸಿ ರಸ್ತೆ ಕಾಮಗಾರಿ ಕೈಗೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ. ಇದಕ್ಕೆ ನಗರ ಶಾಸಕ ಸೋಮಶೇಖರ ರೆಡ್ಡಿ ಮತ್ತು ಮಾಜಿ ಮೇಯರ್ ಇಬ್ರಾಹಿಂ ಬಾಬು ಅವರ ಪ್ರಯತ್ನವು ಇದೆ. ಈ ರಸ್ತೆಯಲ್ಲಿ ಎಂಥಹ ವಾಹನಗಳಿದ್ದರೂ ಭಯಪಡುತ್ತಿದ್ದ ರಸ್ತೆ ಇದೀಗ ಅಭಿವೃದ್ಧಿ ಆಗುತ್ತಿರುವುದು ಜನತೆಗೆ ಸಂತಸ ತಂದಿದೆ .