ಹತ್ತು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಬೇಕು: ಯಡಿಯೂರಪ್ಪ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ನ.20: ಈ ಸಮಾವೇಶವನ್ನು  ನೋಡಿ ಕಾಂಗ್ರೆಸ್ ಗೆ ಆಘಾತವಾಗಿದೆ. ನೀವು ಬಯಸಿದಂತೆ ಮೀಸಲಾತಿ ಪ್ರಮಾಣ ಹೆಚ್ಚಿಸಿದೆ.  ಮುಂಬರುವ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲಾ ಹತ್ತು ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಪಣ ತೊಡಬೇಕು ಎಂದು ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಇಂದಿಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು.  ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದೆ. ಇಡೀ ಸಮುದಾಯಕ್ಕೆ ನಾನು ಒಂದೇ ಒಂದು ಮನವಿ ಮಾಡಿಕೊಳ್ಳುತ್ತೇನೆ. ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಹತ್ತು ಕ್ಷೇತ್ರಗಳಿವೆ. ಆದರೆ ನಾವು ಗೆದ್ದಿದ್ದು ಕೇವಲ ಐದು ಸ್ಥಾನ. ಆದರೆ ಬರುವ ಚುನಾವಣೆಯಲ್ಲಿ ಹತ್ತಕ್ಕೆ ಹತ್ತೂ ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಿಸಬೇಕು.
ಎಸ್ಟಿ ಸಮುದಾಯದ ಅನೇಕ ವರ್ಷಗಳ ಹೋರಾಟ, ಬೇಡಿಕೆಯಾಗಿದ್ದ‌ ಮೀಸಲಾತಿ ಹೆಚ್ಚಿಸಿದ್ದು ಮಾತ್ರ ಬಿಜೆಪಿ ಸರ್ಕಾರ. ವಾಲ್ಮೀಕಿ ಸಮುದಾಯಕ್ಕೆ ಪ್ರತ್ಯೇಕ ಸಚಿವಾಲಯ, ಜಯಂತಿ, ಜಯಂತಿಗಾಗಿ ರಜೆ ಘೋಷಣೆ ಮಾಡಿದ್ದು ನಮ್ಮ ಸರ್ಕಾರ. ಸಣ್ಣ ಕೈಗಾರಿಕೆಗಳಿಗೆ ಶೇ. 50ರಷ್ಟು ಸಬ್ಸಿಡಿ ಸಿಗುತ್ತಿದೆ. ಈ ಹಿಂದೆ ನಾನು ಸಿಎಂ ಆಗಿದ್ದಾಗ ಶ್ರೀರಾಮುಲು ಮತ್ತು ಜನಾರ್ಧನರೆಡ್ಡಿ ಅವರು ಕೇಳಿದ ಪ್ರತಿಯೊಂದು ಕೆಲಸವನ್ನೂ ಮಾಡಿದ್ದೇನೆ. ಅದು ನಿಮಗೆಲ್ಲ ತಿಳಿದಿದೆ. ಹೀಗಾಗಿ ನಮ್ಮ ಅಭ್ಯರ್ಥಿಗಳನ್ನು ಎಲ್ಲಾ ಕ್ಷೆತ್ರಗಳಲ್ಲಿ ಗೆಲ್ಲಿಸಬೇಕು.
ಈ ಸಮಾವೇಶ ನೋಡಿ ಕಾಂಗ್ರೆಸ್ ನವರಿಗೆ ಆಘಾತವಾಗಿದೆ ಎನ್ನಬಹುದು. ಕಾಂಗ್ರೆಸ್ ನವರು ಅಧಿಕಾರದಲ್ಲಿ ಇದ್ದಾಗ ಬರೀ ಲೂಟಿ ಮಾಡಿದರು. ಇದನ್ನೇ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮೂರು ತಲೆಮಾರಿಗಾಗುಷ್ಟು ಹಣ ಮಾಡಿಕೊಂಡಿದ್ದೇವೆ ಎಂದು ಹೇಳಿದ್ದಾರೆ. ಬಿಜೆಪಿ ಅಂದರೆ ಅಭಿವೃದ್ಧಿ ಪರ ಪಕ್ಷ. ಕಾಂಗ್ರೆಸ್ ಎಂದರೆ ಲೂಟಿಕೋರ ಪಕ್ಷವಾಗಿದೆ. ಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ 150 ಸ್ಥಾನಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಿ ಅಧಿಕಾರಕ್ಕೆ ತರಬೇಕು. ಆ ಮೂಲಕ ಅಭಿವೃದ್ಧಿಗೆ ಬೆಂಬಲಿಸಬೇಕು ಎಂದರು.