ಹತ್ತಿ ರೈತರಿಗೆ ಆಗುತ್ತಿರುವ ಅನ್ಯಾಯ ತಪ್ಪಿಸಲು ಡಿಸಿ ತಕ್ಷಣ ಮಧ್ಯ ಪ್ರವೇಶಿಸಲಿ: ಟಿ.ಎನ್. ಭೀಮುನಾಯಕ ಆಗ್ರಹ

ಯಾದಗಿರಿ : ಜ.18 : ಹತ್ತಿ ಬೆಳೆ ಬೆಳೆದ ರೈತನಿಗೆ ದಲ್ಲಾಳಿಗಳಿಂದ ಆಗುತ್ತಿರುವ ಅನ್ಯಾಯ ತಪ್ಪಿಸಲು ಕೂಡಲೇ ವರ್ತಕರ ಸಭೆ ಕರೆದು ರಾಯಚೂರು ಮಾದರಿಯಲ್ಲಿ ಬೆಲೆ ನಿಗದಿ ಮಾಡುವಂತೆ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ಆಗ್ರಹಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಈಗಾಗಲೇ ರೈತರು ಸತತವಾಗಿ ಕೊವಿಡ್, ಅತಿವೃಷ್ಠಿಯಿಂದ ನಲುಗಿದ್ದು, ಅಲ್ಲದೇ ಈದೀಗ ಹತ್ತಿ ಬೀಜದಲ್ಲಿಯೂ ಮೋಸ ಅನುಭವಿಸಿ ಬಹುತೇಕ ನಷ್ಟ ಅನುಭವಿಸಿದ ರೈತರಿಗೆ ಈದೀಗ ಮಾರುಕಟ್ಟೆಯಲ್ಲಿ ಬೆಲೆ ಕುಸಿತದಿಂದ ತೊಂದರೆ ಅನುಭವಿಸುತ್ತಿದ್ದಾರೆ.

\ಸರ್ಕಾರ ಈ ಮಧ್ಯೆ ಖರೀದಿ ಕೇಂದ್ರಗಳನ್ನೂ ಸಹ ಆರಂಭಿಸದೇ ಇರುವುದರಿಂದ ರೈತರು ಇನ್ನಷ್ಟು ಸಂಕಷ್ಟಕ್ಕೆ ಒಳಗಾಗಿದ್ದು ಮದ್ಯವರ್ತಿಗಳು ಮನಸ್ಸೊ ಇಚ್ಛೆಗೆ ಖರೀದಿ ಮಾಡುತ್ತಿದ್ದಾರೆ ಎಂದು ಅವರು ದೂರಿದ್ದಾರೆ.

ಕಳೆದ ವರ್ಷ 12ಸಾವಿರ ರೂ. ಗೆ ಹತ್ತಿ ಮಾರಾಟ ಮಾಡಿದ ರೈತರಿಗೆ ಈ ಬಾರಿ 7000 ಇಲ್ಲವೇ 8ಸಾವಿರ ರೂ.ಗೆ ಮಾರಾಟ ಮಾಡುವ ಪರಿಸ್ತಿತಿ ನಿರ್ಮಾಣವಾಗಿದೆ.

ಇನ್ನು ಕೆಲವೆಡೆ ದಲ್ಲಾಳಿಗಳು ಹಾಗೂ ಗಂಜ್ ವರ್ತಕರಿಂದ ಇದಕ್ಕೂ ಕಮ್ಮಿ ಬೆಲೆಗೆ ಮಾರಾಟ ಮಾಡುತ್ತಿರುವುದು ನಡೆದಿದೆ.

ಇದನ್ನು ತಪ್ಪಿಸಲು ರಾಯಚೂರು ಜಿಲ್ಲಾಧಿಕಾರಿಗಳು ವರ್ತಕರೊಂದಿಗೆ ಚರ್ಚಿಸಿ ಬೆಲೆ ನಿಗದಿಪಡಿಸಿದ್ದು, 9500/- ಗೆ ಖರೀದಿಸುವಂತೆ ವರ್ತಕರ ಸಭೆಯಲ್ಲಿ ನಿರ್ಣಯಿಸಿರುವುದು ಮಾದರಿಯಾಗಿದೆ. ಇದೇ ಮಾದರಿಯಲ್ಲಿ ಯಾದಗಿರಿ ಜಿಲ್ಲಾಧಿಕಾರಿಗಳು ತಕ್ಷಣ ಸಭೆ ಕರೆದು ಬೆಲೆ ನಿಗದಿಪಡಿಸಿದಲ್ಲಿ ರೈತರಿಗೆ ಅನ್ಯಾಯ ಆಗುವುದು ತಪ್ಪುತ್ತದೆ ಎಂದು ಅವರು ಸಲಹೆ ನೀಡಿದ್ದಾರೆ.

ಕಳೆದ ವರ್ಷದ ಬೆಲೆಗೆ ಹೋಲಿಸಿದರೆ ಈ ವರ್ಷ ಹೆಚ್ಚಳವಾಗಬೇಕು ಅದರೆ ಇನ್ನಷ್ಟು ಕುಸಿತವಾಗಿರುವುದು ನೋಡಿದರೆ ದಲ್ಲಾಳಿಗಳ ಕೈವಾಡ ಎದ್ದು ಕಾಣುತ್ತದೆ ಇದಲ್ಲದೇ ಬರುವ ದಿನಗಳಲ್ಲಿ ಹತ್ತಿ ಬೆಲೆ ಹೆಚ್ಚಳವಾಗುವುದರ ಹಿನ್ನೆಲೆಯಲ್ಲಿ ಕ್ವಿಂಟಾಲ್ ಗೆ 11ಸಾವಿರ ರೂ. ನಿಗದಿಪಡಿಸುವಂತೆ ಅವರು ಜಿಲ್ಲಾದಿಕಾರಿಗಳಿಗೆ ಒತ್ತಾಯಿಸಿದ್ದಾರೆ.

ಸರ್ಕಾರ ಮತ್ತು ಜಿಲ್ಲಾಡಳಿತ ರೈತರೇ ಬೆನ್ನೆಲುಬು ಎಂದು ಹೇಳುವುದಷ್ಟೇ ಆಗಿದ್ದು ಕೃತಿಯಲ್ಲಿ ಮಾಡುವುದು ಇಲ್ಲವಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದು ಕೂಡಲೇ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದ್ದಾರೆ. ಇಲ್ಲವಾದಲ್ಲಿ ರೈತರೊಂದಿಗೆ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಕರವೇ ಮುಖಂಡರಾದ ಮಲ್ಲು ಮಾಳಿಕೇರಿ, ಅಂಬ್ರೇಷ್ ಹತ್ತಿಮನಿ, ಸಿದ್ದು ನಾಯಕ ಹತ್ತಿಕುಣಿ, ವಿಶ್ವಾರಾಧ್ಯ ದಿಮ್ಮೆ, ಸಾಹೇಬಗೌಡ ನಾಯಕ, ಸುರೇಶ ಬೆಳಗುಂದಿ, ಮೌನೇಶ ಮಾಧ್ವಾರ, ಸೈದಪ್ಪ ಗೌಡಗೇರಾ ಸೇರಿದಂತೆ ಇನ್ನಿತರರು ಎಚ್ಚರಿಸಿದ್ದಾರೆ.