ಹತ್ತಿ, ಭತ್ತ ಖರೀದಿ ಕೇಂದ್ರ ಆರಂಭವಾಗಲಿ

??????

ಬಾಬುಅಲಿ ಕರಿಗುಡ್ಡ
ದೇವದುರ್ಗ: ರೈತರು ಬೆಳೆದ ವಿವಿಧ ಧಾನ್ಯಗಳನ್ನು ಬೆಂಬಲ ಬೆಲೆಯೊಂದಿಗೆ ಖರೀದಿ ಮಾಡುವ ಭತ್ತ, ಹತ್ತಿ ಹಾಗೂ ತೊಗರಿ ಖರೀದಿ ಕೇಂದ್ರ ಪ್ರಾರಂಭ ಯಾವಾಗ ಎನ್ನುವ ಪ್ರಶ್ನೆ ಎದ್ದಿದೆ.
ಶೇ.೮೦ ನೀರಾವರಿ ಪ್ರದೇಶ ಹೊಂದಿರುವ ತಾಲೂಕು ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಬಹುತೇಕ ಬೆಳೆಗಳು ಹಾಗೂ ನಾಟಿ ಮಾಡಿದ ಭತ್ತ ರಾಶಿಗೆ ಬಂದಿವೆ. ವಾರದಿಂದ ಭತ್ತ ಕಟಾವು ಕಾರ್ಯ ಆರಂಭವಾಗಿದೆ. ಹಾಲಿನ ಕೆನೆಯಂತೆ ಹತ್ತಿ ತೊಳಿ ಒಡೆದು ನಿಂತಿದ್ದು, ಬಿಡಿಸುವ ಕೆಲಸ ಭರದಿಂದ ಸಾಗಿದೆ.
ಎರಡ್ಮೂರು ಬೆಳೆಗಳು ರಾಶಿ ಹಂತಕ್ಕೆ ಬಂದರೂ ಸರ್ಕಾರ ಖರೀದಿ ಕೇಂದ್ರದ ಬಗ್ಗೆ ಮಾಹಿತಿ ನೀಡಿಲ್ಲ. ಕಳೆದ ವರ್ಷ ಆರಂಭಿಸಿದ ಭತ್ತ, ತೊಗರಿ ಹಾಗೂ ಹತ್ತಿ ಖರೀದಿ ಕೇಂದ್ರದಲ್ಲಿ ಭರ್ಜರಿ ವ್ಯಾಪಾರವಾಗಿತ್ತು. ರೈತರು ಮಾತ್ರವಲ್ಲ ಗುತ್ತಿಗೆ ಪಡೆದ ಕಂಪನಿಗಳಿಗೂ ಉತ್ತಮ ಲಾಭ ಪಡೆದಿದ್ದವು.
ನಾರಾಯಣಪುರ ಬಲದಂಡೆ ನಾಲೆ ಹಾಗೂ ಕೃಷ್ಣಾ ನದಿ ನೀರಿನಿಂದ ನಾಟಿ ಮಾಡಿದ ಭತ್ತ ಹಾಗೂ ಹತ್ತಿ ಸದ್ಯ ಸಮೃದ್ಧವಾಗಿ ಇಳುವರಿ ಬಂದಿದ್ದು, ಭತ್ತದ ರಾಶಿ ಹಾಗೂ ಹತ್ತಿ ಬಿಡಿಸುವ ಕಾರ್ಯ ನಡೆದಿದೆ. ಈ ಹಂತದಲ್ಲಿ ಖರೀದಿ ಕೇಂದ್ರ ಆರಂಭಿಸಿದರೆ ರೈತರಿಗೆ ಅನುಕೂಲವಾಗಲಿದ್ದು, ಮುಕ್ತ ಮಾರುಕಟ್ಟೆಯಲ್ಲಿ ಬೆಲೆಯೂ ಹೆಚ್ಚಾಗಲಿದೆ.
ಖರೀದಿ ಕೇಂದ್ರ ಆರಂಭಿಸಿ, ಬೆಲೆ ನಿಗದಿ ಮಾಡುವಂತೆ ರೈತರು ಒತ್ತಾಯ ಮಾಡಿದರೂ ಸರ್ಕಾರ ಕಿವಿಗೆ ಹಾಕಿಕೊಂಡಿಲ್ಲ. ಖರೀದಿ ಕೇಂದ್ರ ಆರಂಭಿಸಿದರೆ, ೧೫-೨೦ದಿನಗಳ ಮುಂಚೆ ರೈತರು ಅಗತ್ಯ ದಾಖಲೆ ನೀಡಿ ಹೆಸರು ನೋಂದಾಯಿಸಿಕೊಳ್ಳಬೇಕು. ನಂತರ ಖರೀದಿ ಪ್ರಕ್ರಿಯೆ ನಡೆಯಲಿದೆ. ನಿರ್ಲಕ್ಷ್ಯ ಮಾಡಿದರೆ ರೈತರು ಬೆಳೆದ ಬೆಳೆಗಳು ಕಡಿಮೆ ಬೆಲೆಗೆ ಬೀಕರಿಯಾಗುವ ಸಾಧ್ಯತೆಯಿದೆ.
ಸಾವಿರಾರು ಹೆಕ್ಟೇರ್‌ನಲ್ಲಿ ನಾಟಿ:
ಎನ್‌ಆರ್‌ಬಿಸಿ ಹಾಗೂ ಕೃಷ್ಣಾ ನದಿ ನೀರಿನಿಂದ ತಾಲೂಕಿನ ೪ಹೋಬಳಿಯಲ್ಲಿ ಸಾವಿರಾರು ಹೆಕ್ಟೇರ್‌ನಲ್ಲಿ ಭತ್ತನಾಟಿ ಹಾಗೂ ಹತ್ತಿ ಬಿತ್ತನೆಯಾಗಿದೆ. ದೇವದುರ್ಗ ೫೦೯೭ಹೆಕ್ಟೇರ್, ಗಬ್ಬೂರು ೭೧೪೦, ಜಾಲಹಳ್ಳಿ ೯೬೫೭, ಅರಕೇರಾ ೭೨೧೭ ಹೋಬಳಿ ಸೇರಿ ೨೯,೦೨೧ಹೆಕ್ಟೇರ್‌ನಲ್ಲಿ ಭತ್ತ ನಾಟಿಯಾಗಿದೆ. ದೇವದುರ್ಗ ೧೯೬೭೬, ಗಬ್ಬೂರು ೧೪೫೯೪, ಜಾಲಹಳ್ಳಿ ೪೫೩೨, ಅರಕೇರಾ ಹೋಬಳಿಯಲ್ಲಿ ೧೧೪೯೧ ಸೇರಿ ೫೦೨೯೩ಹೆಕ್ಟೇರ್‌ನಲ್ಲಿ ಹತ್ತಿ ಬಿತ್ತನೆಯಾಗಿದೆ.

ಕೋಟ್=======
ರಾಶಿ ಹಂತದಲ್ಲೇ ಭತ್ತ ಹಾಗೂ ಹತ್ತಿ ಖರೀದಿ ಕೇಂದ್ರ ಆರಂಭಿಸಬೇಕು. ಇದರಿಂದ ರೈತರಿಗೆ ಅನುಕೂಲವಾಗಲಿದ್ದು, ಖಾಸಗಿ ಕಂಪನಿಗಳ ಸುಲಿಗೆ ನಿಲ್ಲಲಿದೆ. ಕೇಂದ್ರ ಆರಂಭಿಸಿದ ೧ತಿಂಗಳ ನಂತರ ಖದೀದಿ ನಡೆಯಲಿದೆ.
ಉಮಾಪತಿಗೌಡ
ನಗರಗುಂಡದ ರೈತ
ಕೋಟ್======
ಭತ್ತ ಹಾಗೂ ಹತ್ತಿ ಖರೀದಿ ಕೇಂದ್ರ ತೆರೆಯುವ ಬಗ್ಗೆ ಸರ್ಕಾರದಿಂದ ಆದೇಶ ಬಂದಿಲ್ಲ. ಖರೀದಿ ಕೇಂದ್ರ ತೆರೆಯಬೇಕು ಎನ್ನುವ ಬೇಡಿಕೆಯಿದೆ. ಕಳೆದ ವರ್ಷ ಹತ್ತಿ ಖರೀದಿ ಕೇಂದ್ರ ಆರಂಭಿಸಿದ್ದರಿಂದ ರೈತರಿಗೆ ಉತ್ತಮ ಬೆಲೆ ಲಭ್ಯವಾಗಿತ್ತು. ಡಿಸಿ ಸಭೆ ಕರೆಯುವ ಸಾಧ್ಯತೆಯಿದೆ.

| ಮಧುರಾಜ್ ಯಾಳಗಿ

ತಹಸೀಲ್ದಾರ್

೦೯-ಡಿವಿಡಿ-೧

೦೯-ಡಿವಿಡಿ-೨