ಹತ್ತಿ ಬೆಳೆಗೆ ಬಂತು ಬಂಪರ್ ಬೆಲೆ


ದೇವದುರ್ಗ.ನ.೨೫- ತಾಲೂಕಿನ ರೈತರು ಬೆಳೆದ ಹತ್ತಿ ಬೆಳೆಗೆ ಮಾರುಕಟ್ಟೆಯಲ್ಲಿ ಬಂಪರ್ ಬೆಲೆ ಕೂಡಿಬಂದಿದೆ. ಅಧಿಕ ಖರ್ಚು ಹಿಡಿಯುವ ಭತ್ತದಿಂದ ಬೇಸತ್ತ ರೈತರು ಕಾಟನ್ ನಂಬಿದ್ದು, ಹತ್ತಿ ಬೆಳೆ ಕೃಷಿಕರ ಕೈಹಿಡಿದಿದೆ.
ಎಕರೆಗೆ ೧೦-೧೨ಕ್ವಿಂಟಾಲ್ ಬರುತ್ತಿದೆ. ಬೆಲೆಕೂಡ ಹೆಚ್ಚಾಗಿದ್ದು, ರೈತರ ಮೊಗದಲ್ಲಿ ನಗು ಮೂಡಿದೆ. ಅಕ್ಟೋಬರ್ ಕೊನೇವರೆಗೆ ಪ್ರತಿಕ್ವಿಂಟಾಲ್ ೮೦೦೦ರಿಂದ ೮೭೦೦ರೂ.ವರೆಗೆ ಮಾರಾಟವಾಗಿದೆ. ನವೆಂಬರ್ ಮೊದಲ ವಾರಕ್ಕೆ ೮೫೦೦ರೂ. ಸಮೀಪಿಸಿದ್ದು, ಸದ್ಯ ೮೨೦೦ರೂ. ಬೆಲೆಯಿದೆ. ಈ ಬೆಲೆ ಡಿಸೆಂಬರ್‌ವರೆಗೆ ಇದ್ದರೆ ರೈತರಿಗೆ ದ್ವಿಗುಣ ಆದಾಯ ಬರುವ ನಿರೀಕ್ಷೆಯಿದೆ.
ಹತ್ತಿಗೆ ಇತಿಹಾಸದಲ್ಲೆ ಈ ಬೆಲೆ ಎಂದೂ ಸಿಕ್ಕಿಲ್ಲ. ಕೆಲ ವರ್ಷಗಳ ಹಿಂದೆಗೆ ಕ್ವಿಂಟಾಲ್‌ಗೆ ೭೨೦೦ರೂ. ಸಿಕ್ಕಿದ್ದೆ ದೊಡ್ಡ ದಾಖಲೆ. ಈಗ ೮೭೦೦ರೂ.ವರೆಗೆ ಏರಿಕೆಯಾಗಿದೆ ದಾಖಲೆ ಮುರಿದಿದೆ.
ಎನ್‌ಆರ್‌ಬಿಸಿ ಹಾಗೂ ಕೃಷ್ಣಾ ನದಿ ನೀರಿನಿಂದ ತಾಲೂಕಿನಲ್ಲಿ ಅತಿಹೆಚ್ಚು ೫೬,೨೯೦ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬಿತ್ತನೆ ಮಾಡಲಾಗಿದೆ. ಪ್ರತಿಎಕರೆಗೆ ಬಿತ್ತನೆ ಬೀಜ, ಗೊಬ್ಬರ, ನಾಟಿ, ಕ್ರಿಮಿನಾಶಕ ಹಾಗೂ ಕೂಲಿಕಾರರ ಕೂಲಿ ಸೇರಿ ೩೦-೩೫ಸಾವಿರ ರೂ. ಖರ್ಚು ಮಾಡಿದ್ದಾರೆ. ಎಕರೆಗೆ ೮-೧೦ ಕ್ವಿಂಟಾಲ್ ಇಳುವರಿ ಬಂದರೂ ಲಾಭವಾಗಲಿದೆ ಎನ್ನುತ್ತಾರೆ ಕೃಷಿಕರು.
ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇರುವ ಕಾರಣ ರಾಜ್ಯ ಸರ್ಕಾರ ಹತ್ತಿ ಖರೀದಿ ಕೇಂದ್ರ ಆರಂಭಿಸಿಲ್ಲ. ಎರಡು ವರ್ಷಗಳ ಹಿಂದೆ ತಾಲೂಕಿನಲ್ಲಿ ಒಂದು ಕಡೆ ಖರೀದಿ ಕೇಂದ್ರ ಆರಂಭಿಸಿತ್ತು. ಆದರೆ ಕಳೆದ ವರ್ಷ ಮತ್ತು ಈ ವರ್ಷ ಖರೀದಿ ಕೇಂದ್ರ ಆರಂಭಿಸಿಲ್ಲ. ಖರೀದಿ ಕೇಂದ್ರ ಆರಂಭಿಸಿ ಬೆಂಬಲ ಬೆಲೆ ನೀಡಿದರೆ, ಹತ್ತಿಯ ಬೆಲೆ ಮತ್ತಷ್ಟು ಹೆಚ್ಚಾಗಲಿದೆ. ಈ ಹಿನ್ನೆಲೆಯಲ್ಲಿ ಖರೀದಿ ಕೇಂದ್ರ ಆರಂಭಿಸಬೇಕು ಎನ್ನುವ ಒತ್ತಾಯ ರೈತ ಸಮುದಾಯದಿಂದ ಕೇಳಿಬರುತ್ತಿದೆ.
ಪ್ರತಿವರ್ಷ ಕಾಟನ್‌ಗೆ ೪೫೦೦ರಿಂದ ೬ಸಾವಿರರೂ.ವರೆಗೆ ಬೆಲೆಯಿರುತ್ತದೆ. ಆದರೆ, ಈ ವರ್ಷ ದುಪ್ಪಟ್ಟಾಗಿದೆ. ಅತಿಮಳೆ, ನೆರೆ, ಬಿತ್ತನೆ ಭೂಪ್ರದೇಶ ಇಳಿಕೆ ಹಾಗೂ ರಫ್ತು ಪ್ರಮಾಣ ಹೆಚ್ಚಳ ಬೆಲೆ ಏರಿಕೆ ಕಾರಣ ಎನ್ನಲಾಗಿದೆ. ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ್ ಸೇರಿ ಉತ್ತರ ಭಾರತದಲ್ಲಿ ಅತಿಯಾದ ಮಳೆ ಹಾಗೂ ನೆರೆಯಿಂದ ಹತ್ತಿ ಬೆಳೆಗೆ ಹೊಡೆತಬಿದ್ದಿದೆ. ಜತೆಗೆ ವಿದೇಶಕ್ಕೆ ರಫ್ತು ಪ್ರಮಾಣ ಹೆಚ್ಚಾಗಿದೆ. ಕಳೆದವರ್ಷ ಕರ್ನಾಟಕದಲ್ಲಿ ಅತಿಯಾಗಿ ಮಳೆಯಾಗಿ ನೀರುನಿಂತು ಹತ್ತಿಬೆಳೆ ನಷ್ಟವಾಗಿತ್ತು. ಇದರಿಂದ ಬೇಸತ್ತಿದ್ದ ರೈತರು ಬೇರೆಬೆಳೆ ಬೆಳೆದಿದ್ದರು. ಜತೆಗೆ ಹತ್ತಿ ಬೀಜದ ಬೆಲೆ ಏರಿಕೆಯಿಂದ ಬಿತ್ತನೆ ಪ್ರದೇಶ ಇಳಿಕೆಯಾಗಿ ಬೆಲೆ ಏರಿಕೆಯಾಗಿದೆ.
ಬಾಕ್=====
ಅವೈಜ್ಞಾನಿಕ ವಾರಬಂಧಿ?
ಒಂದೆಡೆ ತಾಲೂಕಿನಲ್ಲಿ ಹತ್ತಿ, ತೊಗರಿ, ಭತ್ತ, ಮೆಣಸಿನಕಾಯಿ ಉತ್ತಮವಾಗಿ ಬೆಳೆದಿದ್ದು, ಫಸಲು ಹಿಡಿಯುವ ಹಂತದಲ್ಲಿ ನಾರಾಯಣಪುರ ಬಲದಂಡೆ ನಾಲೆಗೆ ಅವೈಜ್ಞಾನಿಕ ವಾರಬಂಧಿ ಹಾಕಿರುವುದು ಅನ್ನದಾತರ ಆಕ್ರೋಶಕ್ಕೆ ಕಾರಣವಾಗಿದೆ. ಬೆಂಗಳೂರಿನಲ್ಲಿ ನಡೆದ ಐಸಿಸಿ ಸಭೆಯಲ್ಲಿ ನ.೨೩ರಿಂದ ನೀರು ಬಂದ್ ಮಾಡಿ, ಡಿ.೧೨ಕ್ಕೆ ಹರಿಸುವುದಾಗಿ ತಿಳಿಸಿದೆ. ಇದರ ನಡುವೆ ೧೯ದಿನ ನೀರು ಬಂದ್‌ಆಗಲಿದ್ದು, ನೀರಿನ ಕೊರತೆಯಿಂದ ಹತ್ತಿ, ಮೆಣಸಿನಕಾಯಿ ಬೆಳೆಗೆ ಭಾರಿ ಹೊಡೆತ ಭೀಳಲಿದೆ. ಅಲ್ಲದೆ ೮ದಿನದ ಬದಲಿಗೆ ೧೦ದಿನ ವಾರಬಂಧಿ ಹಾಕಿದ್ದು, ಕೂಡ ಅವೈಜ್ಞಾನಿಕ. ಹೀಗಾಗಿ ಏನೇ ವಾರಬಂಧಿ ಹಾಕಿದರೂ ೭ದಿನ ಮೀರಬಾರದು. ಈ ಬಗ್ಗೆ ನೀರಾವರಿ ಇಲಾಖೆ ಅಧಿಕಾರಿಗಳು ಮರುಪರಿಶೀಲನೆ ಮಾಡಬೇಕು ಎಂದು ಕೃಷಿಕರು ಒತ್ತಾಯಿಸಿದ್ದಾರೆ.

ಕೋಟ್======
ಹತ್ತಿ ಕ್ವಿಂಟಾಲ್‌ಗೆ ೮೪೦೦ರಿಂದ ೮೭೦೦ರೂ.ರವರೆಗೆ ಮಾರಾಟವಾಗಿದೆ. ಬೆಳೆ ಪೂರ್ತಿಯಾಗಿ ಕೈಸೇರಲು ಜನವರಿವರೆಗೆ ಸಮಯಹಿಡಿಯಲಿದೆ. ಅಲ್ಲಿವರೆಗೆ ಇದೇ ಬೆಲೆಯಿದ್ದರೆ, ರೈತರಿಗೆ ಅನುಕೂಲವಾಗಲಿದೆ. ಇದರಂತೆ ಉಳಿದ ಬೆಳೆಗಳ ಬೆಲೆ ಹೆಚ್ಚಾಗಬೇಕು. ಅಲ್ಲದೆ ಸರ್ಕಾರ ಖರೀದಿ ಕೇಂದ್ರ ತೆರೆದು ಬೆಂಬಲ ಬೆಲೆ ನೀಡಿ ೧೦ಸಾವಿರ ರೂ.ಗೆ ಕ್ವಿಂಟಾಲ್ ಬೆಲೆಯಲ್ಲಿ ಖರೀದಿಸಬೇಕು.
ಉಮಾಪತಿಗೌಡ
ನಗರಗುಂಡ ಗ್ರಾಮ ರೈತ

ಕೋಟ್======
ಐಸಿಸಿ ಸಭೆಯಲ್ಲಿ ಕೈಗೊಂಡ ತೀರ್ಮಾನ ನಾವು ಬದಲಾವಣೆ ಮಾಡಲು ಬರುವುದಿಲ್ಲ. ಇದು ಸರ್ಕಾರ ಮಟ್ಟದಲ್ಲಿ ಆಗಬೇಕಾದ ನಿರ್ಧಾರ. ನ.೨೩ರಿಂದ ಮೊದಲ ಬೆಳೆಗೆ ಬಂದ್ ಮಾಡಿ, ಡಿ.೧೨ಕ್ಕೆ ಎರಡನೇ ಬೆಳೆಗೆ ನೀರು ಬಿಡಲಾಗುವುದು.
ಪ್ರಕಾಶ ಮುದಗಲ್
ನಾರಾಯಣಪುರ ಬಲದಂಡೆ ನಾಲೆ ಎಇಇ

೨೫ಡಿವಿಡಿ೧

೨೫ಡಿವಿಡಿ೨