ರಾಯಚೂರು,ಅ.೧೨ – ಎಪಿಎಂಸಿ ಗೆ ಬರುತ್ತಿರುವ ಹತ್ತಿ ಬೆಲೆಯನ್ನು ೫ ಸಾವಿರ ರೂ. ಕ್ವಿಂಟಾಲ್ ಗೆ ಮಾರಾಟವಾಗುತ್ತಿದ್ದು ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಅದಕ್ಕಾಗಿ ಸರಕಾರ ಹತ್ತಿ ಖರೀದಿ ಕೇಂದ್ರ ತೆರೆದು ಕೇಂದ್ರ ಸರ್ಕಾರ ನಿಗದಿಪಡಿಸಿದ ಬೆಂಬಲ ಬೆಲೆ ೬೨೦೦ ರೂ. ಗೆ ರಾಜ್ಯ ಸರ್ಕಾರ ೨೦೦೦ ಸೇರಿಸಿ ಒಟ್ಟು ಕ್ವಿಂಟಾಲ್ ಗೆ ೮೨೦೦ ರೂ ರೈತರ ಹತ್ತಿಯನ್ನು ಖರೀದಿ ಮಾಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ( ಚುಕ್ಕಿ ನಂಜುಂಡಸ್ವಾಮಿ ಬಣ) ಜಿಲ್ಲಾಧ್ಯಕ್ಷ ಲಕ್ಷ್ಮಣಗೌಡ ಕಡಗಂದೊಡ್ಡಿ ಆಗ್ರಹಿಸಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಎಪಿಎಂಸಿಯಲ್ಲಿ ಕ್ವಿಂಟಾಲ್ ಗೆ ಒಂದು ಕೆ.ಜಿ ಹತ್ತಿ ಕಡಿತಗೊಳಿಸುವ ಪದ್ದತಿಯನ್ನು ಕೈಬಿಡಬೇಕು. ಇಲ್ಲದಿದ್ದರೆ ಹೋರಾಟದ ಹಾದಿ ತುಳಿಯಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು ಕೇವಲ ನಾಮ ಕಾ ವಾಸ್ತೆ ಹತ್ತಿ ಖರೀದಿ ಕೇಂದ್ರ ತೆರೆಯದಂತೆ ಸಲಹೆ ನೀಡಿದರು.
ರಾಜ್ಯದಾದ್ಯಂತ ಭೇಟಿ ನೀಡಿರುವ ಕೇಂದ್ರ ಬರಗಾಲ ಅಧ್ಯಯನ ತಂಡ ರಾಯಚೂರು ಜಿಲ್ಲೆಗೆ ಬರದಿರುವುದು ಖೇದಕರ ಸಂಗತಿ. ಬರಗಾಲ ಅಧ್ಯಯನ ತಂಡ ರಾಯಚೂರು ಜಿಲ್ಲೆ ಆಗಮಿಸಿ ಇಲ್ಲಿನ ವಸ್ತುಸ್ಥಿತಿಗನುಗುಣವಾಗಿ ಪರಿಹಾರ ನೀಡುವ ಕೆಲಸ ಮಾಡಬೇಕೆಂದು ಆಗ್ರಹಿಸಿದ ಅವರು, ಕೊನೆ ಭಾಗದ ರೈತರು ನೀರಿಗಾಗಿ ನಡೆಸುತ್ತಿರುವ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲ ಇದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಕ್ಕಮ್ಮ ತಲಮಾರಿ, ಅಬ್ದುಲ್ ಮುಜೀಬ್, ನರಸಪ್ಪ ಯಾದವ, ಹುಚ್ಚಪ್ಪನಾಯಕ ಕಕ್ಕೇರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.