ಹತ್ತಿ ಖರೀದಿ ಕೇಂದ್ರ ಆರಂಭಿಸಲು ಕರೆಮ್ಮ ಒತ್ತಾಯ

ದೇವದುರ್ಗ.ಜ.೦೫- ಅತಿವೃಷ್ಟಿ, ಅನಾವೃಷ್ಟಿಯಿಂದ ಬಳಲಿದ ದೇವದುರ್ಗ ತಾಲೂಕಿನ ರೈತರಿಗೆ ಹತ್ತಿ ಬೆಲೆ ಇಳಿಕೆಯಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೂಡಲೇ ರಾಜ್ಯ ಸರ್ಕಾರ ಮಧ್ಯಪ್ರವೇಶ ಮಾಡಿ ಎಲ್ಲ ತಾಲೂಕು ಹಾಗೂ ಹೋಬಳಿ ಕೇಂದ್ರಗಳಲ್ಲಿ ಹತ್ತಿ ಖರೀದಿ ಕೇಂದ್ರ ತಕ್ಷಣವೇ ಆರಂಭಿಸಿ ಕ್ವಿಂಟಾಲ್‌ಗೆ ೧೨ಸಾವಿರ ರೂ.ನಂತೆ ಖರೀದಿ ಮಾಡಬೇಕು ಎಂದು ಕಲ್ಯಾಣ ಕರ್ನಾಟಕ ಜೆಡಿಎಸ್ ವೀಕ್ಷಕಿ ಹಾಗೂ ನಿಯೋಜಿತ ಜೆಡಿಎಸ್ ಅಭ್ಯರ್ಥಿ ಕರೆಮ್ಮ ಜಿ.ನಾಯಕ ಒತ್ತಾಯಿಸಿದರು.
ಪಟ್ಟಣದ ತಮ್ಮ ನಿವಾಸದಲ್ಲಿ ಕರೆದಿದ್ದು ಸುದ್ದಿಗೋಷ್ಠಿ ಉದ್ದೇಶಿಸಿ ಗುರುವಾರ ಮಾತನಾಡಿದರು. ಆರಂಭದಲ್ಲಿ ಹತ್ತಿ ಬೆಲೆ ಉತ್ತಮವಾಗಿದ್ದು, ಈಗ ದಿಢೀರನೆ ಕುಸಿದಿದೆ. ಇದರಿಂದ ರೈತರಿಗೆ ದೊಡ್ಡ ಮಟ್ಟದ ನಷ್ಟವಾಗುತ್ತಿದೆ. ಆಂಧ್ರ ಪ್ರದೇಶ, ತೆಲಂಗಾಣ ಸೇರಿ ವಿವಿಧೆಡೆ ಹತ್ತಿ ಬೆಲೆ ಉತ್ತಮ ಸ್ಥಿತಿಯಲ್ಲಿದೆ. ಆದರೆ, ರಾಜ್ಯದಲ್ಲಿ ದಲ್ಲಾಳಿಗಳ ಹಾವಳಿಯಿಂದ ಹತ್ತಿ ಬೆಲೆ ಪಾತಾಳ ಕಂಡಿದೆ. ಕ್ವಿಂಟಾಲ್‌ಗೆ ೭೫೦೦ರಿಂದ ೮೦೦೦ರೂ. ಬೆಲೆ ಇಳಿಕೆಯಾಗಿದ್ದು, ಇದರಿಂದ ರೈತರಿಗೆ ಮಾಡಿದ ಖರ್ಚು ಸಹ ಬಾರದ ಸ್ತಿತಿಯಿದೆ.
ರಾಜ್ಯ ಸರ್ಕಾರ ಖರೀದಿ ಕೇಂದ್ರ ಆರಂಭಿಸದೆ ರೈತರಿಗೆ ವಂಚನೆ ಮಾಡುತ್ತಿದೆ. ಕಳೆದ ವರ್ಷ ಕೂಡ ಖರೀದಿ ಕೇಂದ್ರ ಆರಂಭಿಸಿಲ್ಲ. ರೈತರು ಬೆಳೆ ಮಾರಿದ ನಂತರ ನಾಮ್‌ಕೆ ಅವಸ್ತೆ ಎನ್ನುವಂತೆ ಕಡಲೆ, ತೊಗರಿ ಖರೀದಿ ಕೇಂದ್ರ ತೆರೆಯುತ್ತಾರೆ. ಆದರೆ, ಹತ್ತಿ ಕೇಂದ್ರ ಖರೀದಿ ಮಾಡದ ಕಾರಣ ರೈತರು ಕಡಿಮೆ ಬೆಲೆಗೆ ಹತ್ತಿ ಮಾರಾಟ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ರೈತರ ವಿಷಯದಲ್ಲಿ ನಿರ್ಲಕ್ಷ್ಯ ಭಾವನೆ ಹೊಂದಿದ್ದು, ಇದರಿಂದ ಅನ್ನದಾತರು ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಹತ್ತಿ ಬೆಲೆ ಇಳಿಕೆಯಾದ ಬಗ್ಗೆ ಕಾಂಗ್ರೆಸ್ ನಾಯಕರು ಒಂದೇ ಒಂದು ಮಾತು ಆಡುತ್ತಿಲ್ಲ. ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕರು ತುಟಿಯೇ ಬಿಚ್ಚುವುದಿಲ್ಲ. ಜೆಡಿಎಸ್ ಮಾತ್ರ ರೈತರ ಪರ ಧ್ವನಿ ಎತ್ತಿ ಹೋರಾಟ ಮಾಡುತ್ತಿದೆ. ಕೂಡಲೇ ಸರ್ಕಾರ ಹತ್ತಿ ಖರೀದಿ ಕೇಂದ್ರ ಆರಂಭಿಸಬೇಕು. ನಿರ್ಲಕ್ಷ್ಯ ಮಾಡಿದರೆ, ಜ.೯ರಂದು ಸೋಮವಾರ ಜೆಡಿಎಸ್‌ನಿಂದ ಬೃಹತ್ ಹೋರಾಟ ನಡೆಸಲಾಗುವುದು. ಪಟ್ಟಣದ ಅಂಬೇಡ್ಕರ್ ವೃತ್ತದವರೆಗೆ ಮಿನಿವಿಧಾನಸೌಧವರೆಗೆ ಸಾವಿರಾರು ರೈತರೊಂದಿಗೆ ಪ್ರತಿಭಟನಾ ರ್‍ಯಾಲಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ಬಿಜೆಪಿ ತಾಲೂಕು ಅಧ್ಯಕ್ಷ ಬುಡ್ಡನಗೌಡ ಜಾಗಟಗಲ್ ಮಾತನಾಡಿ, ತಾಲೂಕಿನಲ್ಲಿ ನೂರಾರು ಸಮಸ್ಯೆಗಳಿದ್ದು, ಈ ಬಗ್ಗೆ ಶಾಸಕ ಕೆ.ಶಿವನಗೌಡ ನಾಯಕ ಪರಿಹರಿಸುವಲ್ಲಿ ವಿಫಲರಾಗಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ನಾಯಕರು ಧ್ವನಿ ಎತ್ತದೆ ಮೌನಕ್ಕೆ ಜಾರಿರುವುದು ತಾಲೂಕಿನ ಜನರಲ್ಲಿ ಗೊಂದಲ ಮೂಡಿಸಿದೆ. ರೈತರ ಸಮಸ್ಯೆಗಳ ಕುರಿತು ಕಾಂಗ್ರೆಸ್ ನಾಯಕರು ಮಾತನಾಡುತ್ತಿದೆ. ಜೆಡಿಎಸ್ ಪಕ್ಷ ಮಾತ್ರ ರೈತರು ಸೇರಿ ಸಾಮಾನ್ಯ ಜನರ ಸಮಸ್ಯೆಗಳ ವಿರುದ್ಧ ಹೋರಾಟ ಮಾಡುತ್ತಿದೆ. ತಾಲೂಕಿಗೆ ನಾರಾಯಣಪುರ ಬಲದಂಡೆ ನಾಲೆ ಜಾರಿಗೊಳಿಸಿ ಅನ್ನದಾತರ ನೋವಿಗೆ ಸ್ಪಂದಿಸಿದೆ. ತಾಲೂಕಿಗೆ ಜೆಡಿಎಸ್ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಅಮರೇಶ ಪಾಟೀಲ್, ಶರಣಪ್ಪ ಬಳೆ, ಶಾಲಂ ಉದ್ದಾರ್, ಬಸವರಾಜ ಕೊತ್ತದೊಡ್ಡಿ, ಮಯೂರ ಸ್ವಾಮಿ, ಹನುಮಂತ್ರಾಯ ವಕೀಲ ಚಿಂತಲಕುಂಟಾ, ದೊಡ್ಡ ರಂಗಣ್ಣ ಅಳ್ಳುಂಡಿ, ಸಲೀಂ ಕಾಕರಗಲ್, ಚಂದ್ರ ಚಿಂತಲಕುಂಟಿ ಇತರರಿದ್ದರು.