ಹತ್ತಿ ಇಳುವರಿ ಕಡಿಮೆ, ಹೆಚ್ಚಾಯ್ತು ರೈತರಿಗೆ ಸಾಲದ ಹೊರೆ

ಶಹಾಪುರ:ನ.6:ರೈತನಿಗೆ ಭರವಸೆಯ ಬೆಳೆಯಾಗಿದ್ದ ಹತ್ತಿ ಬೆಳೆ ಇತ್ತೀಚಿಗೆ ಸುರಿದ ಮಳೆಯಿಂದ ಕಾಯಿ ಹಂತದಲ್ಲಿ ಉದುರಿಹೋಗಿ, ಇಳುವರಿ ಸಂಪೂರ್ಣ ಕಡಿಮೆಯಾಗಿ ರೈತರಿಗೆ ಸಾಲದ ಹೊರೆ ಹೆಚ್ಚಾಗಿದ್ದು ರೈತ ಸಂಕಷ್ಟದ ಪರಿಸ್ಥಿತಿ ಎದುರಿಸುವಂತಾಗಿದೆ. ಮುಂಗಾರುಮಳೆ ಪ್ರಾರಂಭದ ದಿನಗಳಲ್ಲಿ ರೈತಾಪಿ ವರ್ಗಕ್ಕೆ ಅತ್ಯಂತ ಸಂತಸದಾಯಕವಾಗಿತ್ತು ,ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ವಾಣಿಜ್ಯ ಬೆಳೆ ಎಂದೇ ಖ್ಯಾತಿ ಪಡೆದ ಹತ್ತಿ ಬೀಜ ಬಿತ್ತನೆ ಮಾಡಿ, ರಾಸಾಯನಿಕ ಗೊಬ್ಬರ, ಕೀಟನಾಶಕ ಔಷಧಿ ಸಿಂಪಡಣೆ ಮಾಡಿ ಉತ್ತಮ ಬೆಳೆ ಬರುವ ಸಂದರ್ಭದಲ್ಲಿ ಸುರಿದ ಭಾರಿ ಮಳೆಯಿಂದ ನೀರಿಗೆ ಹತ್ತಿ ಬೆಳೆ ಆಹುತಿಯಾಗಿ, ಕೆಲವೆಡೆ ಸಂಪೂರ್ಣ ಬೆಳೆಗಳು ಕೊಳೆತುಹೋಗಿದ್ದು, ಎತ್ತರಪ್ರದೇಶದ ಭೂಮಿಯಲ್ಲಿ ಕಾಯಿಗಳು ಉದುರಿ ಹೋಗಿ ಇಳುವರಿ ಸಂಪೂರ್ಣ ಕಡಿಮೆಯಾಗಿದೆ. ಹತ್ತಿ ಬೆಳೆಯನ್ನೆ ನಂಬಿ ಕುಳಿತ ರೈತರ ಬಾಳು ಸಂಕಷ್ಟಕ್ಕೀಡು ಮಾಡಿದೆ ಪ್ರಸ್ತುತ ಹತ್ತಿ ಬಿಡಿಸುವ ಕಾರ್ಯ ನಡೆದಿದ್ದು, ರೈತರಿಗೆ ಇಳುವರೆ ಕಡಿಮೆಯಾಗಿ ನಷ್ಟ ಅನುಭವಿಸಿದ್ದು ಖರ್ಚನ್ನು ಹೇಗೆ ನಿಭಾಯಿಸಬೇಕು ಎಂಬ ಅತಂತ್ರ ಪರಿಸ್ಥಿತಿಯಲ್ಲಿದ್ದಾರೆ. ಸರ್ಕಾರ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ರೈತರ ಸಂಕಷ್ಟ ಪರಿಹಾರ ಮಾಡುವಲ್ಲಿ ಮೊದಲು ಆದ್ಯತೆ ನೀಡಬೇಕು, ಕೃಷಿ ಅಧಿಕಾರಿಗಳು ಕಂದಾಯ ಅಧಿಕಾರಿಗಳು ವಸ್ತುಸ್ಥಿತಿ ಪರಿಶೀಲಿಸಿ ಸೂಕ್ತ ವರದಿ ಸಲ್ಲಿಸಿ ರೈತರಿಗೆ ಉತ್ತಮ ಪರಿಹಾರ ನೀಡುವಲ್ಲಿ ಹೆಚ್ಚು ಕಾಳಜಿ ವಹಿಸಬೇಕೆಂದು ರೈತ ಸಲಹಾ ಸಮಿತಿ ಮಾಜಿ ಸದಸ್ಯ ಅಶೋಕರಾವ ಮೂಡಬೂಳ ಸರಕಾರಕ್ಕೆ ಮನವಿ ಮಾಡಿದ್ದಾರೆ.