ಹತ್ತಾರು ರೋಗಿಗಳ ಪ್ರಾಣ ಉಳಿಸಿದ ಯುವಕರು..!

ಬೆಂಗಳೂರು, ಮೇ.೧೩- ಕೋವಿಡ್ ೨ನೇ ಅಲೆ ದೇಶದಲ್ಲಿ ತಾಂಡವವಾಡುತ್ತಿದೆ. ಈ ತುರ್ತು ಸಂದರ್ಭದಲ್ಲಿ ಆಕ್ಸಿಜನ್ ಬಿಕ್ಕಟ್ಟು ಎಲ್ಲೆಡೆ ಕೇಳಿಬರುತ್ತೀರುವ ನಡುವೆ ಬೆಂಗಳೂರಿನ ಯುವಕರ ತಂಡವೊಂದು ಆಸ್ಪತ್ರೆಗಳಿಗೆ ಉಚಿತವಾಗಿ ಆಕ್ಸಿಜನ್ ಪೂರೈಕೆ ಮಾಡಿ ಹತ್ತಾರು ರೋಗಿಗಳ ಪ್ರಾಣವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಾಂಗ್ರೆಸ್ ಯುವ ಮುಖಂಡ ಲಿತೇಶ್ ಎಂ.ರೆಡ್ಡಿ ನೇತೃತ್ವದ ಯುವಕರ ತಂಡವೂ ನಗರದ ವೆಂಕಟೇಶ್ವರ ಹಾಗೂ ಲೈಫ್ ಕೇರ್ ಆಸ್ಪತ್ರೆಗಳಿಗೆ ಆಕ್ಸಿಜನ್ ಸಿಲಿಂಡರ್ ಗಳನ್ನು ಪೂರೈಕೆ ಮಾಡಿ,ಉಸಿರಾಟ ಸಮಸ್ಯೆ ಎದುರಿಸುತ್ತಿದ್ದ ೩೯ಕ್ಕೂ ಅಧಿಕ ರೋಗಿಗಳ ಪ್ರಾಣ ರಕ್ಷಣೆ ಮಾಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಲಿತೇಶ್ ಎಂ.ರೆಡ್ಡಿ, ಕಳೆದ ವಾರದ ಈ ಎರಡು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸಮಸ್ಯೆ ತೀರ ಉಲ್ಬಣಗೊಂಡಿತ್ತು. ಇದರ ಪರಿಣಾಮ ರೋಗಿಗಳ ಉಸಿರಾಟವೇ ನಿಂತು ಹೋಗುವ ಪರಿಸ್ಥಿತಿ ಬಂದಿತ್ತು. ಈ ಬಗ್ಗೆ ನಮಗೆ ಮಾಹಿತಿ ದೊರೆತ ಬೆನ್ನಲ್ಲೇ ಪೀಣ್ಯ ವ್ಯಾಪ್ತಿಯಿಂದ ಹಲವಾರು ಆಕ್ಸಿಜನ್ ಸಿಲಿಂಡರ್ ಗಳನ್ನು ಪೂರೈಕೆ ಮಾಡಲಾಯಿತು ಎಂದರು.
ಆರಂಭದಲ್ಲಿ ಆಕ್ಸಿಜನ್ ಖರೀದಿಗೆ ಮಾಜಿ ಸಚಿವ ರಾಮಲಿಂಗಾರೆಡ್ಡಿ, ಶಾಸಕಿ ಸೌಮ್ಯಾ ರೆಡ್ಡಿ ಹಾಗೂ ಬಿಬಿಎಂಪಿ ಮಾಜಿ ಮೇಯರ್ ಮಂಜುನಾಥ ರೆಡ್ಡಿ ಅವರೂ ಸಹಾಯ ಮಾಡಿದರು.ಇದರಿಂದ ನಾವು ತುರ್ತು ಸಹಾಯ ಮಾಡಲು ಸಹಕಾರಿ ಆಯಿತು ಎಂದು ತಿಳಿಸಿದರು.
ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಸೋಂಕು ದ್ವಿಗುಣವಾಗಿರುವ ಕಾರಣ
ಆಕ್ಸಿಜನ್ ಕೊರತೆಯಾಗಿದೆ.ಆದರೆ, ರಾಜ್ಯ ಸರ್ಕಾರ ಆಕ್ಸಿಜನ್ ಕೊರತೆ ನೀಗಿಸಬೇಕು. ಮತ್ತೊಂದೆಡೆ ಸಂಘ ಸಂಸ್ಥೆಗಳು ತಮ್ಮ ಸಾಮರ್ಥ್ಯ ಮೀರಿ ದುಡಿಯಿತ್ತೀರುವುದು ಶ್ಲಾಘನೀಯ ಎಂದು ನುಡಿದರು.