ಹತ್ತಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಾಣಕ್ಕೆ ಒತ್ತಾಯ

ಕೆ.ಆರ್.ಪೇಟೆ.ಆ.06:- ಕಳೆದ ನಾಲ್ಕೈದು ದಿನಗಳಿಂದ ತಾಲ್ಲೂಕಿನಲ್ಲಿ ಸುರಿದ ಬಾರಿ ಮಳೆಗೆ ಕಿಕ್ಕೇರಿ ಹೋಬಳಿಯ ಮಾದಿಹಳ್ಳಿ ಗ್ರಾಮದಿಂದ ಹತ್ತಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಕೊಚ್ಚಿಹೋಗಿದ್ದು ಕೂಡಲೇ ಸೇತುವೆ ನಿರ್ಮಾಣ ಮಾಡಿಕೊಡಬೇಕೆಂದು ಮಾದಿಹಳ್ಳಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಗ್ರಾಮ ಪಂಚಾಯಿತಿ ಸದಸ್ಯ ಶ್ರೀಧರ್ ಈ ಸೇತುವೆಯ ಮೇಲೆ ರೈತರು, ವ್ಯಾಪಾರಸ್ಥರು, ಶಾಲಾ ವಿದ್ಯಾರ್ಥಿಗಳು, ಸರ್ಕಾರಿ ನೌಕರರು ಪ್ರತಿದಿನ ಸಂಚರಿಸಬೇಕಾಗಿದ್ದು ಹತ್ತಾರು ಗ್ರಾಮಗಳ ಸಾವಿರಾರು ರೈತರಿಗೆ ಅತೀ ಅವಶ್ಯಕವಾಗಿದ್ದ ಸೇತುವೆಯಾಗಿತ್ತು. ಈ ಸೇತುವೆ ದೇವರಹಳ್ಳಿ, ಡಿಂಕ, ಹೊನ್ನೇನಹಳ್ಳಿ, ಕಳ್ಳನಕೆರೆ, ಸೊಳ್ಳೆಪುರ, ಮಾದಿಹಳ್ಳಿ ಸೇರಿದಂತೆ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಸೇತುವೆಯಾಗಿದ್ದು, ರೈತರ ಬೆಳೆಗಳನ್ನು, ತೆಂಗಿನಕಾಯಿ, ಎಳೆನೀರು, ಭತ್ತ, ಕಬ್ಬು ಮುಂತಾದುವುಗಳನ್ನು ಸಾಗಿಸಲು ಬಹಳ ತೊಂದರೆ ಯಾಗಿದೆ. ಘಟನಾ ಸ್ಥಳಕ್ಕೆ ಗುರುವಾರ ಕಂದಾಯ ಸಚಿವರಾದ ಆರ್.ಆಶೋಕ್, ಸಚಿವರಾದ ಗೋಪಾಲಯ್ಯ, ನಾರಾಯಣ ಗೌಡ ಎಲ್ಲರೂ ವೀಕ್ಷಿಸಿದ್ದಾರೆ.
ಶುಕ್ರವಾರ ಕೊಚ್ಚಿಕೊಂಡು ಹೋಗಿರುವ ಈ ಸೇತುವೆಯಲ್ಲಿ ಸ್ಥಳೀಯ ರೈತನೊಬ್ಬ ತೆರಳಲು ಸಾಹಸ ಮಾಡಿದಾಗ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗುವ ಆತಂಕ ಎದುರಾಗಿತ್ತು ಕೂಡಲೇ ಅಲ್ಲಿಯೇ
ಇದ್ದ ರೈತರುಗಳು ರೈತನನ್ನು ಎಳೆದು ರಕ್ಷಿಸಿರುವ ಘಟನೆ ನಡೆದಿದೆ. ಆದ್ದರಿಂದ ಹೆಚ್ಚಿನ ಅವಘಢಗಳು ಸಂಭವಿಸುವ ಮುನ್ನ ತುರ್ತಾಗಿ ಸೇತುವೆ ಕಾಮಗಾರಿಗೆ ಚಾಲನೆ ನೀಡಬೇಕೆಂದು ಮನವಿ ಮಾಡಿದ್ದಾರೆ.