ಹಣ ಸಂಪಾದನೆ ಮಾಡುವುದೇ ಪ್ರಮುಖ ಗುರಿಯಾಗಬಾರದು

ಹರಪನಹಳ್ಳಿ.ಜ.೨; ಆಧುನಿಕತೆಯ ಭರಾಟೆಯಲ್ಲಿ ಮಾನವೀಯ ಮೌಲ್ಯವನ್ನು ಕಳೆದುಕೊಂಡು ಖಿನ್ನತೆಯಿಂದ ಬಳಲುವಂತಾಗಿದೆ ಎಂದು ಪ್ರಗತಿಪರ ಚಿಂತಕ ಕೋಡಿಹಳ್ಳಿ ಭೀಮಪ್ಪ ಅಭಿಪ್ರಾಯಪಟ್ಟರು. ಪಟ್ಟಣದ ಹೊರವಲಯದಲ್ಲಿರುವ ಸಮತಾ ರೆಸಾರ್ಟ್ನಲ್ಲಿ ಹೊಸ ವರ್ಷದ ಅಂಗವಾಗಿ ಸಮತಾ ಗ್ರಂಥಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಧುನಿಕ ಜೀವನ ಶೈಲಿಗೆ ಮಾರುಹೋಗಿರುವ ನಾವು ಸಮೃದ್ಧ ಸಾಹಿತ್ಯವನ್ನು ಓದದೆ ಕಡೆಗಣಿಸಿದ್ದೇವೆ. ಕೇವಲ ಹಣ ಸಂಪಾದನೆ ಮಾಡುವುದನ್ನೇ ಪ್ರಮುಖ ಗುರಿಯಾಗಿರಿಸಿಕೊಂಡು, ಬದುಕಿಗೆ ಅರ್ಥ ನೀಡುವ ಸಾಹಿತ್ಯದ ಓದು ಕಣ್ಮರೆಯಾಗಿದೆ. ಇದು ಸಾಂಸ್ಕೃತಿಕ ದಾರಿದ್ರ‍್ಯದ ಸಂಕೇತವಾಗಿದೆ ಎಂದರು. ಕನ್ನಡ ನಾಡು ವಿವಿಧ ಸಂಸ್ಕೃತಿ ಮತ್ತು ಭಾಷೆಗಳ ಆಗರವಾಗಿದೆ. ಕನ್ನಡ ಸಾಹಿತ್ಯವನ್ನು ಬಹುಮುಖಿ ನೆಲೆಯಲ್ಲಿ ಅಧ್ಯಯನ ಮಾಡುವ ಅಗತ್ಯವಿದೆ. ಸಾಹಿತ್ಯದ ಸಂಗತಿಗಳನ್ನು ಹೊಸ ತಲೆಮಾರಿಗೆ ಪರಿಚಯಿಸಿ ಸುಶಿಕ್ಷಿತರ ಸಾಂಸ್ಕೃತಿಕ ಬಡತನ ನೀಗಿಸುವ, ಬುದ್ಧಿವಂತರನ್ನು ಹೃದಯವಂತರನ್ನಾಗಿಸುವ ಅವಶ್ಯಕತೆಯಿದೆ. ಕುಳಿತಲ್ಲೇ ಪಡೆಯಬಹುದು: ಪ್ರಪಂಚದಲ್ಲಿ ನಡೆಯುವ ಹಲವು ಮಾಹಿತಿಗಳನ್ನು ಅಂತರ್ಜಾಲದ ಸಹಾಯದಿಂದ ಕುಳಿತಲ್ಲೇ ಪಡೆಯಬಹುದು. ಆದರೆ ಜೀವನ ವಿಧಾನದ ಸಮೀಪ ದರ್ಶನವನ್ನು ಇದು ಸಮರ್ಥವಾಗಿ ಒದಗಿಸಲಾರದು. ಇಂತಹ ಮಹತ್ವಪೂರ್ಣ ಕೆಲಸವನ್ನು ಸಾಹಿತ್ಯದ ಓದು ಮಾತ್ರ ದೊರಕಿಸಿ ಕೊಡುತ್ತದೆ ಎಂದರು.ಮಾನವೀಯ ಮೌಲ್ಯಗಳು ಇಲ್ಲದವನ ಬದುಕು ದುಸ್ತರವಾದದ್ದು. ಉತ್ತಮ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಂಡು ಬದುಕಿನ ಮೌಲ್ಯಗಳನ್ನು ಹೆಚ್ಚಿಸಿಕೊಂಡರೆ ಉತ್ತಮ ಜೀವನ ಪ್ರಾಪ್ತಿಯಾಗುತ್ತದೆ. ಮನುಷ್ಯ ಸಾರ್ಥಕ ಜೀವನ ನಡೆಸಬೇಕಾದರೆ ಪುಸ್ತಕ ಬೇಕು. ಅದು ಬಾಳಿನ ಸಂಗಾತಿಯಾಗಿದ್ದು, ಕೊಂಡು ಓದುವ ಹವ್ಯಾಸ ಬೆಳೆಸಿಕೊಳ್ಳುವ ಮೂಲಕ ಪುಸ್ತಕ ಸಂಸ್ಕೃತಿ ಉಳಿಸಬೇಕು ಎಂದು ತಿಳಿಸಿದರು.ಅಂಬೇಡ್ಕರ್ ಹಾಗೂ ಸಿದ್ದಗಂಗಾ ಶಿವಮೂರ್ತಿ ಸ್ವಾಮೀಜಿಯವರ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಗ್ರಂಥಾಲಯಕ್ಕೆ ಚಾಲನೆ ನೀಡಿದ ಸಾಹಿತಿ ಇಸ್ಮಾಯಿಲ್ ಯಲಿಗಾರ್ ಮಾತನಾಡಿ, ಮಕ್ಕಳು ಮೊಬೈಲ್ ಹಾವಳಿಗೆ ಸಿಕ್ಕು ಹಾಳಾಗುತ್ತಿದ್ದಾರೆ. ಅದರಿಂದ ಅವರನ್ನು ಮುಕ್ತಮಾಡಬೇಕು. ಇಂದು ಕನ್ನಡ ಎಲ್ಲಸ್ಥರಗಳಲ್ಲಿ ಶಿಕ್ಷಣ ಮಾಧ್ಯಮವಾಗಬೇಕು. ಮಾತೃಭಾಷೆ ಕನ್ನಡದಲ್ಲಿಯೇ ಪ್ರಾಥಮಿಕ ಶಿಕ್ಷಣ ನೀಡುವುದು ಸೂಕ್ತವಾದುದು ಎಂದು ಅಭಿಪ್ರಾಯಪಟ್ಟರು.
ತಾಲ್ಲೂಕು ಕಸಾಪ ಅಧ್ಯಕ್ಷ ಡಿ.ರಾಮನಮಲಿ ಮಾತನಾಡಿ, ರೆಸಾರ್ಟ್ ಆಗಮಿಸುವ ಗ್ರಾಹಕರಿಗೆ ಉಚಿತವಾಗಿ ಓದಲು ಪುಸ್ತಕ ನೀಡುತ್ತಿರುವ ಕಾರ್ಯ ಶ್ಲಾಘನೀಯ. ಹೊಟ್ಟೆಯ ಹಸಿವಿನ ಜೊತೆಗೆ ನೆತ್ತಿಯ ಹಸಿವು ನೀಗಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ, ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು. ಚಲನಚಿತ್ರ ನಟ ಗಣೇಶ್, ಚಿತ್ರ ಕಲಾವಿದ ಗಣೇಶ್ ಇತರರು ಉಪಸ್ಥಿತರಿದ್ದರು