ಹಣ ಪಾವತಿ ವಿಳಂಬ ಔಷಧಿ ಸರಬರಾಜು ಕಂಪನಿಗಳು ಕಂಗಾಲು


ಬೆಂಗಳೂರು, ಮಾ.೨೬- ರಾಜ್ಯ ವೈದಕೀಯ ಸರಬರಾಜು ನಿಗಮದಲ್ಲಿ ಔಷಧ ಪೂರೈಸಿದ ಸರಬರಾಜುದಾರರಿಗೆ ನಾಲ್ಕು ವರ್ಷಗಳಿಂದ ಬಾಕಿ ಬಿಲ್‌ಗಳಿಗೆ ಹಣ ಪಾವತಿಸದ ಕಾರಣ ಬಂಡವಾಳ ಹೂಡಿ ಔಷಧ ಪೂರೈಸಿರುವ ಮಂದಿ ಕಂಗಲಾಗಿದ್ದಾರೆ.

ಟೆಂಡರ್ ನಿಯಮಾನುಸಾರ ಔಷಧ ಮತ್ತು ಇತರೆ ವಸ್ತುಗಳನ್ನು ಪೂರೈಸಿದ ಸರಬರಾಜುದಾರರಿಗೆ ೩೦ ದಿನದೊಳಗೆ ಪೇಮೆಂಟ್ ಮಾಡಬೇಕೆಂಬ ನಿಯಮವಿದೆ. ಆದರೆ, ಕೆಲ ಅಧಿಕಾರಿಗಳು ಉದ್ದೇಶ ಪೂರಕವಾಗಿ ಬಾಕಿ ಬಿಲ್ ಪಾವತಿಗೆ ಶೇ.೧೦ರಷ್ಟು ಕಮಿಷನ್ ಕೊಟ್ಟರೆ ಪೇಮೆಂಟ್ ಮಾಡುತ್ತೇವೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.ಇದರಿಂದ ಕೋಟ್ಯಂತರ ರೂಪಾಯಿ ಬಂಡವಾಳ ಹೂಡಿ ಔಷಧ ಪೂರೈಸಿರುವ ಸರಬರಾಜುದಾರರು ಕಂಗಲಾಗಿದ್ದಾರೆ ಹಾಗೂ ತಮ್ಮ ಸಂಸ್ಥೆಯ ಸಿಬ್ಬಂದಿಗಳಿಗೆ ಸಂಬಳ ನೀಡುವುದಕ್ಕೆ ಹಣವಿಲ್ಲದೆ ಪರದಾಡುವಂತಾಗಿದೆ. ಹಾಗಾಗಿ ಶೀಘ್ರ ಬಾಕಿ ಬಿಲ್‌ಗಳಿಗೆ ಹಣ ಪಾವತಿಸುವಂತೆ ಸರಬರಾಜುದಾರರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಕಿರುಕುಳ ಆರೋಪ?:ಔಷಧ ಪೂರೈಸಿರುವ ಪೂರೈಕೆದಾರರು ಬಿಲ್‌ಗಳನ್ನು ವೈದ್ಯಕೀಯ ಸರಬರಾಜು ನಿಗಮಕ್ಕೆ ಕಳುಹಿಸಲಾಗುತ್ತದೆ. ಬಳಿಕ ಗೋದಾಮಿನಲ್ಲಿ ಔಷಧ ಸ್ವೀಕರಿಸುವವರು ನಿಗಮಕ್ಕೆ ಬಿಲ್ ಕಳುಹಿಸುತ್ತಾರೆ. ಆದರೆ, ನಿಗಮದ ಕೆಲ ಭ್ರಷ್ಟ ಅಧಿಕಾರಿಗಳು ಸರಿಯಾಗಿ ಕಮಿಷನ್ ನೀಡದ ಕಾರಣಕ್ಕಾಗಿ ಸರಬರಾಜುದಾರರ ಕಳುಹಿಸಿರುವ ಬಿಲ್‌ಗಳನ್ನು ಮಾಯ ಮಾಡಿ ಇನ್ನೊಮ್ಮೆ ಬಿಲ್ ಕಳುಹಿಸುವಂತೆ ತೊಂದರೆ ಕೊಡುತ್ತಾರೆ. ಆದರೆ, ಮತ್ತೊಮ್ಮೆ ಬಿಲ್‌ಗಳನ್ನು ಕಳುಹಿಸಿದರೆ ಪೇಮೆಂಟ್ ಮಾಡಲು ಕುಂಟುನೆಪ ಹೇಳುತ್ತಾರೆ.

ಇಎಂಡಿ ಬಾಕಿ:ಅಲ್ಲದೆ, ನಿಯಮದಂತೆ ಟೆಂಡರ್ ಪಡೆದ ಕಂಪನಿಗಳು ಲಕ್ಷಾಂತರ ರೂಪಾಯಿ ಭದ್ರತಾ ಠೇವಣಿಯನ್ನು ಪಾವತಿಸಿ ಔಷಧ ಪೂರೈಕೆ ಮಾಡುತ್ತಾರೆ. ನಿಯಮಾನುಸಾರ ಔಷಧ ಪೂರೈಕೆ ಮಾಡಲು ಕಂಪನಿಗಳು ವಿಳಂಬ ಮಾಡಿದರೆ ಆ ಕಂಪನಿಗಳಿಗೆ ನಿಗಮ ದಂಡ ಹಾಕಲಾಗುತ್ತದೆ.

ಆದರೆ, ನಿಗಮದ ಅಧಿಕಾರಿಗಳು ಬಾಕಿ ಉಳಿಗಳಿಗೆ ಪೇಮೆಂಟ್ ಮಾಡುವುದಕ್ಕೆ ನಿರ್ಲಕ್ಷ್ಯವಹಿಸುತ್ತಿದ್ದಾರೆ. ೪ ವರ್ಷಗಳಿಂದ ನೂರಾರು ಕೋಟಿ ಭದ್ರತಾ ಠೇವಣಿ ಹಣವನ್ನೂ ಸಹ ವಾಪಸ್ ನೀಡುತ್ತಿಲ್ಲ ಎಂದು ಹೇಳಲಾಗುತ್ತಿದೆ.

ಪ್ರಮುಖವಾಗಿ ಕೊರೋನಾ ಹಿನ್ನೆಲೆಯಲ್ಲಿ ಸರ್ಕಾರ ಅಂದಾಜು ೫,೫೦೦ ಕೋಟಿ ರೂ. ಖರ್ಚಾಗಿದೆ ಎಂದು ಹೇಳಿದೆ. ಆರೋಗ್ಯ ಇಲಾಖೆಗೆ ಕೋಟ್ಯಂತರ ರೂಪಾಯಿ ಅನುದಾನ ನೀಡಿದೆ. ಕೊರೋನಾ ನಿವಾರಣೆಗೆ ಔಷಧ ಪೂರೈಸಿರುವ ಕಂಪನಿಗಳಿಗೆ ಪೇಮೆಂಟ್ ಆಗುತ್ತಿದೆ. ಆದರೆ, ಕೊರೋನಾ ಮುನ್ನ ಹಾಗೂ ಕೊರೋನಾ ನಂತರ ಪೂರೈಸಿರುವ ಔಷಧಗಳ ಬಿಲ್‌ಗಳಿಗೆ ಪೇಮೆಂಟ್ ಮಾಡುತ್ತಿಲ್ಲ ಎನ್ನುವ ಹಲವರ ಆರೋಪ.