ಹಣ ಪಡೆದು ಮತಹಾಕಲಿಲ್ಲ ಎನ್ನುವ ಕಾರಣಕ್ಕೆ ಗ್ರಾ.ಪಂ ಸದಸ್ಯರು, ಬೆಂಬಲಿಗರ ಸಂಘರ್ಷ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಆ.04: ಹಣ ಪಡೆದು ಮತಹಾಕಲಿಲ್ಲ ಎನ್ನುವ ಕಾರಣಕ್ಕೆ ಗ್ರಾಮ ಪಂಚಾಯತಿ ಸದಸ್ಯರು ಬಹಿರಂಗವಾಗಿ ಸಂರ್ಘಷಕ್ಕಿಳಿದ ಘಟನೆ ತಾಲೂಕಿನ ವಿಠಲಾಪುರ ಗ್ರಾಮದಲ್ಲಿ ನಡೆದಿದೆ.
ವಿಠಲಾಪುರ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗೆ ಗುರುವಾರ ಚುನಾವಣೆ ನಡೆಯಿತು. ವಿಠಲಾಪುರ ಗ್ರಾಮ ಪಂಚಾಯತಿಯಲ್ಲಿ ಒಟ್ಟು 21 ಜನ ಚುನಾಯಿತ ಸದಸ್ಯರಿದ್ದು ಇದರಲ್ಲಿ 12 ಜನ ಕಾಂಗ್ರೆಸ್ ಮತ್ತು 09 ಜನ ಜೆಡಿಎಸ್ ಬೆಂಬಲಿಗರು. ಪಂಚಾಯತಿಯ ಅಧಿಕಾರ ಹಿಡಿಯಲು ಜೆಡಿಎಸ್ ಬೆಂಬಲಿಗರು ಇಬ್ಬರು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ತಲಾ 1.5 ಲಕ್ಷ ಹಣ ನೀಡಿದ್ದರೆನ್ನಲಾಗಿದೆ. ಹಣ ಪಡೆದ ಅಭ್ಯರ್ಥಿಗಳು ಜೆಡಿಎಸ್ ಬೆಂಲಿತರ ಪರ ಮತ ಚಲಾಯಿಸದೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಪರ ಮತ ಚಲಾಯಿಸಿದ್ದು ಗಲಭೆಗೆ ಕಾರಣ ಎನ್ನಲಾಗಿದೆ.
ಇಂದು ಬೆಳಿಗ್ಗೆ 11 ಗಂಟೆಗೆ ಪೂರ್ವ ನಿಗಧಿತವಾಗಿದ್ದಂತೆ ಗ್ರಾಮ ಪಂಚಾಯತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವನಾ ಪ್ರಕ್ರಿಯೆ ಆರಂಭಗೊಂಡಿತು.ಅಧ್ಯಕ್ಷ ಸ್ಥಾನ 2ಎ ವರ್ಗಕ್ಕೆ ಮೀಸಲಾಗಿದ್ದರೆ ಉಪಾಧ್ಯಕ್ಷ ಸ್ಥಾನ ಪರಿಶಿಷ್ಠ ಜಾತಿಗೆ ಮೀಸಲಾಗಿತ್ತು. ಅಧ್ಯಕ್ಷ ಸ್ತಾನಕ್ಕೆ ಕಾಂಗ್ರೆಸ್ ಬೆಂಬಲಿತರಾಗಿ ಕಾಳೇಗೌಡನ ಕೊಪ್ಪಲು ಗ್ರಾಮದ ಸದಸ್ಯ ಕುಮಾರ್ ಮತ್ತು ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಪಲ್ಲವಿ ಗಣೇಶ್ ಸ್ಪರ್ಧಿಸಿದ್ದರು.
ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಬೈರಯ್ಯ ಮತ್ತು ಜೆಡಿಎಸ್ ಬೆಂಬಲಿತ ಚಂದ್ರೋಜಿರಾವ್ ಸ್ಪರ್ಧೆಗಿಳಿದರು. ಚುನಾವಣೆಯಲ್ಲಿ 12 ಸದಸ್ಯರ ಬೆಂಬಲ ಪಡೆದು ಕಾಳೇಗೌಡನಕೊಪ್ಪಲು ಗ್ರಾಮದ ಕುಮಾರ್ ಅಧ್ಯಕ್ಷರಾಗಿ ಮತ್ತು ಮತ್ತಿಘಟ್ಟ ಗ್ರಾಮದ ಬೈರಯ್ಯ ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ತಾನದ ಚುನಾವಣೆ ನಡೆದು ಹೊರಬರುತ್ತಿದ್ದಂತೆಯೇ ಸೋತ ಅಬ್ಯರ್ಥಿಯ ಬೆಂಬಲಿಗರು ಹಣ ಪಡೆದು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯ ಪರ ಮತ ಹಾಕಿದ ಸದಸ್ಯರ ಮೇಲೆ ವಾಗ್ದಾಳಿ ಆರಂಭಿಸಿದರು. ಈ ಸಂದರ್ಭದಲ್ಲಿ ಹಣ ಪಡೆದು ಮತ ಚಲಾಯಿಸದೆ ಮೋಸ ಮಾಡಿದ್ದಾರೆನ್ನಲಾದ ಅಭ್ಯರ್ಥಿಗಳು ಮತ್ತು ಇತರರ ನಡುವೆ ಪರಸ್ಪರ ಮಾತಿಗೆ ಮಾತು ಬೆಳೆದು ತಳ್ಳಾಟ ನೂಕಾಟ ಆರಂಭವಾಯಿತು. ಪರಸ್ಪರರು ಕುತ್ತಿಗೆ ಪಟ್ಟಿ ಹಿಡಿದು ಜಗಳವಾಡ ತೊಡಗಿದರು. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿರುವುದನ್ನು ಕಂಡ ಪೆÇಲೀಸರು ಮತ್ತು ಇತರ ಗ್ರಾಮಸ್ಥರು ಮದ್ಯ ಪ್ರವೇಶಿಸಿ ಗಲಾಟೆಯನ್ನು ನಿಯಂತ್ರಿಸಿದರು.
ಚುನಾವಣಾ ಗಲಭೆಯ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ.