ಹಣ ಪಡೆದು ನಿವೇಶನ ನೀಡದೆ ಮೋಸ

ಕಲಬುರಗಿ,ಆ.5-ಹಣ ಪಡೆದು ವಿವೇಶನ ನೀಡದೆ ಅದನ್ನು ಮತ್ತೊಬ್ಬರಿಗೆ ಮಾರಾಟ ಮಾಡುವುದರ ಮೂಲಕ ಮಹಿಳೆಯೊಬ್ಬಳು ಮತ್ತೊಬ್ಬ ಮಹಿಳೆಗೆ ಮೋಸ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಶಾಂತಿ ನಗರದ ಆರತಿ ರಾಜೇಂದ್ರ ವರವಿ ಎಂಬುವವರೆ ಹಳೆ ಜೇವರ್ಗಿ ರಸ್ತೆಯ ಕೆಇಬಿ ಕ್ವಾಟರ್ಸ್‍ನ ರೇಣುಕಾ ಶಿವಪ್ಪ ಮಾದರ ಎಂಬುವವರಿಗೆ ಮೋಸ ಮಾಡಿದ್ದಾರೆ.
ಆರತಿ ರಾಜೇಂದ್ರ ವರವಿ ಅವರು ಹೈದ್ರಾಬಾದನ ಶಾದ ನಗರದಲ್ಲಿ ತಮ್ಮ ಹೆಸರಿನಲ್ಲಿ 30*40 ಅಳತೆಯ ಖುಲ್ಲಾ ನಿವೇಶನವಿದ್ದು, ಅದನ್ನು ಮಾರುವುದಿದದೆ ಎಂದು ರೇಣುಕಾ ಅವರಿಗೆ ತಿಳಿಸಿದ್ದಾರೆ. ಈ ವಿಷಯವನ್ನು ರೇಣುಕಾ ಅವರು ಪತಿ ಶಿವಪ್ಪ ಅವರ ಗಮನಕ್ಕೆ ತಂದಿದ್ದಾರೆ. ಆಗ ರೇಣುಕಾ ಮತ್ತು ಶಿವಪ್ಪ ಅವರು ಆರತಿ ಅವರ ಜೊತೆ ಹೈದ್ರಾಬಾದಿಗೆ ಹೋಗಿ ಖಾಲಿ ನಿವೇಶನ ಮತ್ತು ಅದರ ದಾಖಲೆಗಳನ್ನು ಪರಿಶೀಲಿಸಿ ನಿವೇಶನ ಖರೀದಿಸಲು ಒಪ್ಪಿದ್ದಾರೆ. ನಂತರ ಆರತಿ ಅವರಿಗೆ ಬ್ಯಾಂಕ್‍ನಿಂದ 2 ಲಕ್ಷ ರೂ.ಸಂದಾಯ ಮಾಡಿದ್ದಾರೆ. ಆರತಿ ಅವರು 6 ಲಕ್ಷ ನಗದನ್ನು ಸೇಲ್ ಡೀಡ್ ಮಾಡಿಸಿ ನೋಂದಣಿ ನಂತರ ಮಾಡಿಸಿಕೊಡುವುದಾಗಿ ಹೇಳಿ ನೋಟರಿ ಮಾಡಿಸಿದ್ದಾರೆ.
ಇದೇ ನಿವೇಶನವನ್ನು ಆರತಿ ಬೇರೊಬ್ಬರಿಗೆ ಮಾರಾಟ ಮಾಡಿ ಅವರ ಹೆಸರಿಗೆ ನೋಂದಣಿ ಮಾಡಿಸಿರುವ ವಿಷಯ ಕೆಲ ದಿನಗಳ ನಂತರ ರೇಣುಕಾ ಅವರಿಗೆ ಗೊತ್ತಾಗಿದೆ. ಇದರಿಂದ ಅವರು ಆರತಿ ಅವರ ಮನೆಗೆ ಹೋಗಿ ನಿವೇಶನವನ್ನೂ ಕೊಡಲಿಲ್ಲ ನಾವು ಕೊಟ್ಟ ಹಣವನ್ನಾದರು ಕೊಡಿ ಎಂದು ಕೇಳಿದ್ದಾರೆ. ಆಗ ಆರತಿ ಹಣ ಕೊಡುವುದಾಗಿ ಹೇಳಿ ಮುಂದೂಡುತ್ತ ಬಂದಿದ್ದಾರೆ. ನಂತರ ಆರತಿ ಅವರಿಗೆ ಹಣ ಕೇಳಿದಾಗ ನಿಮಗೆ ನಾನು ಯಾವುದೇ ಹಣ ಕೊಡುವುದಿಲ್ಲ. ಪದೇ ಪದೇ ಮನೆಗೆ ಬರುವುದು ಅಥವಾ ದಾರಿಯಲ್ಲಿ ಸಿಕ್ಕಾಗ ಹಣ ಕೇಳುವುದು ಮಾಡಿದರೆ ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ.
ಇದರಿಂದ ನೊಂದ ರೇಣುಕಾ ಅವರು ಈ ಸಂಬಂಧ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ತನಿಖೆ ನಡೆದಿದೆ.