ಹಣ ದುರ್ಬಳಕೆ: ಲೋಕಾಯುಕ್ತರಿಗೆ ದೂರು

ಅಫಜಲಪುರ,ನ.25-ಆಳಂದ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಸುಶೀಲಕುಮಾರ್ ಅಂಬೂರೆ ಅವರು ಸರ್ಕಾರದ ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ಕುರಿತು ಸಾಕ್ಷಿ ಮತ್ತು ಪುರಾವೆ ಸಮೇತ ದೂರು ಸಲ್ಲಿಸಿದರೂ ಸಹ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಆದ್ದರಿಂದ ತಪ್ಪಿತಸ್ಥ ಅಧಿಕಾರಿಯೊಂದಿಗೆ ಮತ್ತು ಸಂಬಂಧಿಸಿದ ಹಿರಿಯ ಅಧಿಕಾರಿಗಳ ವಿರುದ್ಧ ಲೋಕಾಯುಕ್ತರು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪುರಸಭೆಯ ಸದಸ್ಯ ಮಳೇಂದ್ರ ಡಾಂಗೆ ಅವರು ಒತ್ತಾಯಿಸಿದ್ದಾರೆ.
ಈ ಕುರಿತು ಬೆಂಗಳೂರಿನ ಲೋಕಾಯುಕ್ತರಿಗೆ ದೂರು ಸಲ್ಲಿಸಿರುವ ಅವರು, ಸರ್ಕಾರದ ಕಾರ್ಯಾಲಯದ ಖಾತೆಯಿಂದ ಸುಮಾರು 2 ಲಕ್ಷ 512 ರೂ.ಗಳನ್ನು ಅಕ್ರಮವಾಗಿ ಡ್ರಾ ಮಾಡಿಕೊಂಡ ಆರೋಪದ ಮೇಲೆ ಆಳಂದ್ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸುಶೀಲಕುಮಾರ್ ಅಂಬೂರೆ ಅವರ ವಿರುದ್ಧ ದೇವಲ್ ಗಾಣಗಾಪೂರ್ ಪೆÇೀಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದ್ದಾರೆ.
ಕಲಬುರ್ಗಿ ಜಿಲ್ಲಾ ಸಮಿಕ್ಷಣಾಧಿಕಾರಿಗಳು ಹಾಗೂ ನೋಡಲ್ ಅಧಿಕಾರಿಗಳು ವಿಚಾರಣೆ ಕೈಗೊಂಡು ಅದರ ಕುರಿತು ಮಾಹಿತಿ ನೀಡಲು ಆದೇಶ ಮಾಡಿದ್ದು, ಅದರಂತೆ ಜಿಲ್ಲಾ ಸಮಿಕ್ಷಣಾಧಿಕಾರಿ ಡಾ. ಸುರೇಶ್ ಮೇಕಿನ್ ಅವರು ವಿಚಾರಣೆ ಮಾಡಿ ಎಲ್ಲ ಸಂಬದಪಟ್ಟ ದಾಖಲಾತಿಗಳನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜಶೇಖರ್ ಮಾಲಿ ಅವರಿಗೆ ಎಸ್‍ಬಿಐ ಬ್ಯಾಂಕ್‍ನಿದ ಅಧಿಕೃತವಾಗಿ ದಾಖಲಾತಿಗಳನ್ನು ಪಡೆದು ಸಲ್ಲಿಸಲು ಸೂಚಿಸಲಾಗಿತ್ತು. ಅದರಂತೆ ಗೊಬ್ಬೂರ್ (ಬಿ) ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಅಬ್ದುಲ್ ಅಜೀಜ್ ಅವರು ಎಲ್ಲ ದಾಖಲಾತಿಗಳನ್ನು ಸಲ್ಲಿಸಿದ್ದರು ಎಂದು ಅವರು ವಿವರಿಸಿದ್ದಾರೆ.
ಕಲಬುರ್ಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಆಯುಕ್ತ ಡಿ.ರಂದೀಪ್ ಅವರಿಗೆ ಡಾ.ಸುಶೀಲಕುಮಾರ್ ಅಂಬೂರೆ ಅವರ ವಿರುದ್ಧ ಕ್ರಮ ಕೈಗೊಳ್ಳಲು ಪತ್ರ ಸಲ್ಲಿಸಿದ್ದರೂ ಸಹ ಎರಡು ತಿಂಗಳಾದರೂ ಸಹ ತಪ್ಪಿತಸ್ಥ ಆರೋಗ್ಯಾಧಿಕಾರಿ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆದ್ದರಿಂದ ನಮೂದಿಸಿದ ಅಧಿಕಾರಿಗಳು ಮತ್ತು ಆಯುಕ್ತರ ಮೇಲೆ ಲೋಕಾಯುಕ್ತ ಕಾನೂನಿನ ಪ್ರಕಾರ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.