ಚಿತ್ರದುರ್ಗ,ಜೂ.24: ಹಣ ದುರುಪಯೋಗ ಆರೋಪದ ಮೇಲೆ ಚಿತ್ರದುರ್ಗ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಮೂಡಲಗಿರಿಯಪ್ಪ ಹಾಗೂ ಇಂಜಿನಿಯರ್ ಸತೀಶ್ ಕಲ್ಲಹಟ್ಟಿ ಅವರನ್ನು ಹುದ್ದೆಯಿಂದ ತೆಗೆದುಹಾಕಿ ನಿರ್ಮಿತಿ ಕೇಂದ್ರದ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಆದೇಶ ಹೊರಡಿಸಿದ್ದಾರೆ.ಜಿಲ್ಲಾ ಖನಿಜಾ ಪ್ರತಿಷ್ಠಾನ ಟ್ರಸ್ಟ್ ನ ಅನುಧಾನದಲ್ಲಿ ಆರ್ ಓ ಪ್ಲಾಂಟ್ ಗಳ ನಿರ್ಮಾಣ ಕಾಮಗಾರಿ ಸಂಬಂಧ ಸುಮಾರು 1.5 ಕೋಟಿ ರೂ.ಗಳನ್ನು ಡ್ರಾ ಮಾಡಿರುವ ಆರೋಪದ ಮೇಲೆ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಮೂಡಲಗಿರಿಯಪ್ಪ ಹಾಗೂ ಇಂಜಿನಿಯರ್ ಸತೀಶ್ ಕಲ್ಲಹಟ್ಟಿ ಅವರುಗಳನ್ನು ಹುದ್ದೆಯಿಂದ ತೆಗೆದುಹಾಕಲಾಗಿದೆ.ಮೊಳಕಾಲ್ಮೂರು ತಾಲ್ಲೂಕಿನಲ್ಲಿ ಆರ್.ಓ. ಪ್ಲಾಂಟ್ ಗಳನ್ನು ನಿರ್ಮಾಣ ಕಾಮಗಾರಿಯನ್ನು ಚಿತ್ರದುರ್ಗ ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿದ್ದು, ತಾಲ್ಲೂಕಿನಲ್ಲಿ ನಿಗದಿತ ಆರ್.ಓ. ಪ್ಲಾಂಟ್ ಗಳನ್ನು ನಿರ್ಮಾಣ ಮಾಡದೆ, ಸುಮಾರು 1.5 ಕೋಟಿ ರೂ.ಗಳನ್ನು ಡ್ರಾ ಮಾಡಲಾಗಿದೆ. ಆದರೆ ಅಲ್ಲಿ ಕೇವಲ 93 ಲಕ್ಷ ರೂ.ಗಳು ಮಾತ್ರ ಕಾಮಗಾರಿಗೆ ಖರ್ಚು ಮಾಡಲಾಗಿದೆ. ಆದರೆ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಮೂಡಲಗಿರಿಯಪ್ಪ ಹಾಗೂ ಇಂಜಿನಿಯರ್ ಸತೀಶ್ ಕಲ್ಲಹಟ್ಟಿ ಅವರುಗಳು ಡ್ರಾ ಮಾಡಿ ಜಿಲ್ಲಾ ಖನಿಜಾ ಪ್ರತಿಷ್ಠಾನ ಟ್ರಸ್ಟ್ ನ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಚಿತ್ರದುರ್ಗ ಇವರು ಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು.ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ತನಿಖಾ ತಂಡವನ್ನು ರಚಿಸಿ ತನಿಖೆ ನಡೆಸುತ್ತಿದ್ದರು. ತನಿಖೆ ವೇಳೆ ದಾಖಲೆಗಳನ್ನು ತಿದ್ದುಪಡಿ ಮಾಡಬಹುದು, ದಾಖಲೆಗಳನ್ನು ಹಾಗೂ ಸಾಕ್ಷ್ಯಗಳನ್ನು ನಾಶ ಮಾಡಬಹುದು ಅಲ್ಲದೆ ತನಿಖೆ ಅಡ್ಡಿ ಉಂಟು ಮಾಡವ ಸಾಧ್ಯತೆ ಇರುವುದರಿಂದ ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ನಿರ್ಮಿತಿ ಕೇಂದ್ರದ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಅವರು ಮೂಡಲಗಿರಿಯಪ್ಪ ಮತ್ತು ಸತೀಶ್‌ಕಲ್ಲಟ್ಟಿ ಅವರನ್ನ ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ವಿಮುಕ್ತಿಗೊಳಿಸಿ ಇಂದು ಆದೇಶಿಸಿದ್ದಾರೆ.