ಹಣ ಜಮೆಗೆ ೧೫ ದಿನಗಳ ಗಡು: ಬೆಳೆ ಸಾಲಮನ್ನಾ ವಂಚಿತ ರೈತರ ಪ್ರತಿಭಟನೆ

ಪುತ್ತೂರು,ಜು.೧೮- ಮುಂದಿನ ೧೫ ದಿನದೊಳಗೆ ಎಲ್ಲಾ ಆರ್ಹ ರೈತರ ಬೆಳೆಸಾಲ ಮನ್ನಾ ಹಣವನ್ನು ರೈತರ ಖಾತೆಗೆ ಜಮೆ ಮಾಡಬೇಕು. ಇಲ್ಲದಿದ್ದರೆ ಮುಂದೆ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಭಾರತೀಯ ಕಿಸಾನ್ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸಂಘಟನಾ ಕಾರ್ಯದರ್ಶಿ ನಾರಾಯಣ ಸ್ವಾಮಿ ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ನರಿಮೊಗ್ರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಆವರಣದಲ್ಲಿ ಭಾರತೀಯ ಕಿಸಾನ್ ಸಂಘದ ನೇತೃತ್ವದಲ್ಲಿ ಹಮ್ಮಿಕೊಳ್ಳಲಾದ ಸಾಲಮನ್ನಾ ವಂಚಿತರ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ಇಡೀ ತಾಲೂಕಿನ ಎಲ್ಲಾ ಸಹಕಾರಿ ಬ್ಯಾಂಕ್‌ಗಳನ್ನು ಸಂಪರ್ಕಿಸಿ ಸಾಲಮನ್ನಾ ವಂಚಿತರನ್ನು ಸೇರಿಸಿಕೊಂಡು ಹೋರಾಟಕ್ಕೆ ಇಳಿಯಲಾಗುವುದು. ಪುತ್ತೂರಿನಲ್ಲಿ ರೈತರ ಜಾಥಾದೊಂದಿಗೆ ಮಿನಿವಿಧಾನಸೌಧದ ಮುಂದೆ ಪ್ರತಿಭಟನೆ ಆರಂಭಿಸಲಾಗುವುದು. ಇದು ರಾಜ್ಯಕ್ಕೆ ಸಂಬಂಧಿಸಿದ ವಿಚಾರವಾಗಿರುವ ಕಾರಣ ಪ್ರತೀ ಜಿಲ್ಲೆಗಳಲ್ಲಿ ಹಾಗೂ ರಾಜ್ಯಮಟ್ಟದಲ್ಲಿ ಹೋರಾಟ ನಡೆಸಲಾಗುವುದು. ಸ್ಪಂದನೆ ಸಿಗದಿದ್ದರೆ ಮುಂದೆ ನ್ಯಾಯಾಲಯದಲ್ಲಿ ದಾವೆ ಹೂಡಿ ಕಾನೂನು ಹೋರಾಟ ಆರಂಭಿಸಲಾಗುವುದು ಎಂದು ಅವರು ತಿಳಿಸಿದರು.
ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಶಾಂತಿಪ್ರಸಾದ್ ಹೆಗಡೆ ಅವರು ಮಾತನಾಡಿ, ಸಾಲಮನ್ನಾ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾದರೆ ಕೇವಲ ಸಾಲಮನ್ನಾ ವಂಚಿತರಲ್ಲದೆ ಎಲ್ಲಾ ರೈತರು ಸೇರಿಕೊಂಡು ಸಂಘಟಿತ ಹೋರಾಟಕ್ಕಿಳಿಯಬೇಕು ಎಂದರು.
ಭಾರತೀಯ ಕಿಸಾನ್ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಕಾರಿ ಸಮಿತಿ ಸದಸ್ಯ ಸುಬ್ರಾಯ ಬಿ.ಎಸ್ ಅವರು ಮಾತನಾಡಿ, ನರಿಮೊಗ್ರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ವ್ಯಾಪ್ತಿಯಲ್ಲಿ ೨೪೬ ಮಂದಿ ರೈತರಿಗೆ ಬೆಳೆಸಾಲ ಮನ್ನಾ ಆಗಲು ಬಾಕಿ ಇದೆ. ಇಷ್ಟೊಂದು ಸಂಖ್ಯೆಯ ಸಾಲಮನ್ನಾ ವಂಚಿತ ರೈತರು ಬೇರೆ ಯಾವ ಸಹಕಾರಿ ಸಂಘದ ವ್ಯಾಪ್ತಿಯಲ್ಲಿ ಇಲ್ಲ. ಎಲ್ಲಾ ಕಡೆ ಸಮಸ್ಯೆ ಇತ್ತು. ಆದರೆ ಬೇರೆ ಕಡೆಯ ಸಹಕಾರಿ ಸಂಘದ ಆಡಳಿತ ಮಂಡಳಿಯವರು ಬೆಂಗಳೂರಿಗೆ ತೆರಳಿ, ಸಂಬಂಧಪಟ್ಟವರನ್ನು ಸಂಪರ್ಕಿಸಿ ಸಮಸ್ಯೆ ಬಗೆಹರಿಸಿಕೊಂಡಿದ್ದಾರೆ. ಆದರೆ ಇಲ್ಲಿನ ಆಡಳಿತ ಮಂಡಳಿಯ ನಿಷ್ಕ್ರೀಯತೆಯಿಂದಾಗಿ ಇಷ್ಟೊಂದು ಮಂದಿ ರೈತರು ಸಾಲಮನ್ನಾ ವಂಚಿತರಾಗುವಂತಾಗಿದೆ ಎಂದರು.
ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಅವರು ಮಾತನಾಡಿ, ರೈತರ ಹೋರಾಟಕ್ಕೆ ನಮ್ಮ ಬೆಂಬಲವಿದೆ. ರೈತರ ಜತೆಗೂಡಿ ಹೋರಾಟ ಮಾಡಲು ಸಿದ್ಧ ಎಂದರು.
ಭಾರತೀಯ ಕಿಸಾನ್ ಸಂಘದ ಶಾಂತಿಗೋಡು ಗ್ರಾಮ ಸಮಿತಿಯ ಅಧ್ಯಕ್ಷ ಎಸ್.ಪಿ.ನಾರಾಯಣ ಗೌಡ ಅವರು ಅಧ್ಯಕ್ಷತೆ ವಹಿಸಿದ್ದರು. ನರಿಮೊಗ್ರು ಗ್ರಾಮ ಸಮಿತಿಯ ಅಧ್ಯಕ್ಷ ಸುರೇಶ್ ಪ್ರಭು ಅವರು ಪ್ರಸ್ತಾವಿಕವಾಗಿ ಮಾತನಾಡಿದರು.
ಭಾರತೀಯ ಕಿಸಾನ್ ಸಂಘದ ಮೂಡಬಿದ್ರೆ ತಾಲ್ಲೂಕು ಸಮಿತಿಯ ಕಾರ್ಯದರ್ಶಿ ಪ್ರವೀಣ್, ಶಾಂತಿಗೋಡು ಗ್ರಾಮ ಸಮಿತಿಯ ಕಾರ್ಯದರ್ಶಿ ವಿಶ್ವನಾಥ ಬಲ್ಯಾಯ, ನರಿಮೊಗ್ರು ಗ್ರಾಮ ಸಮಿತಿಯ ಕಾರ್ಯದರ್ಶಿ ರಾಜಾರಾಮ ನೆಲ್ಲಿತ್ತಾಯ ಮತ್ತಿತರರು ಇದ್ದರು.