ಹಣ ಕೊಡದಿದ್ದರೆ ವಿಡಿಯೋ ಬಿಡುಗಡೆ; ಹೆದರಿ ಪದವೀಧರ ಆತ್ಮಹತ್ಯೆ

ಬೆಂಗಳೂರು,ಏ.7- ಕೆಆರ್​ಪುರಂದಲ್ಲಿ ಎಂಬಿಎ ಪದವೀಧರ ಕಳೆದ ತಿಂಗಳು ಮಾಡಿಕೊಂಡ ಆತ್ಮಹತ್ಯೆಗೆ ಹೊಸ ತಿರುವು ಪಡೆದುಕೊಂಡಿದೆ.
ಅವಿನಾಶ್​ ಎಂಬ ಯುವಕ ಮಾರ್ಚ್​ 23ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೆ ಅವರು ಸಾಯಲು ಯಾವುದೇ ಕಾರಣಗಳು ಇರಲಿಲ್ಲ ಎಂದೇ ಅಂದುಕೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಅವರ ಸಾವಿನ ಬಗ್ಗೆ ಅನೇಕ ಊಹಾಪೋಹಗಳು ಹುಟ್ಟಿಕೊಂಡಿದ್ದವು. ಇದೀಗ ಯುವತಿಯೊಬ್ಬಳ ಹೆಸರಿನಲ್ಲಿ ಇರುವ ಫೇಸ್​ಬುಕ್​ ಖಾತೆಯಿಂದ ಬಂದಿರುವ ಬೆದರಿಕೆಯಿಂದಾಗಿ ಯುವಕ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಅವಿನಾಶ್​ ಅವರ ಸಹೋದರಿ ಈ ಕುರಿತು ಮಹತ್ವದ ದಾಖಲೆಗಳನ್ನು ಒದಗಿಸಿದ್ದಾರೆ. ಬ್ಲಾಕ್ ಮೇಲರ್ಸ್​ಗೆ ಹೆದರಿ ಸಹೋದರ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಅವರು ದೂರಿದ್ದಾರೆ. ಫೇಸ್​ಬುಕ್ ಚಾಟ್​ಗಳಲ್ಲಿ ಯುವಕನಿಗೆ ಬೆದರಿಕೆಯ ಬಗ್ಗೆ ಮಾಹಿತಿಯನ್ನು ಅವರು ನೋಡಿದ್ದಾರೆ.
ಖಾಸಗಿ ದೃಶ್ಯಗಳನ್ನು ಸೆರೆ ಹಿಡಿದು ಹಣಕ್ಕಾಗಿ ನೇಹಾಶರ್ಮಾ ಎಂಬ ಹೆಸರಿನ ಫೇಸ್​ಬುಕ್​ ಖಾತೆಯಿಂದ ಬ್ಲ್ಯಾಕ್​ಮೇಲ್​ ಮಾಡಲಾಗುತ್ತಿತ್ತು. ಹಣವನ್ನು ನೀಡದೇ ಹೋದರೆ ಖಾಸಗಿ ವಿಡಿಯೋಗಳನ್ನು ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಲಾಗುತ್ತಿತ್ತು. ಸಾಯುವ ಒಂದು ದಿನದ ಮುಂಚೆ ಹಣವನ್ನು ಅವಿನಾಶ್​ ವರ್ಗಾಯಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ತನ್ನ ಸ್ನೇಹಿತರ ಬಳಿ ಕೂಡ ಅವಿನಾಶ್​ ಹಣ ಪಡೆದುಕೊಂಡಿದ್ದರು. ಸಾವಿನ ಬಳಿಕ ಯುವಕ ಹಣ ಪಡೆದುಕೊಂಡಿದ್ದ ಬಗ್ಗೆ ಸ್ನೇಹಿತರ ಮಾಹಿತಿ ಸಿಕ್ಕಿದೆ. ನೇಹಾಶರ್ಮಾ ಎಂಬ ಫೇಸ್ ಬುಕ್ ಖಾತೆಯಿಂದ ಹಣಕ್ಕಾಗಿ ಬೇಡಿಕೆ ಬರುತ್ತಿತ್ತು. ಆದರೆ ಇದು ನಕಲಿ ಖಾತೆಯಾಗಿತ್ತು ಎನ್ನಲಾಗಿದೆ.
ಫೇಸ್ ಬುಕ್ ವೀಡಿಯೋ ಕಾಲಿಂಗ್ ನಲ್ಲಿ ದೃಶ್ಯಗಳನ್ನು ಸೆರೆ ಹಿಡಿದು ಹಣಕ್ಕಾಗಿ ಪೀಡಿಸಲಾಗುತ್ತಿತ್ತು ಎಂದು ಅವಿನಾಶ್​ ಸಹೋದರೊ ದೂರಿನಲ್ಲಿ ಹೇಳಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.