ಹಣ ಉಳಿತಾಯ ಮಾಡಿ ಭವಿಷ್ಯ ಸುಧಾರಣೆಗೆ ಮುಂದಾಗಿ-ಗಜಾನನ ಸಾನ್ವಿ

ರಾಯಚೂರು, ಜೂ.೧೦- ಕಾರ್ಮಿಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಒಳ್ಳೆಯ ಜೀವನ ನಡೆಸಬೇಕು. ದುಡಿಮೆಯ ಒಂದಿಷ್ಟು ಹಣ ಉಳಿತಾಯ ಮಾಡಿ ಭವಿಷ್ಯ ಸುಧಾರಣೆಗೆ ಮುಂದಾಗಬೇಕು ಎಂದು ಯುನಿಯನ್ ಬ್ಯಾಂಕ್ ಮ್ಯಾನೇಜರ್ ಗಜಾನನ ಸಾನ್ವಿ ಅವರು ಸಲಹೆ ನೀಡಿದರು.
ಅವರು ಮೈಲಾರ್ ನಗರದಲ್ಲಿ ವಿ.ಫಾರ್ ಯು ತಂಡದ ನೇತೃತ್ವದಲ್ಲಿ ಸ್ಮಶಾನದಲ್ಲಿ ಗುಂಡಿ ತೊಡುವ ಕಾರ್ಮಿಕರಿಗೆ ಆಹರದ ಕಿಟ್ ವಿತರಣೆ ಮಾಡಿ ಮಾತನಾಡಿದರು.
ಸಂಸ್ಥೆಯ ಸಂಚಾಲಕ ಡಾ. ವೆಂಕಟೇಶ ಕುಮಾರ ಮಾತನಾಡಿ, ಸ್ಮಶಾನ ಅಗೆಯುವ ಕಾರ್ಮಿಕರ ಶ್ರಮ ಮಾದರಿಯಾಗಿದೆ.ಜಾತಿಮತ ಭೇದವಿಲ್ಲದೇ ಅಂತಿಮ ಸಂಸ್ಕಾರಕ್ಕೆ ಗುಂಡಿ ಅಗೆಯುವುದು ಶ್ಲಾಘನೀಯ. ಕುಡಿತದ ಚಟ ಆರೋಗ್ಯಕ್ಕೆಹಾನಿಕರ ಹಾಗೂ ಕುಟುಂಬದ ನೆಮ್ಮದಿ ಕುಸಿಯುತ್ತದೆ. ಎಲ್ಲರೂ ಒಳ್ಳೆಯ ಹವ್ಯಾಸ ಬೆಳೆಸಿಕೊಂಡು ಜೀವನ ನಡೆಸಿ ಮಾದರಿಯಾಗಬೇಕು ಎಂದು ಹೇಳಿದರು.
ವಿ.ಫಾರ್ ಯು ಸಂಸ್ಥೆ ಯ ಸಂಚಾಲಕ ರಾಜೇಂದ್ರ ಶಿವಾಳೆ ಮಾತನಾಡಿ, ಕಾರ್ಮಿಕರು ಕೆಲಸದ ಸ್ಥಳ ಹಾಗೂ ಮನೆಗಳಲ್ಲಿ ಸ್ವಚ್ಛತೆ ಕಾಪಾಡಿಕೊಂಡು ಆರೋಗ್ಯದ ಕಡೆ ಗಮನಹರಿಸಬೇಕು. ಸ್ಮಶಾನದಲ್ಲಿ ಸಾಕಷ್ಟು ಸಮಸ್ಯೆಗಳಿದ್ದು ಮೂಲಸೌಕರ್ಯ ಕಲ್ಪಿಸಲು ಸ್ಥಳೀಯ ಆಡಳಿತದ ಗಮನಕ್ಕೆ ತರಲಾಗುವುದು. ಯಾವುದೇ ಸಂದರ್ಭದಲ್ಲಿ ಸಂಕಷ್ಟ ಎದುರಾದರೆ ಸಂಸ್ಥೆಯ ಗಮನಕ್ಕೆ ತಂದರೆ ಸಹಾಯ ಮಾಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭಸಲ್ಲಿ ವಿ.ಫಾರ್ ಯು ಸಂಸ್ಥೆಯ ಅವಿನಾಶ ಪಾಟೀಲ ಮತ್ತಿತರರು ಇದ್ದರು.