ಹಣ ಅಕ್ರಮ ವರ್ಗಾವಣೆ ಪಾಂಡೆ ಬಂಧನ

ಮುಂಬೈ, ಜು.೨೦- ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ಮಾಜಿ ಪೊಲೀಸ್ ಆಯುಕ್ತ ಸಂಜಯ್ ಪಾಂಡೆ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ.
ರಾಷ್ಟ್ರೀಯ ಷೇರುಪೇಟೆಯ ನೌಕರರ ಫೋನ್ ಟ್ಯಾಂಪಿಂಗ್‌ಗೆ ಸಂಬಂಧಿಸಿದಂತೆ ಹಣ ಅಕ್ರಮ ವರ್ಗಾವಣೆ ಪ್ರಕರಣದಡಿ
ಸಿಬಿಐ, ಚಿತ್ರಾ ರಾಮಕೃಷ್ಣ ಅವರನ್ನು ಬಂಧಿಸಿದ ಕೆಲ ದಿನಗಳ ಬಳಿಕ ಸಂಜಯ್ ಪಾಂಡೆ ವಿರುದ್ಧ ಇ.ಡಿ ಕ್ರಮ ಕೈಗೊಂಡಿದೆ.
ಸಂಜಯ್ ಪಾಂಡೆ ಒಡೆತನದ ಐಸೆಕ್ ಸೆಕ್ಯುರಿಟೀಸ್ ಪ್ರೈವೇಟ್ ಲಿಮಿಟೇಡ್ ಸಂಸ್ಥೆಯು ೨೦೦೯ರಿಂದ ೨೦೧೭ರವರೆಗೆ ಎನ್‌ಎಸ್‌ಇ ನೌಕರರ ಫೋನ್ ಟ್ಯಾಪಿಂಗ್ ಮಾಡಿ ನರೈನ್ ಮತ್ತು ಚಿತ್ರಾ ರಾಮಕೃಷ್ಣ ಅವರಿಗೆ ಮಾಸಿಕ ವರದಿ ನೀಡುತ್ತಿತ್ತು ಎಂದು ಆರೋಪಿಸಲಾಗಿದೆ.
ಏಪ್ರಿಲ್ ೨೦೦೦ನೇ ಇಸವಿಯಲ್ಲಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ ಬಳಿಕ ಪಾಂಡೆ, ಈ ಸಂಸ್ಥೆಯನ್ನು ಸ್ಥಾಪಿಸಿದ್ದರು. ಆದರೆ, ಸರ್ಕಾರ ರಾಜೀನಾಮೆ ಅಂಗೀಕರಿಸದ ಕಾರಣ ಮತ್ತೆ ಪೊಲೀಸ್ ಹುದ್ದೆ ಮುಂದುವರಿಸಿದ್ದರು.
ತಮ್ಮ ತಾಯಿ ಮತ್ತು ಮಗನನ್ನು ಕಂಪನಿಗೆ ನಿರ್ದೇಶಕರಾಗಿ ನೇಮಕ ಮಾಡಿದ್ದರು. ಇನ್ನೂ ಸಂಜಯ್ ಪಾಂಡೆ ಮತ್ತು ಎನ್‌ಎಸ್‌ಇಯ ಇಬ್ಬರು ಮಾಜಿ ಮಖ್ಯಸ್ಥರಾದ ಚಿತ್ರಾ ರಾಮಕೃಷ್ಣ ಮತ್ತು ರವಿ ನರೈನ್ ವಿರುದ್ಧ ಇ.ಡಿ ಪ್ರಕರಣ ದಾಖಲಿಸಿಕೊಂಡಿದೆ.