ಹಣ್ಣು-ಹಂಪಲು ನೀಡಿ ಪ್ರಚಾರ ಬೇಡ ನಿಸ್ವಾರ್ಥ ಸೇವೆಗೆ ಮುಂದಾಗಿ: ಹಾದಿಮನಿ

ವಾಡಿ:ಮೇ.29: ಕೊರೊನಾ ಮಹಾಮಾರಿ ಸೊಂಕಿನಿಂದ ತತ್ತರಿಸಿರುವ ಜನರ ನೆರವಿಗೆ ಮುಂದಾಗುವ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಲಾಕ್‍ಡೌನ್ ಸಂಕಷ್ಟದ ಕಾರಣಕ್ಕೆ ಊಟ ಹಣ್ಣು ವಿತರಿಸುವ ದಾನಿಗಳು ಪ್ರಚಾರಕ್ಕಾಗಿ ಸೇವೆ ಮಾಡದೆ ನಿಸ್ವಾರ್ಥತೆ ಮೆರೆಯಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ವಿಠ್ಠಲ ಹಾದಿಮನಿ ಹೇಳಿದರು.

ಪಟ್ಟಣದಲ್ಲಿ ಸೊಂಕಿತರ ಚಿಕಿತ್ಸೆಯ ನೆರವಿಗಾಗಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಆರಂಭಿಸಲಾದ ಆಕ್ಸಿಜನ್-ಬೆಡ್ ಸಹಿತ ಉಚಿತ ಅಂಬೂಲೆನ್ಸ್ ಸೇವೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಕೆಲವರು ಹತ್ತಾರು ಜನಕ್ಕೆ ಅನ್ನದ ಪ್ಯಾಕೇಟ್ ಮತ್ತು ಹಣ್ಣು ನೀಡಿ ಭಾವಚಿತ್ರ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಬಿಟ್ಟಿ ಪ್ರಚಾರ ಪಡೆಯುತ್ತಿರುವುದು ಕಂಡು ಬಂದಿದೆ. ಜಿಲ್ಲಾಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಕಡಿವಾಣ ಹಾಕಲು ಸೂಚಿಸಿದ್ದಾರೆ. ಯಾರೇ ದಾನಿಗಳು ಬಡವರಿಗೆ ಅಥವಾ ಸೊಂಕಿತರಿಗೆ ನೆರವಾಗಲು ಇಚ್ಚಿಸಿದರೆ ತಕ್ಷಣ ಪುರಸಭೆ ಆಡಳಿತದ ಗಮನಕ್ಕೆ ತರಬೇಕು ಎಂದರು.

ಪಿಎಸ್‍ಐ ವಿಜಯಕುಮಾರ ಭಾವಗಿ ಮಾತನಾಡಿದರು. ಮಹರ್ಷಿ ವಾಲ್ಮೀಕಿ ಸಮಾಜದ ತಾಲೂಕು ಅಧ್ಯಕ್ಷ ಭೀಮರಾವ ದೊರೆ, ಪುರಸಭೆ ಸದಸ್ಯ ಪೃಥ್ವಿರಾಜ ಸೂರ್ಯವಂಶಿ, ಮುಖಂಡರಾದ ಅಬ್ದುಲ್ ರಶೀದ್, ಮರಲಿಂಗ ದೊಡ್ಡಮನಿ, ಡಾ.ಎಪಿಜೆ ಅಬ್ದುಲ್ ಕಲಾಂ ಮೊಮೋರಿಯಲ್ ಟ್ರಸ್ಟ್ ಅಧ್ಯಕ್ಷ ಭಾಗಣ್ಣ ದೊರೆ, ಪ್ರಧಾನ ಕಾರ್ಯದರ್ಶಿ ಅಭಿಶೇಕ ರಾಠೋಡ, ಪ್ರಕಾಶ ಕಟ್ಟಿಮನಿ, ಮಲ್ಲಿಕಾರ್ಜುನ ದೊಡ್ಡಮನಿ, ಸಿದ್ದೇಶ್ವರ ಚೋಪಡೆ, ಶ್ಯಾಮ ಚವ್ಹಾಣ, ದೊಡ್ಡಪ್ಪ ಪೂಜಾರಿ, ದತ್ತಾತ್ರೇಯ ಜಾನೆ, ಮಹ್ಮದ್ ರಫೀಕ್ ಪಾಲ್ಗೊಂಡಿದ್ದರು.