ಹಣ್ಣಿನ ರಾಜನ ಮೇಲೂ ಕೋವಿಡ್ ಕರಿನೆರಳು

ಭಾಲ್ಕಿ:ಮೇ.27: ಕೊರೊನಾ ಕಾರಣ ಮಾವಿನ ಹಣ್ಣಿನ ವ್ಯಾಪಾರ ಸಂಪೂರ್ಣ ಕುಸಿದಿದೆ. ಮಾವು ಖರೀದಿಸುವವರ ಸಂಖ್ಯೆ ಬಹಳ ವಿರಳವಾಗಿದೆ. ಹೀಗಾಗಿ ವ್ಯಾಪಾರಸ್ಥರು ನಷ್ಟ ಅನುಭವಿಸುವಂತಾಗಿದೆ.

ಸರ್ಕಾರ ತಳ್ಳು ಗಾಡಿಗಳಲ್ಲಿ ಹಣ್ಣಿನ ವ್ಯಾಪಾರಕ್ಕೆ ಅವಕಾಶ ನೀಡಿರುವುದರಿಂದ, ಅನೇಕರು ಅಂಗಡಿ ಮುಚ್ಚಿ ತಳ್ಳು ಗಾಡಿಗಳಲ್ಲಿ ವ್ಯಾಪಾರ ನಡೆಸುತ್ತಿದ್ದಾರೆ. ಅಲ್ಲದೇ ಮಹಿಳೆಯರು ಬುಟ್ಟಿಯಲ್ಲಿ ಮಾರುತ್ತಿದ್ದಾರೆ. ವ್ಯಾಪಾರದ ಅವಧಿಯೂ ಕಡಿಮೆ ಇರುವುದರಿಂದ ವ್ಯಾಪಾರವೂ ಉತ್ತಮವಾಗಿಲ್ಲ ಎಂಬುದು ಹಲವು ವ್ಯಾಪಾರಿಗಳು ಗೋಳು.

ಈ ಮಧ್ಯದಲ್ಲಿ ಎರಡು ಬಾರಿ ಸುರಿದ ಮಳೆ, ಬಿರುಗಾಳಿಗೆ ಅಲ್ಪಸ್ವಲ್ಪ ಬೆಳೆದು ನಿಂತಿದ್ದ ಮಾವಿನ ಫಸಲು ಉದುರಿದ್ದು, ಮರಗಳ ಫಸಲು ಖರೀದಿಸಿದ್ದ ವ್ಯಾಪಾರಸ್ಥರು ನಷ್ಟ ಅನುಭವಿಸಲು ಕಾರಣವಾಗಿದೆ.

‘ಈ ವರ್ಷ ₹2 ಲಕ್ಷ ಕೊಟ್ಟು 80 ಗಿಡಗಳ ಫಸಲನ್ನು ಖರೀದಿಸಿದ್ದೇವೆ.ವ್ಯಾಪಾರ ಕಡಿಮೆಯಾಗಿರುವುದರಿಂದ ತುಂಬಾ ನಷ್ಟವಾಗುತ್ತಿದೆ’ ಎಂದು ಖಟಕಚಿಂಚೋಳಿಯ ಗುಂಡಮ್ಮ ತಮ್ಮ ನೋವನ್ನು ತೋಡಿಕೊಂಡರು.
‘ವ್ಯಾಪಾರವನ್ನೇ ನೆಚ್ಚಿಕೊಂಡಿರುವ ನೂರಾರು ಕುಟುಂಬಗಳು ಕೋವಿಡ್‌ ಲಾಕ್‌ಡೌನ್‌ ಕಾರಣ ನಲುಗುತ್ತಿವೆ. ವ್ಯಾಪಾರವಾಗದ ತಾಜಾ ಹಣ್ಣುಗಳು ಕೊಳೆಯುತ್ತಿದ್ದು, ಮತ್ತಷ್ಟು ನಷ್ಟ ಅನುಭವಿಸುವಂತಾಗಿದೆ’ ಎಂದು ತಿಳಿಸಿದರು.

‘ಅನೇಕ ವ್ಯಾಪಾರಿಗಳು ರೈತರಿಗೆ ಮುಂಗಡವಾಗಿ ಹಣ ಪಾವತಿಸಿ ಗಿಡಗಳನ್ನು ಒಂದು ವರ್ಷದ ಅವಧಿಗೆ ತೆಗೆದುಕೊಳ್ಳುತ್ತಾರೆ. ಪ್ರತಿದಿನ ಲಾರಿಯಲ್ಲಿ ಬೇರೆ ಬೇರೆ ನಗರಗಳಿಗೆ ಹಾಗೂ ಬೇರೆ ರಾಜ್ಯಗಳಿಗೆ ಕಳುಹಿಸಲಾಗುತಿತ್ತು. ಆದರೆ ಪ್ರಸ್ತುತ ದಿನಗಳಲ್ಲಿ ಎಲ್ಲಾ ಕಡೆ ಕರ್ಫ್ಯೂ ಜಾರಿಯಲ್ಲಿದೆ. ಹೀಗಾಗಿ ಬೇರೆ ಮಾರುಕಟ್ಟೆಗೆ ಹಣ್ಣು ಹೋಗುತ್ತಿಲ್ಲ. ಇದರಿಂದ ತುಂಬಾ ತೊಂದರೆ ಆಗುತ್ತಿದೆ’ ಎಂದು ವ್ಯಾಪಾರಿ ರಫಿಕ್ ಹೇಳುತ್ತಾರೆ.

‘ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮಾವಿಗೆ ಬೆಲೆ ಕಡಿಮೆ ಇದೆ. ಗುಣಮಟ್ಟದ ಮಾವು ಹಿಂದಿನ ವರ್ಷ ಕೆ.ಜಿಗೆ ₹80 ರಿಂದ ₹100 ಮಾರಾಟವಾಗಿದ್ದರೆ, ಈ ಬಾರಿ ₹40 ರಿಂದ ₹50ಕ್ಕೆ ಇಳಿದಿದೆ’ ಎಂದು ಹೇಳಿದರು.