ಹಣಮಂತಪ್ಪ ಪಾಟೀಲ ನಿಧನಕ್ಕೆ ಸಚಿವ ಪ್ರಭು ಚವ್ಹಾಣ್ ಕಂಬನಿ

ಬೀದರ. ಮೇ.27: ಗಡಿ ಜಿಲ್ಲೆ ಬೀದರ್‍ನಲ್ಲಿ ಕನ್ನಡವನ್ನು ಗಟ್ಟಿಗೊಳಿಸಲು ಹೋರಾಡಿದ್ದ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮೊಟ್ಟ ಮೊದಲ ಅಧ್ಯಕ್ಷರಾಗಿ ಕನ್ನಡ ರಥವನ್ನು ಎಳೆದ ಹಿರಿಯ ಜೀವಿ ಹಣಮಂತಪ್ಪ ಪಾಟೀಲ ಅವರು ದೈವಾಧೀನರಾದ ವಿಷಯ ತಿಳಿದು ಆಘಾತವಾಗಿದೆ ಎಂದು ಪಶು ಸಂಗೋಪನೆ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಅವರು ಕಂಬನಿ ಮಿಡಿದಿದ್ದಾರೆ.
ಅತ್ಯಂತ ಸರಳ ಮತ್ತು ಸೌಜನ್ಯ ವ್ಯಕ್ತಿತ್ವದ ಪಾಟೀಲರು ಕನ್ನಡವನ್ನೇ ತಮ್ಮ ಉಸಿರಾಗಿಸಿಕೊಂಡಿದ್ದರು. 1960ರಲ್ಲಿ ಡಿ.ಎಲ್.ನರಸಿಂಹಾಚಾರ್ಯ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದ ಬೀದರ್‍ನ ಮೊಟ್ಟಮೊದಲ ಮತ್ತು 41ನೆಯ ಅಖಿಲ ಭಾರತ ಸಮ್ಮೇಳನಕ್ಕೆ ಸಾಕ್ಷಿಯಾಗಿದ್ದರು. ಕಸಾಪ ಜಿಲ್ಲಾಧ್ಯಕ್ಷರಾಗಿ ಜಿಲ್ಲಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನೆರವೇರಿಸಿದ ಹೆಗ್ಗಳಿಗೆ ಹೊಂದಿದ್ದಾರೆ. 2016ರ ಡಿಸೆಂಬರ್ 9 ಮತ್ತು 10ರಂದು ನಡೆದ ಬೀದರ ಜಿಲ್ಲಾ 15ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕನ್ನಡದ ತೇರನ್ನು ಎಳೆದಿದ್ದರು ಎಂದು ಪಾಟೀಲರ ಕನ್ನಡ ಸೇವೆಯನ್ನು ಸ್ಮರಿಸಿದ್ದಾರೆ.
ಇಂತಹ ಮಹಾಚೇತನರನ್ನು 2019ರ ನವೆಂಬರ್ 1ರಂದು ನಡೆದ ಕರ್ನಾಟಕ ರಾಜ್ಯೋತ್ಸವ ದಿನದಂದು ಅವರ ಮನೆಗೆ ಭೇಟಿ ನೀಡಿ, ಗೌರವಿಸಿದ್ದು ನನ್ನ ಸುದೈವ. ಅವರ ಅಗಲಿಕೆಯಿಂದ ಜಿಲ್ಲೆಗಷ್ಟೇ ಅಲ್ಲದೇ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಕುಟುಂಬಸ್ಥರು ಹಾಗೂ ಜಿಲ್ಲೆಯ ಕನ್ನಡಾಭಿಮಾನಿಗಳಿಗೆ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ದೇವರು ನೀಡಲಿ. ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಸಚಿವರು ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.