ಹಣಮಂತಪ್ಪ ಪಾಟೀಲರಿಗೆ ನುಡಿನಮನ ಸಮರ್ಪಣೆ

ಬೀದರ:ಮೇ.31: ಹಿರಿಯ ಪತ್ರಕರ್ತರು, ಜಿಲ್ಲಾ ಪ್ರಥಮ ಕನ್ನಡ ಸಾಹಿತ್ಯ ಪರಿಷತ್ ಚೊಚ್ಚಲ ಅಧ್ಯಕ್ಷರು, ಶಿಕ್ಷಣ ತಜ್ಞರು ಆಗಿದ್ದ ಹಣಮಂತಪ್ಪ ಪಾಟೀಲ ಅವರಿಗೆ ಇಂದು ಕರ್ನಾಟಕ ಸಾಹಿತ್ಯ ಸಂಘದ ಸಭಾಂಗಣದಲ್ಲಿ ಸರ್ಕಾರದ ಕೋವಿಡ್ ಹಿನ್ನೆಲೆ ಮಾರ್ಗಸೂಚಿ ಅಡಿ ಸರಳ ಹಾಗೂ ದೈಹಿಕ ಅಂತರ ಕಾಪಾಡಿಕೊಳ್ಳುವ ಮೂಲಕ ನುಡಿನಮನ ಸಮರ್ಪಿಸಲಾಯಿತು.

ಹಿರಿಯ ಸಾಹಿತಿ ಎಮ್.ಜಿ ದೇಶಪಾಂಡೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಹಣಮಂತಪ್ಪ ಪಾಟೀಲ ಅವರು ಬಹುಮುಖ ಪ್ರತಿಭೆಯ ಸಾಕಾರ ಮೂರ್ತಿಗಳಾಗಿದ್ದರು. ಜಿಲ್ಲೆಯಲ್ಲಿ ಮಾಧ್ಯಮ ಕ್ಷೇತ್ರವನ್ನು ಎತ್ತರಕ್ಕೆ ಕೊಂಡೊಯ್ದವರು, ಈ ಭಾಗದಲ್ಲಿ ಕನ್ನಡ ನಾಡು, ನುಡಿ ಬಗ್ಗೆ ಅಪಾರ ಕಾಳಜಿ ಉಳ್ಳುವರಾಗಿ 41ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಬೀದರ್‍ನಲ್ಲಿ ಹಮ್ಮಿಕೊಂಡು ಯಶಸ್ವಿಗೊಳಿಸಿದ ಶ್ರಯಸ್ಸು ಅವರಿಗೂ ಸಲ್ಲುತ್ತದೆ. ಕರ್ನಾಟಕ ಹೈಸ್ಕೂಲ್‍ನಲ್ಲಿ ಶಿಕ್ಷಕ ವೃತ್ತಿಯಲ್ಲಿ ತೊಡಗಿ ಶೈಕ್ಷಣಿಕ ಕ್ಷೇತ್ರವನ್ನು ಸಹ ಶ್ರೀಮಂತಗೊಳಿಸಿದರು. ಅವರ ಬಹುಮುಖ ಪ್ರತಿಭೆ ಇಂದಿನ ಯುವ ಸಾಹಿತಿಗಳು ಹಾಗೂ ಪತ್ರಕರ್ತರಿಗೆ ಮಾದರಿಪ್ರಾಯರಾಗಿದೆ ಎಂದು ಬಣ್ಣಿಸಿದರು.

ಅಧ್ಯಕ್ಷತೆ ವಹಿಸಿದ ಜಿಲ್ಲಾ ಅಭಿವೃದ್ಧಿ ವೇದಿಕೆ ಅಧ್ಯಕ್ಷ ಡಾ.ಚನ್ನಬಸಪ್ಪ ಹಾಲಳ್ಳಿ ಮಾತನಾಡಿ, ಹಣಮಂತಪ್ಪ ಪಾಟೀಲ ಅವರು ಶಿಕ್ಷಣ, ಪತ್ರಿಕೆ ಹಾಗೂ ಸಾಹಿತ್ಯ ಕ್ಷೇತ್ರಗಳನ್ನು ಒಟ್ಟೆಗೆ ಕೂಡಿಸುವ ಕೆಲಸ ಮಾಡಿದವರು. ವೃತ್ತಿಯಲ್ಲಿ ಮುಂಚೂಣಿಯಲ್ಲಿದ್ದರೂ ಅಧಿಕಾರದಾಹದಿಂದ ದೂರ ಇರುತ್ತಿದ್ದರು. ಅನೇಕರನ್ನು ಕೂಡಿಕೊಂಡು ಕರ್ನಾಟಕ ಸಾಹಿತ್ಯ ಸಂಘವನ್ನು ಹುಟ್ಟು ಹಾಕಿ ಅದರ ಏಳಿಗೆಗೆ ನೀರೆರೆದವರು ಹಣಮಂತಪ್ಪ ಪಾಟೀಲರಾಗಿದ್ದಾರೆ ಎಂದು ಕೊಂಡಾಡಿದರು.

ಕರ್ನಾಟಕ ಸಾಹಿತ್ಯ ಸಂಘದ ಅಧ್ಯಕ್ಷ ಡಾ.ಜಗನ್ನಾಥ ಹೆಬ್ಬಾಳೆ ಮಾತನಾಡಿ, ಹಣಮಂತಪ್ಪ ಪಾಟೀಲರು ವೃತ್ತಿಯಲ್ಲಿ ಶಿಕ್ಷಕರಾಗಿದ್ದರೂ ಎಲ್ಲ ಕ್ಷೇತ್ರಗಳನ್ನು ಕರಗತ ಮಾಡಿಕೊಂಡಿದ್ದರು. ಹಾಗಾಗಿಯೇ ಇಲ್ಲಿ 41ನೇ ಸಾಹಿತ್ಯ ಸಮ್ಮೇಳನ ಐಶಸ್ವಿಯಾಗಿಸಲು ಹಗಲಿರುಳು ದುಡಿದು ಈ ಭಾಗಕ್ಕೆ ಜಿ.ನಾರಾಯಣ ಅವರಾಗಿದ್ದರು. ಅವರ ಕ್ರಪೆಯಿಂದಲೇ ನಾನಿಂದು ಕರ್ನಾಟಕ ಸಾಹಿತ್ಯ ಸಂಘದ ಸಾರಥ್ಯ ನಡೆಸುತ್ತಿರುವೆ ಎಂದು ಸ್ಮರಿಸಿದರು.

ಕರ್ನಾಟಕ ಸಾಹಿತ್ಯ ಸಂಘದ ಕೋಶಾಧ್ಯಕ್ಷ ಪ್ರೊ.ರಸ್.ಬಿ ಬಿರಾದಾರ ಹಾಗೂ ಕರ್ನಾಟಕ ಜಾನಪದ ಪರಿಷತ್ ತಾಲೂಕಾಧ್ಯಕ್ಷ ಎಸ್.ಬಿ ಕುಚಬಾಳ ಮಾತನಾಡಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ಶಿವಕುಮಾರ ಸ್ವಾಮಿ, ಜಾನಪದ ಪರಿಷತ್ ತಾಲೂಕು ಸಂಘಟನಾ ಕಾರ್ಯದರ್ಶಿ ಪ್ರಕಾಶ ಕನ್ನಾಳೆ, ಜಂಟಿ ಕಾರ್ಯದರ್ಶಿ ಶಿವಶರಣಪ್ಪ ಗಣೇಶಪೂರ, ಪತ್ರಿಕಾ ಛಾಯಾಗ್ರಾಹಕ ಗೋಪಿಚಂದ್ ತಾಂದಳೆ, ಅಕ್ಕಮಹಾದೇವಿ ಸಹಕಾರ ಸಂಘದ ಲೆಕ್ಕಾಧಿಕಾರಿ ಉಮೇಶ ಮಾಶೆಟ್ಟೆ, ಸಿಬ್ಬಂದಿ ಶಿವಕುಮಾರ ಸೇರಿದಂತೆ ಇತರರಿದ್ದರು.

ಆರಂಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಜಿಲ್ಲಾ ಗೌರವ ಕಾರ್ಯದರ್ಶಿ ಡಾ.ರಾಜಕುಮಾರ ಹೆಬ್ಬಾಳೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಯುವ ಸಾಹಿತಿ ಮಹಾರುದ್ರ ಡಾಕುಳಗಿ ವಂದಿಸಿದರು.