ಹಣದ ಹಿಂದೆ ಬೆನ್ನತ್ತಿದವನ ಬಾಳು ಹಾಳು:ಯಾಳವಾರ

ಭಾಲ್ಕಿ:ಜ.11:ಆಧುನಿಕ ಯಾಂತ್ರಿಕ ಯುಗದಲ್ಲಿ ವ್ಯಕ್ತಿ ಹಣ ಗಳಿಸುವ ಹಪಾಪಿತನದಿಂದ ಅಮೂಲ್ಯವಾದ ಬದುಕು ಹಾಳು ಮಾಡಿಕೊಳ್ಳುತ್ತಿರುವುದು ಅತ್ಯಂತ ಖೇದದ ಸಂಗತಿಯಾಗಿದೆ ಎಂದು ಹಿರಿಯ ಸಾಹಿತಿ ಡಾ.ಸೋಮನಾಥ ಯಾಳವಾರ್ ಅಭಿಪ್ರಾಯಪಟ್ಟರು.
ಪಟ್ಟಣದ ಉಪನ್ಯಾಸಕರ ಬಡಾವಣೆಯ ಗುರು ಕಾಲೋನಿಯ ದತ್ತ ಮಂದಿರ ಆವರಣದಲ್ಲಿ ಶಿವಾಜಿ ಪದವಿ ಪೂರ್ವ ಕಾಲೇಜಿನ ವಿಶ್ರಾಂತ ಕನ್ನಡ ಉಪನ್ಯಾಸಕ ಪ್ರೊ.ಶಂಭುಲಿಂಗ ಕಾಮಣ್ಣ ಅವರ ಅಭಿನಂದನಾ ಕಾರ್ಯಕ್ರಮ ಮತ್ತು ಸಾತ್ವಿಕ ಗ್ರಂಥ ಸಮರ್ಪಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು,ಸಾತ್ವಿಕ ಎಂದರೆ ಜೀವನ ವಿಧಾನ.ಅಂತರಂಗ,ಬಹಿರಂಗ ಶುದ್ಧಿಗೊಳಿಸಿ ಸಾತ್ವಿಕ ಬದುಕು ಸಾಗಿಸಿದ 12ನೇ ಶತಮಾನದ ಶರಣರ ಜೀವನ ವಿಶ್ವಕ್ಕೆ ಮಾದರಿಯಾಗಿದೆ.ಅರವತ್ತರ ನಂತರ ಬದುಕು ಮರುಳಾಗದೆ,ಅರಳುತ್ತದೆ ಎನ್ನುವುದನ್ನು ನಿವೃತ್ತಿಯಾದವರು ಅರಿತುಕೊಳ್ಳಬೇಕು.ಬರೆದಿಟ್ಟಂತೆ ಜೀವನ ನಡೆಸಲು ಸಾಧ್ಯವಾಗದಿದ್ದರೆ,ಬರೆದಿಡುವಂತೆ ಆದರ್ಶ ಜೀವನ ನಡೆಸಬೇಕು.ವಿಶ್ರಾಂತ ಶಂಭುಲಿಂಗ ಕಾಮಣ್ಣವರ ಹಾಸ್ಯಭರಿತ ಸಾಹಿತ್ಯಿಕ ಚಟುವಟಿಕೆಗಳು ಇತರರಿಗೆ ಪ್ರೇರಣೆ ನೀಡುತ್ತವೆ ಎಂದು ಹೇಳಿದರು.

ಸಾನಿಧ್ಯವಹಿಸಿ ಮಾತನಾಡಿದ ಡಾ.ಬಸವಲಿಂಗ ಪಟ್ಟದ್ದೇವರು,ನಾವು ಆಡುವ ಪ್ರತಿಯೊಂದು ಒಳ್ಳೆಯ ಮಾತಿನಿಂದ ವ್ಯಕ್ತಿಯ ಜೀವನದಲ್ಲಿ ಪರಿವರ್ತನೆ ತರಲು ಸಾಧ್ಯ.ಕಾರಣ ಪ್ರತಿಯೊಬ್ಬರು ಇನ್ನೋಬರ ಮನಸ್ಸು ಅರಳಿಸುವ ಮಾತುಗಳನ್ನೇ ನುಡಿಯಬೇಕು.ಪ್ರಯತ್ನ,ಪರಿಶ್ರಮದಿಂದ ಬೇಕಾದನ್ನು ಸಾಧಿಸಲು ಸಾಧ್ಯ,ಶರಣರ ತತ್ವ ಸಿದ್ಧಾಂತಗಳು ಮೈಗೂಡಿಸಿಕೊಂಡರೆ ಸಾತ್ವಿಕ ಬದುಕು ಸಾಗಿಸಬಹುದು.ಪ್ರೊ.ಶಂಭುಲಿಂಗ ಕಾಮಣ್ಣ ಅವರು ಸಾಮಾಜಿಕ,ಧಾರ್ಮಿಕ ಕ್ಷೇತ್ರದಲ್ಲಿ ಎತ್ತರೆತ್ತರಕ್ಕೆ ಬೆಳೆಯಲು ಧರ್ಮಪತ್ನಿ ಪುಣ್ಯವತಿಯವರ ಸಹಕಾರ,ಪ್ರೋತ್ಸಾಹ ಕಾರಣ ಎಂದು ಹೇಳಿ,ವಚನ ಸಾಹಿತ್ಯದಲ್ಲಿ ಪ್ರಭುತ್ವ ಸಾಧಿಸಿರುವ ಕಾಮಣ್ಣ ಅವರು,ವಿಶ್ರಾಂತಿಯ ಸಮಯ ಹಿರೇಮಠದ ಧಾರ್ಮಿಕ ಕಾರ್ಯಕ್ಕೆ ಮೀಸಲಿಡಬೇಕು ಎಂದು ತಿಳಿಸಿ,ಅವರ ನಿವೃತ್ತಿ ಜೀವನ ಉತ್ಸಾಹದಿಂದ ಕೂಡಿರಲಿ ಎಂದು ಶುಭ ಹಾರೈಸಿದರು.
ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ಶಿಖರೇಶ್ವರ ಶೆಟಕಾರ್ ಅಧ್ಯಕ್ಷತೆ ವಹಿಸಿದ್ದರು.
ಬೀದರ್ ಕರ್ನಾಟಕ ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಜಗನ್ನಾಥ ಹೆಬ್ಬಾಳೆ ಮಾತನಾಡಿ,ನಿವೃತ್ತ ಉಪನ್ಯಾಸಕ ಕಾಮಣ್ಣವರ ಸರಳ,ಶಾಂತ,ಶರಣ ಜೀವನ ಇತರರಿಗೆ ಮಾದರಿಯಾಗಿದೆ ಎಂದರು.
ಕಲಬುರಗಿಯ ಡಾ.ಟಿ.ಆರ್.ಗುರುಬಸಪ್ಪ ಮಾತನಾಡಿ,ಸಾತ್ವಿಕ ಆಲೋಚನೆಯಿಂದ ಆದರ್ಶ ಬದುಕು ಕಟ್ಟಿಕೊಳ್ಳಬಹುದು.ಸಮಯ ಪಾಲನೆ ಮಾಡಿದವನ ಬದುಕು ಯಶಸ್ವಿಯಾಗಿ ಸಾಗುತ್ತದೆ.ನಿವೃತ್ತಿ ನಂತರ ವಾಸ್ತವಿಕ ಜೀವನ ಆರಂಭವಾಗುತ್ತದೆ ಎಂದು ಬಹು ಮಾರ್ಮಿಕವಾಗಿ ನುಡಿದರು.ವಿಶ್ರಾಂತ ಉಪನ್ಯಾಸಕ ಪ್ರೊ.ಶಂಭುಲಿಂಗ ಕಾಮಣ್ಣ ಸ್ವಾಗತಿಸಿ,ನನ್ನ ನೈಜ ಜೀವನ ಬೆಳವಣಿಗೆಯಲ್ಲಿ ಹೆತ್ತ ತಂದೆ-ತಾಯಿಗಳ,ಧರ್ಮಪತ್ನಿ ಪುಣ್ಯವತಿ ಮತ್ತು ಕಿಸಾನ ಶಿಕ್ಷಣ ಪ್ರಸಾರಕ ಮಂಡಳ ಅಧ್ಯಕ್ಷ ಲಿಂ.ಬಾಬಾರಾವ ಹೊನ್ನಾಳಿಕರವರ ಪಾತ್ರ ಶ್ರೇಷ್ಠವಾಗಿದೆ ಎಂದರು.
ಸನ್ಮಾನ:ಅಪಾರ ಅಭಿಮಾನಿ ಬಳಗದವರು ಪ್ರೊ.ಶಂಭುಲಿಂಗ ಕಾಮಣ್ಣ ಮತ್ತು ಧರ್ಮಪತ್ನಿ ಪುಣ್ಯವತಿ ಅವರನ್ನು ಸನ್ಮಾನಿಸಿ,ಗೌರವಿಸಿದರು.
ಗೌರವ ಸನ್ಮಾನ:
ಇದೇ ಸಂದರ್ಭದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಡಾ.ಗುರುಲಿಂಗಪ್ಪ ಧಬಾಲೆ ಅಕ್ಕಲಕೋಟ(ಸಂಶೋಧನೆ), ಡಾ.ಕಲ್ಯಾಣರಾವ ಪಾಟೀಲ್ ಕಲಬುರಗಿ (ಸಾಹಿತ್ಯ), ಡಾ.ಚಂದ್ರಶೇಖರ ಬಿರಾದಾರ್ ಭಾಲ್ಕಿ(ಶೈಕ್ಷಣಿಕ), ಪಂಚಾಕ್ಷರಿ ಪುಣ್ಯಶೆಟ್ಟಿ ಬೀದರ್ (ನಾಡು-ನುಡಿ),ವಿಶ್ವನಾಥಪ್ಪ ಬಿರಾದಾರ್ ಭಾಲ್ಕಿ(ಧಾರ್ಮಿಕ), ಬಸವರಾಜ ಮರೆ ಭಾಲ್ಕಿ(ಸಂಘಟನೆ), ಶಿವಾಜಿ ಸಗರ ಭಾತಂಬ್ರಾ(ಸಂಗೀತ), ಪ್ರಭು ಕಾಂಬಳೆ ಕುಂಟೆಸಿರ್ಸಿ(ಕಲೆ) ಮತ್ತು ಹೀರಾಚಂದ ವಾಘಮಾರೆ ಭಾಲ್ಕಿ(ಸಾಮಾಜಿಕ) ಅವರಿಗೆ ಸನ್ಮಾನಿಸಿ, ಗೌರವಿಸಲಾಯಿತು.

ಕಲಬುರ್ಗಿಯ ಸಿ.ಎಸ್.ಆನಂದ ಪ್ರಾಸ್ತಾವಿಕ ಮಾತನಾಡಿದರು.ವೀರಣ್ಣ ಕುಂಬಾರ ನಿರೂಪಿಸಿದರು.ಕಲ್ಲಪ್ಪ ಹೂಗಾರ ವಂದಿಸಿದರು.