ಹಣದ ಚಿಂತೆ ಬಿಡಿ ಅಭಿವೃದ್ಧಿ ಕಾರ್ಯ ಚುರುಕುಗೊಳಿಸಿ ಸಿ.ಎಂ. ಸೂಚನೆ

ಬೆಂಗಳೂರು, ಮಾ.೨೫- ಹಣಕಾಸು ಬಗೆಗಿನ ಚಿಂತನೆಯನ್ನು ಗುತ್ತಿಗೆದಾರರು ಬದಿಗಿಟ್ಟು ಅಭಿವೃದ್ಧಿ ಯೋಜನೆಗಳು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದರು.

ನಗರದಲ್ಲಿಂದು ಶಾಂತಿನಗರ ಬಸ್ ನಿಲ್ದಾಣದ ಎದುರು ಕೋರಮಂಗಲ ರಾಜಕಾಲುವೆ(ಕೆ-೧೦೦)ಅನ್ನು ಕೆ.ಆರ್.ಮಾರುಕಟ್ಟೆಯಿಂದ ಬೆಳ್ಳಂದೂರು ಕೆರೆಯವರೆಗೆ ’ಜಲ ಮಾರ್ಗ ಅಭಿವೃದ್ಧಿ ಹಾಗೂ ಸೌಂದರೀಕರಣಗೊಳಿಸುವ ಯೋಜನೆ’ಗೆ ಶಂಕುಸ್ಥಾಪನೆಯನ್ನು ಮಾಡಿ ಅವರು ಮಾತನಾಡಿದರು.

ರಾಜ್ಯ ಸರ್ಕಾರದ ಬಳಿ ಹಣದ ಕೊರತೆ ಇಲ್ಲ. ಈ ಬಗ್ಗೆಯೂ ಆರೋಪಗಳು ಸತ್ಯಕ್ಕೆ ದೂರವಾಗಿದೆ.ಹಾಗಾಗಿ, ಯಾವುದೇ ಯೋಜನೆ ಇರಲಿ ಅದಕ್ಕೆ ಹಣಕಾಸಿನ ಚಿಂತೆ ಬಿಟ್ಟು, ಶೀಘ್ರದಲ್ಲೇ ಪೂರ್ಣಗೊಳಿಸುವ ಕಡೆಗೆ ಗುತ್ತಿಗೆದಾರರು ಗಮನ ನೀಡಬೇಕು ಎಂದು ತಿಳಿಸಿದರು.

ಸಿಲಿಕಾನ್ ಸಿಟಿಯ ಹೃದಯ ಭಾಗದಲ್ಲಿ ಹಾದು ಹೋಗಿರುವ ’ಜಲ ಮಾರ್ಗ’ಕ್ಕೆ ಪ್ರವಾಸಿ ತಾಣದ ಸ್ಪರ್ಶ ನೀಡಿ, ಗತಕಾಲದ ವೈಭವ ಮರುಕಳಿಸುವಂತೆ ಮಾಡಲು ಈ ಜಲಮಾರ್ಗ ಅಭಿವೃದ್ಧಿ ಯೋಜನೆ ರೂಪಿಸಲಾಗಿದೆ. ಇದು ಸಾಕಾರಗೊಂಡರೆ, ವರ್ಷಪೂರ್ತಿ ಕೊಳಚೆ ನೀರು ಹರಿಯುತ್ತಿದ್ದ ಕಾಲುವೆಯಲ್ಲಿ ಮಳೆ ನೀರಿನ ಝುಳು ಝುಳು ನಿನಾದ ಕೇಳಿ ಬರಲಿದೆ.ಅಲ್ಲದೆ, ಈ ಯೋಜನೆಯ ಮೊತ್ತ ೧೭೫ ಕೋಟಿ ರೂ.ಆಗಿದ್ದು, ಹತ್ತು ತಿಂಗಳಿನಲ್ಲಿ ಪೂರ್ಣಗೊಳಿಸಿ ಎಂದು ಸೂಚಿಸಿದರು.

ಮಿಷನ್ ಬೆಂಗಳೂರು- ೨೦೨೦ ಅಡಿಯಲ್ಲಿ ರಾಜಧಾನಿಯ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಎರಡು ವರ್ಷಗಳಲ್ಲಿ ಬೆಂಗಳೂರಿನ ಸಂಪೂರ್ಣ ಚಹರೆ ಬದಲಾಗಲಿದೆ ಎಂದ ಅವರು, ಸುಗಮ ಸಾರಿಗೆ, ಸ್ವಚ್ಛ ಪರಿಸರ, ವೈಜ್ಞಾನಿಕ ವಿಧಾನದಲ್ಲಿ ಘನ ತ್ಯಾಜ್ಯ ವಿಲೇವಾರಿ, ರಾಜ ಕಾಲುವೆಗಳ ಸಮಗ್ರ ನಿರ್ವಹಣೆ, ಕೆರೆಗಳ ಅಭಿವೃದ್ಧಿ ಸೇರಿದಂತೆ ಹಲವು ಕಾಮಗಾರಿಗಳನ್ನು ಯೋಜನೆಯಡಿ ಕೈಗೆತ್ತಿಕೊಳ್ಳಲಾಗಿದೆ ಎಂದರು.

ಬೆಂಗಳೂರು ನಗರದ ಹಸಿರು ಸಿರಿಯನ್ನು ಕಾಪಾಡುವ ನಿಟ್ಟಿನಲ್ಲಿ ಮತ್ತು ಗಾರ್ಡನ್ ಸಿಟಿ ಎಂಬ ಹೆಗ್ಗಳಿಕೆಗೆ ಪೂರಕವಾಗುವಂತೆ
ಹೊಸ ಉದ್ಯಾನಗಳು ಮತ್ತು ಬೃಹತ್ ವೃಕ್ಷೋದ್ಯಾನಗಳನ್ನೂ ನಿರ್ಮಿಸಲಾಗುವುದು ಎಂದು ಯಡಿಯೂರಪ್ಪ ಹೇಳಿದರು.

ಅಷ್ಟೇ ಅಲ್ಲದೆ, ಹಸಿರು ಬೆಂಗಳೂರು ನಿರ್ಮಾಣ ಗುರಿ ಹೊಂದಿದ್ದೇವೆ. ಸುಗಮ ಸಂಚಾರಕ್ಕೆ ಆದ್ಯತೆ ನೀಡಲಾಗುತ್ತಿದೆ. ಮೂಲಸೌಕರ್ಯಗಳ ಪೂರೈಕೆಗೆ ಗಮನ ಹರಿಸಲಾಗುತ್ತದೆ. ನಗರದ ಸಮಸ್ಯೆಗಳ ಕೂಲಂಕುಷ ಅಧ್ಯಯನ ಮಾಡಲಾಗಿದೆ. ಬೆಂಗಳೂರನ್ನು ವಿಶ್ವದರ್ಜೆಗೆ ಏರಿಸುವ ಹಾಗೂ ಬೆಂಗಳೂರಿನಲ್ಲಿ ಅತ್ಯುತ್ತಮ ರಸ್ತೆಗಳ ನಿರ್ಮಾಣದ ಮಹತ್ವಾಕಾಂಕ್ಷೆ ಹೊಂದಲಾಗಿದೆ ಎಂದು ಪುನರುಚ್ಚರಿಸಿದ್ದರು.

ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಮಾತನಾಡಿ, ನಗರದೆಲ್ಲೆಡೆ ಇರುವ ರಾಜಕಾಲುವೆಗಳ ಅಭಿವೃದ್ಧಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಿಶೇಷ ಒತ್ತು ನೀಡಿದ್ದು, ಇದನ್ನು ವಿಹಾರಧಾಮಗಳನ್ನಾಗಿ ಮಾಡುವ ಗುರಿ ನೀಡಲಾಗಿದೆ. ಮುಂದಿನ ಹತ್ತು ತಿಂಗಳಿನಲ್ಲಿ ರಾಜಕಾಲುವೆಗಳು ಪ್ರವಾಸಿ ತಾಣಗಳಾಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಶಾಸಕ ಉದಯ್ ಬಿ ಗರುಡಾಚಾರ್, ವಿಧಾನ ಪರಿಷತ್ ಸದಸ್ಯರಾದ ಕೆ.ಗೋವಿಂದರಾಜು, ಹೆಚ್.ಎಂ.ರಮೇಶ್ ಗೌಡ, ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮ, ಅಪರ ಮುಖ್ಯ ಕಾರ್ಯದರ್ಶಿ(ನಗರಾಭಿವೃದ್ಧಿ ಇಲಾಖೆ) ರಾಕೇಶ್ ಸಿಂಗ್, ಪಾಲಿಕೆ ಆಡಳಿತಗಾರ ಗೌರವ್ ಗುಪ್ತಾ, ಜಲಮಂಡಳಿ ಅಧ್ಯಕ್ಷ ಜಯರಾಮ್, ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.