ಹಣದ ಕೊರತೆ, ವಿಡಿಯೋದಲ್ಲಿ ತಾಯಿ ಅಂತ್ಯಸಂಸ್ಕಾರ ವೀಕ್ಷಣೆ

ಅಲಿಗಢ, ನ. ೨೧- ಹಣದ ಕೊರತೆ ಹೇಗಿರುತ್ತೆ ಅಂದರೆ ಮೃತಪಟ್ಟ ತಾಯಿಯ ಅಂತ್ಯಕ್ರಿಯೆಗೆ ತೆರಳಲು ಪುತ್ರಿಯ ಬಳಿ ಕಾಸಿಲ್ಲ. ಇದು ನಿಜಕ್ಕೂ ವಿಪರ್ಯಾಸದ ಸಂಗತಿ. ವಿಡಿಯೋ ಕಾಲ್‌ನಲ್ಲಿಯೇ ಮಗಳು ಅಂತಿಮ ದರ್ಶನ ಪಡೆದ ಘಟನೆಯೊಂದು ಅಲಿಘಡನಲ್ಲಿ ನಡೆದಿದೆ.
ಪಶ್ಚಿಮ ಬಂಗಾಳದಿಂದ ಕೂಲಿ ಮಾಡಿ ಜೀವನ ಸಾಗಿಸಲು ಬಂದಿದ್ದ ಮಹಿಳೆ ಅನಾರೋಗ್ಯದಿಂದ ಜೆಎನ್ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದರು. ಆದರೆ ಮೃತಳ ಪುತ್ರಿಗೆ ಅಲ್ಲಿಗೆ ಬರಲು ಹಣ ಇಲ್ಲದ ಕಾರಣದಿಂದ ಬರಲಾಗುತ್ತಿಲ್ಲ ಎಂದು ಪೊಲೀಸರಿಗೆ ತಿಳಿಸಿ ವಿಡಿಯೋ ಕಾಲ್‌ನಲ್ಲಿಯೇ ಅಂತಿಮ ದರ್ಶನ ಪಡೆದಿದ್ದಾರೆ.
ನಂತರ ಪೊಲೀಸರು ಮೃತಳ ಶವವನ್ನು ಅಂತಿಮ ವಿಧಿವಿಧಾನಕ್ಕಾಗಿ ಮಾನವ ಉಪಕಾರ್ ಹೆಸರಿನ ಸಂಸ್ಥೆಗೆ ಹಸ್ತಾಂತರಿಸಿದ್ದಾರೆ. ಈ ಸಂಸ್ಥೆಯವರು ಮೃತಳ ಅಂತ್ಯಸಂಸ್ಕಾರ ನೆರವೇರಿಸಿದ್ದು ಮಾತ್ರವಲ್ಲದೆ, ಅಂತ್ಯಸಂಸ್ಕಾರದ ದೃಶ್ಯಾವಳಿಯನ್ನು ವಿಡಿಯೊ ಕಾಲ್ ಮೂಲಕ ಮಗಳಿಗೆ ತೋರಿಸಿದ್ದಾರೆ. ಈ ವೇಳೆ ತಾಯಿಯ ಮುಖ ನೋಡಿ ಮಗಳು ರೋಧಿಸುತ್ತಿದ್ದ ದೃಶ್ಯ ನಿಜಕ್ಕೂ ಮನಕಲಕುವಂತಿತ್ತು.
ಮೃತ ಮಹಿಳೆಯ ಮೊಬೈಲ್ ಫೋನ್ ಪತ್ತೆಯಾಗಿದ್ದು, ಅದರ ಆಧಾರದ ಮೇಲೆ ಮಹಿಳೆಯನ್ನು ಪಶ್ಚಿಮ ಬಂಗಾಳದ ಶಿಘುಲ್ಕುಶಿ ಜಿಲ್ಲೆಯ ಕುಶ್ ವಿಹಾರ್ ನಿವಾಸಿ ಬುಲ್ಬುಲಿ ಪತ್ನಿ ಸ್ವಾವಿಪುಲ್ ಬರ್ಮನ್ ಎಂದು ಗುರುತಿಸಲಾಗಿದೆ. ಈ ಫೋನ್ ನೆರವಿನಿಂದ ಮೃತಳ ಮಗಳನ್ನು ಮಾತನಾಡಿಸಿದಾಗ, ಹಣದ ಕೊರತೆಯಿಂದ ತನಗೆ ಮಗಳು ಬರಲು ಸಾಧ್ಯವಾಗುತ್ತಿಲ್ಲ ಎಂದಿದ್ದಾಳೆ.
ತಾಯಿಯ ಅಂತ್ಯಸಂಸ್ಕಾರಕ್ಕೆ ಏಕೆ ಬರುತ್ತಿಲ್ಲ ಎಂದು ಮಾನವ್ ಉಪಕಾರ್ ಸಂಸ್ಥೆಯ ಅಧ್ಯಕ್ಷರು ಫೋನ್ ಮಾಡಿ ಕೇಳಿದಾಗ ತಾನು ತನ್ನ ತಾಯಿಯ ಮನೆಯಲ್ಲೇ ಇದ್ದು, ಸದ್ಯ ಗರ್ಭಿಣಿಯಾಗಿರುವೆ. ನನ್ನ ಪತಿ ಕೂಲಿ ಮಾಡುತ್ತಾರೆ. ಹೆರಿಗೆ ಮಾಡಿಸಲೂ ಹಣವಿಲ್ಲದ ಕಾರಣದಿಂದ ತಾಯಿ ಆ ಹಣ ಹೊಂದಿಸಲು ನೊಯ್ಡಾಗೆ ದುಡಿಮೆಗೆ ಹೋಗಿದ್ದರು. ಆದರೆ ಆಕೆ ಅನಾರೋಗ್ಯದಿಂದ ಅಲ್ಲಿ ಮೃತಪಟ್ಟಿದ್ದಾರೆ ಎಂದು ಮಗಳು ಹೇಳಿಕೊಂಡಿದ್ದಾರೆ.