ಹಣದುಬ್ಬರ ಅಮೆರಿಕಾ ತತ್ತರ

ವಾಷಿಂಗ್ಟನ್, ಜು. ೨೮- ಹಣದುಬ್ಬರವನ್ನು ಕಡಿಮೆಗೊಳಿಸಲು ಕಠಿಣ ಕ್ರಮ ತೆಗೆದುಕೊಂಡಿರುವ ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್ ಇದೀಗ ಮತ್ತೊಮ್ಮೆ ಬೆಂಚ್ ಮಾರ್ಕ್ ಬಡ್ಡಿದರವನ್ನು ೭೫ ಮೂಲ ಅಂಶಗಳನ್ನು ಹೆಚ್ಚಿಸಿದೆ. ಅಮೆರಿಕ ಕುಟುಂಬಗಳು ತತ್ತರಿಸುವಂತೆ ಮಾಡಿರುವ ಬೆಲೆ ಒತ್ತಡವನ್ನು ನಿವಾರಿಸುವುದು ಇದರ ಮುಖ್ಯ ಉದ್ದೇಶ ಎಂದು ಮಾಧ್ಯಮಗಳು ವರದಿ ಮಾಡಿದೆ. ಸಹಜವಾಗಿಯೇ ಫೆಡರಲ್ ರಿಸರ್ವ್‌ನ ಈ ನೀತಿಯಿಂದಾಗಿ ವಿಶ್ವಾದ್ಯಂತ ಕರೆನ್ಸಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ.
ಮೂಲ ಬಡ್ಡಿದರವನ್ನು ೦.೭೫%ದಷ್ಟು ಹೆಚ್ಚಿಸುತ್ತಿರುವುದು ಇದು ಎರಡನೇ ಬಾರಿ. ಇದು ಈ ವರ್ಷದಲ್ಲಿ ಮಾಡುತ್ತಿರುವ ನಾಲ್ಕನೇ ಪರಿಷ್ಕರಣೆಯಾಗಿದೆ. ಕಳೆದ ನಾಲ್ಕು ದಶಕಗಳಲ್ಲೇ ಕಂಡು ಕೇಳರಿಯದ ಹಣದುಬ್ಬರಕ್ಕೆ ಸಿಲುಕಿರುವ ಅಮೆರಿಕಾದಲ್ಲಿ ಸಾಮಾನ್ಯ ನಾಗರಿಕರು ವಸ್ತುಗಳನ್ನು ಖರೀದಿಸಲು ಹಿಂದೆ-ಮುಂದೆ ನೋಡುವ ಸ್ಥಿತಿ ನಿರ್ಮಾಣವಾಗಿದೆ. ಸದ್ಯ ಇದನ್ನು ತಡೆಯುವ ನಿಟ್ಟಿನಲ್ಲಿ ಅಮೆರಿಕಾ ಈ ನಿರ್ಧಾರ ಕೈಗೊಂಡಿದೆ. ಅಮೆರಿಕದ ಆರ್ಥಿಕತೆ ನಿಧಾನವಾಗುತ್ತಿರುವ ಲಕ್ಷಣಗಳನ್ನು ಫೆಡ್ ಬ್ಯಾಂಕ್ ಗಮನಿಸಿದ್ದು, ಸಾಲದ ವೆಚ್ಚವನ್ನು ಹೆಚ್ಚಿಸುವ ತನ್ನ ಯೋಜನೆಯನ್ನು ಕೇಂದ್ರೀಯ ಬ್ಯಾಂಕ್ ಮುಂದುವರಿಸಲಿದೆ. ಬೆಲೆ ಏರಿಕೆ, ಅಧ್ಯಕ್ಷ ಜೋ ಬೈಡನ್ ಅವರ ರಾಜಕೀಯ ವರ್ಚಸ್ಸಿಗೆ ಧಕ್ಕೆ ತಂದಿದ್ದು, ಉಕ್ರೇನ್ ಮೇಲೆ ರಷ್ಯಾ ನಡೆಸಿದ ಅತಿಕ್ರಮಣ ಇದಕ್ಕೆ ಮುಖ್ಯ ಕಾರಣ. ಈ ದಾಳಿಯಿಂದಾಗಿ ಜಾಗತಿಕ ಮಟ್ಟದಲ್ಲಿ ಆಹಾರ ಮತ್ತು ಇಂಧನ ಬೆಲೆ ಹೆಚ್ಚುತ್ತಿದೆ ಎಂದು ಅವರು ಹೇಳಿದ್ದಾರೆ. ಅಮೆರಿಕದ ಆರ್ಥಿಕ ಹಿನ್ನಡೆಯನ್ನು ತಡೆಯಲಿದೆ ಎಂದು ಬೈಡನ್ ಹೇಳಿದ್ದರೂ, ಹಣದುಬ್ಬರವನ್ನು ತಹಬಂದಿಗೆ ತರುವ ಫೆಡ್ ಬ್ಯಾಂಕ್‌ನ ಪ್ರಯತ್ನಕ್ಕೆ ಬೆಂಬಲ ಸೂಚಿಸಿದ್ದಾರೆ. ಹಣದುಬ್ಬರ ಹಿನ್ನಡೆಯುತ್ತಿದೆ ಎನ್ನುವ ಪ್ರಬಲ ಸೂಚನೆ ಕಂಡುಬರುವವರೆಗೂ ಹಣದುಬ್ಬರ ಇಳಿಮುಖವಾಗುವ ನಿಟ್ಟಿನಲ್ಲಿ ನಾವು ಬಡ್ಡಿದರವನ್ನು ಹೆಚ್ಚಿಸುವ ದಾರಿಯಲ್ಲಿ ಮುನ್ನಡೆಯಲಿದ್ದೇವೆ ಎಂದು ಫೆಡ್ ಅಧ್ಯಕ್ಷ ಜೆರೋಮ್ ಪಾವೆಲ್ ಸ್ಪಷ್ಟಪಡಿಸಿದ್ದಾರೆ. ಹಣದುಬ್ಬರವನ್ನು ಶೇಕಡ ೨ಕ್ಕೆ ಇಳಿಸುವ ಗುರಿ ನಮ್ಮದು ಎಂದು ಹೇಳಿದ್ದಾರೆ.