ಹಣದಾಸೆಗೆ ವ್ಯಕ್ತಿ ಅಪಹರಣ; ಮೂವರು ಸೆರೆ

ಬೆಂಗಳೂರು, ನ.೧೭-ಹಣದಾಸೆಗಾಗಿ ಸಿಸಿಬಿ ಪೊಲೀಸ್ ಇನ್‌ಸ್ಪೆಕ್ಟರ್ ಸೋಗಿನಲ್ಲಿ ವಿದೇಶದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಅಪಹರಿಸಿ ೨೧ ದಿನಗಳ ಕಾಲ ಅಕ್ರಮ ಬಂಧನದಲ್ಲಿರಿಸಿ ೪.೫ ಲಕ್ಷ ರೂಗಳನ್ನು ಪಡೆದು ಹಲ್ಲೆ ಮಾಡಿದ್ದ ಮಹಿಳೆ ಸೇರಿ ಮೂವರು ಆರೋಪಿಗಳನ್ನು ಇಂದಿರಾನಗರ ಪೊಲೀಸರು ಬಂಧಿಸಿದ್ದಾರೆ.
ಉಪೇಂದ್ರ ಕುಮಾರ್, ಸಮೀರ್ ಹಾಗೂ ನೀಲಮ್ಮ ಬಂಧಿತ ಆರೋಪಿಗಳಾಗಿದ್ದಾರೆ ಎಂದು ಡಿಸಿಪಿ ಡಾ.ಎಸ್.ಡಿ.ಶರಣಪ್ಪ ಅವರು ತಿಳಿಸಿದ್ದಾರೆ.
ಕಾಂಗೋದಲ್ಲಿ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ನಾಗರಾಜ್ ಕೊರೊನಾ ಹಿನ್ನೆಲೆಯಲ್ಲಿ ಭಾರತಕ್ಕೆ ವಾಪಸಾಗಿ ಕೌಟುಂಬಿಕ ಕಾರಣಕ್ಕಾಗಿ ೧೫ ಲಕ್ಷ ರೂಗಳ ಬ್ಯಾಂಕ್ ಸಾಲಕ್ಕಾಗಿ ಓಡಾಡುತ್ತಿದ್ದಾಗ ಆರೋಪಿ ಉಪೇಂದ್ರನ ಪರಿಚಯವಾಗಿದೆ.
ಬ್ಯಾಂಕಿನಲ್ಲಿ ಸಾಲ ಕೊಡಿಸುವುದಾಗಿ ಭರವಸೆ ನೀಡಿದ್ದ ಉಪೇಂದ್ರ ಸೂಚಿಸಿದಂತೆ ಎಲ್ಲಾ ದಾಖಲಾತಿಗಳನ್ನ ನೀಡಿ ಪುನಃ ನಾಗರಾಜ್ ಕಾಂಗೋ ದೇಶಕ್ಕೆ ಹೋಗಿದ್ದರು.
ಆರೋಪಿ ಉಪೇಂದ್ರ ಪಡೆದುಕೊಂಡ ದಾಖಲಾತಿಗಳನ್ನು ಪಡೆದು ಕೊಟಕ್ ಮಹೀಂದ್ರಾ ಬ್ಯಾಂಕ್ ಮ್ಯಾನೇಜರ್‌ನನ್ನು ಸಂಪರ್ಕಿಸಿದಾಗ ನಾಗರಾಜ್ ಅವರ ಪ್ರೊಫೈಲ್ ನೋಡಿ ೧.೨೦ ಕೋಟಿ ರೂ.ವರೆಗೂ ಸಾಲ ಪಡೆಯಲು ಅರ್ಹರಿದ್ದಾರೆ ಎಂದು ಆರೋಪಿಗೆ ಹೇಳಿದ್ದರು.
೫ಲಕ್ಷ ತೀರಿಸಿದ:
ಕಾರಿಗಾಗಿ ಪಡೆದಿದ್ದ ೫ ಲಕ್ಷ ರೂ ಸಾಲ ತೀರಿಸಿದರೆ ಮತ್ತೆ ಸಾಲ ಮಂಜೂರು ಮಾಡಬಹುದು ಎಂದು ಮ್ಯಾನೇಜರ್ ಷರತ್ತು ವಿಧಿಸಿದ್ದರು.
ಬರೋಬರಿ ೧ಕೋಟಿ ರೂ. ಆಸೆಗಾಗಿ ಮಾಸ್ಟರ್ ಪ್ಲ್ಯಾನ್ ಮಾಡಿದ್ದ ಉಪೇಂದ್ರ ಸಾಲದ ಅರ್ಜಿ ನೀಡಿ ಪರಿಚಿತೆಯಾಗಿದ್ದ ನೀಲಮ್ಮನನ್ನ ಸಂಪರ್ಕಿಸಿ ಪುಸಲಾಯಿಸಿ ೫ ಲಕ್ಷ ಪಡೆದು ನಾಗರಾಜ್ ತೆಗೆದುಕೊಂಡು ಸಾಲವನ್ನು ತೀರಿಸಿದ್ದು ಈ ವಿಷಯವನ್ನು ನಾಗರಾಜ್?ಗೂ ತಿಳಿಸಿ ೧ ಕೋಟಿ ರೂ.ಸಾಲಕ್ಕೆ ಬೇಕಾದ ಎಲ್ಲಾ ದಾಖಲಾತಿ ಸಲ್ಲಿಸಿದ್ದ.ಕೆಲ ದಿನಗಳ ಬಳಿಕ ತಾಯ್ನಾಡಿಗೆ ನಾಗರಾಜ್ ಬಂದಿದ್ದರು.
೧ ಕೋಟಿ ರೂಗಳ ಸಾಲ:
ಸಾಲ ಮಂಜೂರಾತಿಗಾಗಿ ಅರ್ಜಿಗಾಗಿ ಸಹಿ ಹಾಕುವಾಗ ೧ ಕೋಟಿ ರೂ.ಸಾಲಕ್ಕೆ ಈಗಾಗಲೇ ಅರ್ಜಿ ಹಾಕಿರುವ ವಿಚಾರ ಗೊತ್ತಾಗಿ ದಿಗ್ಭ್ರಮೆ ಉಂಟಾಗಿದೆ.
ಕೂಡಲೇ ಉಪೇಂದ್ರ ಬಳಿ ವಿಚಾರಿಸಿದಾಗ ನಾನು ಐದು ಲಕ್ಷ ತೀರಿಸಿದ್ದು ನೀನು ೧ ಕೋಟಿ ರೂ.ಸಾಲ ತೆಗೆದುಕೋ ಎಂದು ನಾಗರಾಜ್‌ಗೆ ಸೂಚಿಸಿದಾಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.
ನಂತರ ತೀರಿಸಿರುವ ೫ ಲಕ್ಷ ಸಾಲದ ಜೊತೆಗೆ ಇನ್ನೂ ೨ ಲಕ್ಷ ರೂ ಕೊಡುವಂತೆ ತಾಕೀತು ಮಾಡಿದ್ದನ್ನು ನಾಗರಾಜ್ ನಿರಾಕರಿಸಿದ್ದಾರೆ.
ಉಪೇಂದ್ರನ ಸುಪಾರಿ:
ಅಂದುಕೊಂಡಷ್ಟು ಸುಲಭವಾಗಿ ಹಣ ಸಿಗದಿರುವುದನ್ನು ಖಾತ್ರಿಯಾಗುತ್ತಿದ್ದಂತೆ ಸಮೀರ್ ಎಂಬಾತನಿಗೆ ನಾಗರಾಜ್ ನನ್ನು ಅಪಹರಿಸಲು ಉಪೇಂದ್ರ ಸುಪಾರಿ ನೀಡಿದ್ದ. ಅದರಂತೆ ಕಳೆದ ಆ.೯ರಂದು ಇಂದಿರಾನಗರ ಕೆಎಫ್‌ಸಿ ಸಿಗ್ನಲ್ ಬಳಿ ಸಿಸಿಬಿ ಇನ್‌ಸ್ಪೆಕ್ಟರ್ ಸೋಗಿನಲ್ಲಿ ನಾಗರಾಜ್‌ನನ್ನು ಪರಿಚಯಿಸಿಕೊಂಡು ವಿಚಾರಣೆ ನಡೆಸಬೇಕೆಂದು ಹೇಳಿ ಕಾರು ಹತ್ತಿಸಿಕೊಂಡಿದ್ದಾನೆ.
ಮಾರ್ಗ ಮಧ್ಯೆ ಆರೋಪಿ ಉಪೇಂದ್ರ ಸಹ ಕಾರು ಹತ್ತಿದಾಗ ತಾನು ಅಪಹರಣಗೊಂಡ ವಿಚಾರ ನಾಗರಾಜ್ ಗೊತ್ತಾಗಿದೆ. ನಂತರ ೨೦ ದಿನಗಳ ಅಕ್ರಮ ಬಂಧನದಲ್ಲಿಸಿ ನಿರಂತರವಾಗಿ ನಾಗರಾಜ್ ಮೇಲೆ ಹಲ್ಲೆ ಮಾಡಿದ್ದಾರೆ. ಜೊತೆಗೆ ೧೫ ಲಕ್ಷ ರೂಪಾಯಿ ನೀಡುವಂತೆ ಒತ್ತಾಯಿಸಿದ್ದಾರೆ.
ಖಾಲಿ ಚೆಕ್‌ಗೆ ಸಹಿ:
ಬ್ಯಾಂಕಿನಿಂದ ೪.೫ ಲಕ್ಷ ರೂ ಹಣ ಪಡೆದುಕೊಂಡು ಖಾಲಿ ಚೆಕ್ ಹಾಗೂ ಬಾಂಡ್ ಪೇಪರ್‌ಗಳಿಗೆ ಸಹಿ ಹಾಕಿಸಿಕೊಂಡಿದ್ದಾರೆ.
ನಡೆದಿರುವ ವಿಷಯ ಬಗ್ಗೆ ಪೊಲೀಸರಿಗೆ ತಿಳಿಸಿದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಸಿ ಕಳುಹಿಸಿದ್ದಾರೆ. ಈ ಸಂಬಂಧ ಇಂದಿರಾನಗರ ಪೊಲೀಸರಿಗೆ ದೂರು ನೀಡಿದ ಮೇರೆಗೆ ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಡಿಸಿಪಿ ಶರಣಪ್ಪ ತಿಳಿಸಿದ್ದಾರೆ.