ಹಣತೆ ವ್ಯಾಪಾರಿಯ ಹತ್ಯೆ: ಆರೋಪಿ ಸೆರೆ 

ಮಂಗಳೂರು, ನ.೨೨- ಹಣತೆ ವ್ಯಾಪಾರಕ್ಕಾಗಿ ನಗರಕ್ಕೆ ಬಂದಿದ್ದ ತಮಿಳುನಾಡು ಮೂಲದ ಮಣ್ಣಿನ ದೀಪ ಮಾರಾಟಗಾರ ಸೋಮವಾರ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂದರು ಠಾಣಾ ಪೊಲೀಸರು ಬಂಧಿಸಿದ್ದಾರೆ.  

ತಮಿಳುನಾಡಿನ ಸೇಲಂ ಮೂಲದ ಮಾಯವೇಳ್ ಪೆರಿಯಸಾಮಿ (52) ಮೃತ ವ್ಯಕ್ತಿ. ಆರೋಪಿ ಹೂವಿನ ಹಡಗಲಿ ಮೂಲದ ರವಿ ಅಲಿಯಾಸ್ ವಕೀಲ ನಾಯ್ಕ (42) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮೃತ ಪೆರಿಯಸಾಮಿ ಮತ್ತು ಅವರ ಪತ್ನಿ ಅಕ್ಟೋಬರ್ 14 ರಂದು ನಗರಕ್ಕೆ ಬಂದು ಅಳಕೆ ಮಾರುಕಟ್ಟೆ ಪ್ರದೇಶದ ಬಳಿ ಮಣ್ಣಿನ ದೀಪಗಳನ್ನು ಮಾರಾಟ ಮಾಡಿಕೊಂಡಿದ್ದರು. ಆರೋಪಿಯೂ ಪೆರಿಯಸಾಮಿ ಬಳಿ ಹಲವು ಬಾರಿ ಮಣ್ಣಿನ ದೀಪ ಖರೀದಿಸಿದ್ದ. ಹಣತೆ ವ್ಯಾಪಾರದ ನೆಪದಲ್ಲಿ ಪೆರಿಯಸಾಮಿಯನ್ನು ಕುಳೂರು ಮೈದಾನಕ್ಕೆ ಕರೆದೊಯ್ದು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಹಣದ ದುರಾಸೆಗೆ ಆರೋಪಿ ಪೆರಿಯಸಾಮಿಯನ್ನು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂದರು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.