ಹಣಕ್ಕೆ ಬೆದರಿಕೆ:ಹೇಮಂತ್ ರಾಜು ವಿರುದ್ಧ ಎಫ್‌ಐಆರ್

ಬೆಂಗಳೂರು,ಜೂ.೧೯-ಸಂಘದ ನೋಂದಣಿ ರದ್ದಾಗಿದ್ದರೂ ಲೆಟರ್ ಹೆಡ್‌ಗಳನ್ನು ದುರ್ಬಳಕೆ ಮಾಡಿ ಯುದ್ಧಭೂಮಿ ಹೋರಾಟ ಸೇನೆಯ ಅಧ್ಯಕ್ಷನೆಂದು ಹೇಳಿಕೊಂಡು ಬೆದರಿಸಿ ಹಣ ನೀಡುವಂತೆ ಒತ್ತಾಯಿಸುತ್ತಿದ್ದ ವ್ಯಕ್ತಿಯ ವಿರುದ್ಧ ತಾವರೆಕೆರೆ ಪೊಲೀಸರಿಗೆ ದೂರು ನೀಡಲಾಗಿದ್ದು, ತಾವರಕೆರೆ ಪೊಲೀಸ್ ಠಾಣೆಯಲ್ಲಿ ಯುದ್ಧಭೂಮಿ ಹೋರಾಟ ಸೇನೆಯ ಅಧ್ಯಕ್ಷ ಎಂದು ಹೇಳಿಕೊಂಡಿರುವ ಹೇಮಂತ್ ರಾಜು ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಮಾಗಡಿ ಮುಖ್ಯರಸ್ತೆಯ ಸದ್ದನಪಾಳ್ಯದ ತಿಮ್ಮಯ್ಯರವರು ತಾವರೆಕೆರೆ ಪೊಲೀಸರಿಗೆ ದೂರು ನೀಡಿ ಯುದ್ಧಭೂಮಿ ಹೋರಾಟ ಸೇನೆಯ ಅಧ್ಯಕ್ಷನೆಂದು ಹೇಳಿಕೊಂಡು ಬೆದರಿಕೆ ಹಾಕಿ ಹಣ ನೀಡುವಂತೆ ಒತ್ತಾಯಿಸುತ್ತಿರುವ ಹೇಮಂತ್ ರಾಜು ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಸದ್ದನಪಾಳ್ಯದ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿರುವ ನನಗೆ ಗೆಜ್ಜರಾರಗುಪ್ಪೆ ಗ್ರಾಮದ ಹೇಮಂತ್ ರಾಜು ವಿನಾಕಾರಣ ತೊಂದರೆ ಕೊಡುತ್ತಿದ್ದು, ಯುದ್ಧಭೂಮಿ ಹೋರಾಟ ಸೇನೆಯ ಸಂಘದಿಂದ ಕೇಸುಗಳನ್ನು ಹಾಕಿಸುತ್ತೇವೆ ಸರ್ಕಾರದ ಜಮೀನುಗಳಲ್ಲಿ ವ್ಯವಸಾಯ ಮಾಡುತ್ತಾ ಕಬಳಿಕೆಯ ಯತ್ನ ಮಾಡುತ್ತಿದ್ದೀರಾ ಎಂದು ಬೆದರಿಸುತ್ತಿದ್ದಾರೆ. ಜಮೀನು ಅಲ್ಲದೇ ಮನೆಯ ಬಳಿಯೂ ಬಂದು ಯುದ್ಧಭೂಮಿ ಹೋರಾಟ ಸೇನೆಯಿಂದ ಕರ್ನಾಟಕ ಭೂಕಬಳಿಕೆ ನಿಷೇಧ ವಿಶೇಷ ನ್ಯಾಯಲಯದಲ್ಲಿ ಕೇಸು ದಾಖಲಿಸಿರುವುದುನ್ನು ತಿಳಿಸಿ ಹಣಕ್ಕಾಗಿ ಒತ್ತಾಯಿಸುತ್ತಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಾರೆ.
ಜಿಲ್ಲಾಧಿಕಾರಿ, ಉಪವಿಭಾಗಧಿಕಾರಿ, ಹಾಗೂ ತಹಶೀಲ್ದಾರರ ಪರಿಚಯವಿದ್ದು, ನಿಮ್ಮ ವಿರುದ್ಧ ಕೇಸು ಹಾಕುವುದಾಗಿ ಬೆದರಿಸಿ ರೌಡಿಗಳಿಂದ ನಿಮಗೊಂದು ಗತಿ ಕಾಣಿಸುತ್ತೇವೆಂದು ಬೆದರಿಸಿದ್ದಾರೆ. ಮನೆಯಲ್ಲಿ ಮಹಿಳೆಯರು, ಮಕ್ಕಳಿಗೂ ಕೂಡ ತೊಂದರೆ ನೀಡಿದ್ದು, ಹೇಮಂತ್ ರಾಜು ಮತ್ತವರ ಗ್ಯಾಂಗ್‌ನ ವಿರುದ್ಧ ಕ್ರಮ ಕೈಗೊಳ್ಳಬೇಕು ಆಸ್ತಿತ್ವದಲ್ಲೇ ಇರದ ಸಂಘದ ಹೆಸರಿನಲ್ಲಿ ಲೆಟರ್ ಹೆಡ್‌ಗಳನ್ನು ಪ್ರಿಂಟ್ ಮಾಡಿಕೊಂಡು ಲೋಕಾಯುಕ್ತ ಇನ್ನಿತರ ತನಿಖಾ ಸಂಸ್ಥೆಗಳ ಹೆಸರೇಳಿ ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.
ಈ ಸಂಬಂಧ ಎಫ್‌ಐಆರ್ ದಾಖಲಿಸಿಕೊಂಡಿರುವ ತಾವರೆಕೆರೆ ಪೊಲೀಸರು ತನಿಖೆ ನಡೆಸಿದ್ದಾರೆ.