ಹಣಕ್ಕಿಂತ ಅಮೂಲ್ಯವಾದ ಸಂಪತ್ತು ,ಆರೋಗ್ಯ. -ಎ.ಜಯರಾಮ್


ಸಂಜೆವಾಣಿ ವಾರ್ತೆ
ಬಳ್ಳಾರಿ, ಮಾ.30: ಆರೋಗ್ಯವೇ ಮಹಾಭಾಗ್ಯ, ಊಟ ಬಲ್ಲವನಿಗೆ ರೋಗವಿಲ್ಲ ಎಂಬ ನಾಣ್ಣುಡಿಗಳು ಮಾನವನ ಆರೋಗ್ಯದ ಮಹತ್ವವನ್ನು ಸಾರುತ್ತಿವೆ. ಹಣ ಗಳಿಸುವ ಧಾವಂತದಲ್ಲಿ ಮುಳುಗಿದ್ದ ಮಾನವನಿಗೆ ಇತ್ತೀಚಿನ ದಿನಗಳಲ್ಲಿ ಆರೋಗ್ಯ ಎಷ್ಟು ಮುಖ್ಯವೆಂಬುದನ್ನು ಕರೋನ ತಿಳಿಸಿಕೊಟ್ಟಿದೆ. ಆರೋಗ್ಯವನ್ನು ಅಲಕ್ಷಿಸಿ ಹಣಗಳಿಕೆ ಮಾಡುವುದು ವ್ಯರ್ಥವೆಂದು ಕರ್ನಾಟಕ ಬ್ಯಾಂಕಿನ ನಿವೃತ್ತ ನೌಕರರಾದ ಎ.ಜಯರಾಮರವರು ನುಡಿದರು.
ಬಳ್ಳಾರಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಮೋಕಾದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ 282ನೇ ಮಹಾಮನೆ ಲಿಂ|| ಫಕೀರಪ್ಪ ತೋಟಪ್ಪ ಗಡ್ಡಿ ದತ್ತಿ ಮತ್ತು ಬೆಣ್ಣೆಹಳ್ಳಿ ಲಿಂ|| ಹಾಲಮ್ಮ ಸಿದ್ಧಪ್ಪ ದತ್ತಿ ಕಾರ್ಯಕ್ರಮದಲ್ಲಿ “ಆಹಾರವ ಕಿರಿದು ಮಾಡಿರಣ್ಣ” ಎಂಬ ಅಕ್ಕಮಹಾದೇವಿಯ ವಚನದ ಬಗ್ಗೆ ಮಾತನಾಡುತ್ತಾ ಅತಿ ಆಹಾರ ಸೇವನೆಯೇ ಹಲವು ರೋಗಗಳಿಗೆ ಕಾರಣ.ಇಂದಿನ ಸಾವುಗಳಿಗೆ ಎರಡೇ ಕಾರಣಗಳು, ಒಂದು, ಅತಿ ಆಹಾರ ಸೇವನೆ ಮತ್ತೊಂದು ಆಹಾರ ಸೇವಿಸದೇ ಇರುವುದು. ಅತಿ ಪೌಷ್ಟಿಕತೆ ಮತ್ತು ಅಪೌಷ್ಟಿಕತೆ. ಈ ವೈಜ್ಞಾನಿಕ ಸತ್ಯವನ್ನು ಹನ್ನೆರಡನೇ ಶತಮಾನದಲ್ಲಿಯೇ ಅಕ್ಕಮಹಾದೇವಿ ತನ್ನ ವಚನದಲ್ಲಿ ಹೇಳಿದ್ದಾಳೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾ ಮುಖ್ಯೋಪಾಧ್ಯಾಯರಾದ ಮೆಹತಾಬ್ ರವರು ವಿದ್ಯಾರ್ಥಿಗಳು ಬೇಸಿಗೆ ರಜೆಯಲ್ಲಿ ಅತಿಸಾರ, ಅಜೀರ್ಣ ಮುಂತಾದ ರೋಗಗಳಿಗೆ ತುತ್ತಾಗದೇ ತಮ್ಮ ಆರೋಗ್ಯದ ಕಡೆ ಹೆಚ್ಚು ಜಾಗರೂಕತೆಯನ್ನು ವಹಿಸಬೇಕೆಂದು ವಿದ್ಯಾರ್ಥಿಗಳಿಗೆ ಕರೆಕೊಟ್ಟರು. ಸಾಹಿತಿ, ಕಥೆಗಾರ ಕುಂ. ಭುವನೇಶ್ವರ ರವರು ಅತಿಥಿಗಳಾಗಿದ್ದರು. ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷರಾದ ಲಕ್ಷ್ಮಣ, ಕ,ಸಾ,ಪ, ಮೋಕಾ ಹೋಬಳಿ ಘಟಕದ ಅಧ್ಯಕ್ಷ ಆರ್.ಎಂ.ಚಂದ್ರಶೇಖರಯ್ಯ, ಕಾರ್ಯದರ್ಶಿ ಮಲ್ಲಿಕಾರ್ಜುನ, ಜಾನಪದ ಗಾಯಕ ಶಿಕ್ಷಕ ಎಸ್,ಎಂ,ಹಿರೇಮಠ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿವಿಧ ವಿಷಯಗಳಲ್ಲಿ ಪರಿಣಿತಿ ಹೊಂದಿದ ಶಾಲಾ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಎಸ್,ಎಂ,ಹಿರೇಮಠರು ಭಾವಗೀತೆ, ಪರಿಸರ ಮತ್ತು ವಿಜ್ಞಾನ ಗೀತೆಗಳನ್ನು ಹಾಡಿದರು. ವೇದಿಕೆಯ ಅತಿಥಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು.
ವಿದ್ಯಾರ್ಥಿನಿ ಯಮುನಾ ವಚನ ಪ್ರಾರ್ಥನೆ ಮಾಡಿದಳು. ಶಿಕ್ಷಕ ಪಾಲಾಕ್ಷಪ್ಪ ಸ್ವಾಗತ ಕೋರಿದರು. ಪರಿಷತ್ ಅಧ್ಯಕ್ಷ ಕೆ.ಬಿ.ಸಿದ್ಧಲಿಂಗಪ್ಪ ದತ್ತಿ ಪರಿಚಯಿಸಿ ಶರಣು ಸಮರ್ಪಣೆ ಮಾಡಿದರು. ಶಿಕ್ಷಕಿ ಅಂಬಿಕಾ ಕಾರ್ಯಕ್ರಮ ನಿರೂಪಣೆ ಮಾಡಿದರು. ಶಾಲಾ ಮಕ್ಕಳೊಂದಿಗೆ ಊರಿನ ಕೆಲಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.