ಹಣಕ್ಕಾಗಿ ಮಾಲೀಕನ ಮಗನ ಹತ್ಯೆ ಇಬ್ಬರು ಸೆರೆ

ಬೆಂಗಳೂರು,ನ.೬-ಕತ್ತು ಹಿಸುಕಿ ಕೊಲೆಗೈದು ಕೈಕಾಲು ಕಟ್ಟಿ ಬಾಯಿಗೆ, ಮುಖಕ್ಕೆ ಪ್ಲಾಸ್ಟರ್ ಹಾಕಿ ಮೂಟೆಕಟ್ಟಿ ರಾಜರಾಜೇಶ್ವರಿನಗರದ ಬಳಿ ರಾಜಕಾಲುವೆಯಲ್ಲಿ ಎಸೆದಿದ್ದ ಶವವನ್ನು ಯುವಕ ತರುಣ್ ಎಂದು ಪತ್ತೆಹಚ್ಚಿ ಕಾರ್ಯಾಚರಣೆ ನಡೆಸಿದ ಪಶ್ಚಿಮ ವಿಭಾಗದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಭಾರತಿನಗರದ ಮುರುಗಪಿಳ್ಳೆ ಪಾಳ್ಯದ ತರುಣ್(೨೧)ನನ್ನು ಕೊಲೆಗೈದು ಮೂಟೆಕಟ್ಟಿ ಎಸೆದಿದ್ದ ಸಯೀದ್ ತಝಿಮುಲ್ಲಾ ಪಾಶ (೩೯) ಮತ್ತು ಸೈಯದ್ ನಾಸೀರ್ (೨೬)ನನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಸಂಜೀವ್ ಪಾಟೀಲ್ ತಿಳಿಸಿದ್ದಾರೆ.
ಹೋಟೆಲ್ ಮ್ಯಾನೇಜ್ಮೆಂಟ್ ವ್ಯಾಸಂಗ ಮಾಡುತ್ತಿದ್ದ ತರುಣ್ ಕಳೆದ ನ. ೧ರ ಬೆಳಿಗ್ಗೆ ಪೋಷಕರ ಬಳಿ ಹಣ ತೆಗೆದುಕೊಂಡು ಪಟಾಕಿ ತರುವುದಾಗಿ ಹೇಳಿ ಮನೆಯಿಂದ ಹೊರಗೆ ಹೋಗಿದ್ದು ರಾತ್ರಿಯಾದರೂ ಮನೆಗೆ ವಾಪಸ್ ಬಂದಿರಲಿಲ್ಲ.
ಸ್ನೇಹಿತರು, ಸಂಬಂಧಿಕರ ಮನೆಯಲ್ಲೆಲ್ಲಾ ಹುಡುಕಾಟ ನಡೆಸಿದ ಕುಟುಂಬಸ್ಥರು ಆತಂಕಗೊಂಡು ಭಾರತೀನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ರಾಜಕಾಲುವೆ ಬಳಿ ಶವ ಪತ್ತೆ:
ಯುವಕ ತರುಣ್ ಮೂಗಿಗೆ, ಬಾಯಿಗೆ ಪ್ಲಾಸ್ಟರ್ ಸುತ್ತಿ ಕೈ-ಕಾಲುಗಳನ್ನು ಹಗ್ಗದಿಂದ ಕಟ್ಟಿ ಕುತ್ತಿಗೆ ಬಿಗಿದು ಕೊಲೆ ಮಾಡಲಾಗಿತ್ತು. ನಂತರ ಗೋಣಿಚೀಲದಲ್ಲಿ ಸುತ್ತಿ ರಾಜರಾಜೇಶ್ವರಿ ನಗರ ಬಳಿಯ ಡಿಸೋಜ ನಗರದ ರಾಜಕಾಲುವೆ ಬಳಿ ಆರೋಪಿಗಳು ಶವವನ್ನು ಬಿಸಾಕಿ ಹೋಗಿದ್ದರು.
ಕಳೆದ ನ.೨ ರಂದು ಚಿಂದಿ ಆಯುವ ಯುವಕನೊಬ್ಬ ರಾಜಕಾಲುವೆ ಪಕ್ಕ ಗೋಣಿಚೀಲದಲ್ಲಿ ಶವ ಇರುವ ಶಂಕೆಯಿಂದ ಸ್ಥಳೀಯರಿಗೆ ಮಾಹಿತಿ ನೀಡಿದ್ದನು. ಸಾರ್ವಜನಿಕರು ಬಂದು ನೋಡಿ ಪೊಲೀಸರಿಗೆ ಫೋನ್ ಮೂಲಕ ವಿಷಯ ತಿಳಿಸಿದ್ದರು. ರಾಜರಾಜೇಶ್ವರಿ ನಗರ ಠಾಣೆಯ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡಸಿ ಗೋಣಿಚೀಲ ತೆಗೆದು ನೋಡಿದಾಗ ಯುವಕನ ಶವ ಪತ್ತೆಯಾಗಿತ್ತು.
ಶ್ರೀಮಂತರಾಗಲು ಕೃತ್ಯ:
ಆರೋಪಿಗಳಾದ ತಝಿಮುಲ್ಲಾ ನಾಸೀರ್, ಸೈಯದ್ ನಾಸೀರ್‌ನು ತರುಣ್ ತಂದೆ ಮಣಿ ಬಳಿ ಕೆಲಸ ಮಾಡಿಕೊಂಡು ಇದ್ದರು. ದಿಢೀರ್ ಶ್ರೀಮಂತರಾಗುವ ಯೋಚನೆ ಇಬ್ಬರಲ್ಲೂ ಇತ್ತೀಚೆಗೆ ಮೊಳಕೆ ಒಡೆದಿತ್ತು. ತರುಣ್ ತಂದೆ ಮಣಿ ತಕ್ಕ ಮಟ್ಟಿಗೆ ಶ್ರೀಮಂತರಾಗಿದ್ದರಿಂದ ಅವರ ಮಗನನ್ನೇ ಅಪಹರಣ ಮಾಡಿದರೆ ಹೇಗೆ ಎಂದು ಪ್ಲಾನ್ ಮಾಡಿದ್ದರು.
ನ. ೧ ರಂದು ಪಟಾಕಿ ಖರೀದಿಸಲು ಹೋಗಿದ್ದ ತರುಣ್‌ನನ್ನು ಹಿಂಬಾಲಿಸಿದ ಆರೋಪಿಗಳು ನಂತರ, ಅವನ ಬಳಿ ಬಂದು ತಮ್ಮ ಅಕ್ಕನ ಮನೆಗೆ ಹೋಗೋಣ, ಅವರ ಮನೆಯ ಬಳಿಯೇ ಕಡಿಮೆ ಬೆಲೆಗೆ ಪಟಾಕಿ ಸಿಗುತ್ತವೆ ಎಂದು ಪುಸಲಾಯಿಸಿದ್ದರು.
ನಂತರ ಅಕ್ಕನ ಮನೆಗೆ ತೆರಳಿ ತರುಣ್ ಜೊತೆ ಊಟ ಮಾಡಿದ್ದರು. ಸ್ವಲ್ಪ ಸಮಯದ ಬಳಿಕ ತರುಣ್‌ನ ಕೈಕಾಲು ಕಟ್ಟಿಹಾಕಿ, ಕಿರುಚಬಾರದೆಂದು ಮುಖಕ್ಕೆ ಪ್ಲಾಸ್ಟರ್ ಹಾಕಿದ್ದರು. ಆಗಲೂ ಕಿರುಚಾಡಲು ಪ್ರಯತ್ನಿಸಿದಾಗ ಕುತ್ತಿಗೆ ಹಿಸುಕಿದ್ದರು. ಬಾಯಿ, ಮೂಗಿಗೂ ಸೇರಿಸಿ ಪ್ಲಾಸ್ಟರ್ ಹಾಕಿದ ಕಾರಣ ಉಸಿರಾಡಲು ಸಾಧ್ಯವಾಗದೇ ತರುಣ್ ಪ್ರಾಣ ಬಿಟ್ಟಿದ್ದ.
ಶವ ಎಸೆದು ಎಸ್ಕೇಪ್:
ಹಣಕ್ಕಾಗಿ ಅಪಹರಿಸಿದ ಆರೋಪಿಗಳಿಗೆ ತರುಣ್‌ನ ಸಾವು ಗಲಿಬಿಲಿ ಹುಟ್ಟಿಸಿತ್ತು. ಇಡೀ ರಾತ್ರಿ ಶವವನ್ನು ಮನೆಯಲ್ಲಿಟ್ಟುಕೊಂಡು ನಂತರ ಆಟೋದಲ್ಲಿ ರಾಜರಾಜೇಶ್ವರಿನಗರದ ವೃಷಭಾವತಿ ರಾಜಕಾಲುವೆ ಬಳಿ ತಂದಿದ್ದರು. ಶವದ ಮೂಟೆಯನ್ನು ಮೋರಿ ಬಳಿ ಬಿಸಾಕಿ ಅಲ್ಲಿಂದ ಪರಾರಿಯಾಗಿದ್ದರು.
ಭಾರತಿನಗರದಲ್ಲಿ ಪಟಾಕಿ ತರಲು ಹೋದ ಮಗ ವಾಪಸ್ ಬಂದಿಲ್ಲ ಎಂಬ ಕಾರಣಕ್ಕೆ ಅಲ್ಲಿ ಇಲ್ಲಿ ಹುಡುಕಾಡಿದ ಪೋಷಕರು ಕೊನೆಗೆ ಭಾರತಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
೫೦ ಲಕ್ಷಕ್ಕೆ ಬೇಡಿಕೆ ವಿಚಾರ ಯಾರಿಗೂ ಗೊತ್ತಿರಲು ಸಾಧ್ಯವಿಲ್ಲ ಎನ್ನುವ ಭಂಡ ಧೈರ್ಯದಿಂದ ಮಧ್ಯಾಹ್ನ ೨ ಗಂಟೆಗೆ ತರುಣ್ ತಂದೆಗೆ ಕರೆ ಮಾಡಿದ್ದ ಆರೋಪಿಗಳು ೫೦ ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು.
ಮಾರನೆಯ ದಿನ ತರುಣ್ ತಂದೆಯು ಅವರನ್ನು ಪತ್ತೆ ಹಚ್ಚಿ ವಿಚಾರಿಸಿದಾಗ ಕಿಡ್ನ್ಯಾಪ್ ವಿಚಾರ ಹೊರಬಿದ್ದಿದೆ. ಇಬ್ಬರು ಹಂತಕ ಸಹೋದರರು ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿ ಇರುವ ಮಾಹಿತಿ ಪೊಲೀಸರಿಗೆ ಬಾತ್ಮಿದಾರರಿಂದ ದೊರೆತಿತ್ತು. ಫೋನ್ ಡಿಟೇಲ್ಸ್ ಟ್ರೇಸ್ ಮಾಡಿದಾಗ ಇಬ್ಬರು ಆರೋಪಿಗಳು ಬಸ್ ನಿಲ್ದಾಣದ ಹತ್ತಿರ ಇರುವುದು ಖಚಿತಪಟ್ಟಿತ್ತು. ದಾಳಿ ನೆಡೆಸಿದ ಪೊಲೀಸ್ ಇನ್ಸ್‌ಪೆಕ್ಟರ್ ಶಿವಣ್ಣ ನೇತೃತ್ವದ ತಂಡ ಆರೋಪಿಗಳನ್ನು ಸ್ಥಳದಲ್ಲಿಯೇ ವಶಕ್ಕೆ ಪಡೆದಿದ್ದಾರೆ.