ಹಣಕ್ಕಾಗಿ ಜಗಳ: ಕೊಲೆಯಲ್ಲಿ ಅಂತ್ಯ

ಕೋಲಾರ,ಡಿ.೨೧: ಕೋಲಾರ ಜಿಲ್ಲೆ ಮಾಲೂರು ಪಟ್ಟಣದಲ್ಲಿ ಕಳೆದ ರಾತ್ರಿ ಇಬ್ಬರು ಸ್ನೇಹಿತರ ನಡುವೆ ಹಣಕ್ಕಾಗಿ ಶುರುವಾಗಿದ್ದ ಜಗಳವೊಂದು ಕೊಲೆಯಲ್ಲಿ ಆಂತ್ಯವಾಗಿದೆ.
ಮಾಲೂರು ಪಟ್ಟಣದ ಬಾಬು ಆಲಿಯಾಸ್ ಚೈನ್ ಬಾಬು ಎಂಬಾತ ಸಣ್ಣಪುಟ್ಟ ಕೆಲಸ ಜೊತೆಗೆ ರಿಯಲ್‌ಎಸ್ಟೇಟ್ ಮಾಡಿಕೊಂಡಿದ್ದವನು. ಇವನು ಇದೇ ಪಟ್ಟಣದ ಜಿಮ್ ಟ್ರೈನರ್ ಶಶಿ ಎಂಬಾತನೊಂದಿಗೆ ಒಳ್ಳೆಯ ಸ್ನೇಹಿತ ನಾಗಿದ್ದ. ಇವರಿಬ್ಬರ ನಡುವೆ ವಯಸ್ಸಿನ ಅಂತರವಿದ್ದರು ಒಳ್ಳೆಯ ಸ್ನೇಹ ಹಲವು ವರ್ಷಗಳಿಂದ ಇತ್ತು. ಈ ಸ್ನೇಹದಲ್ಲಿ ಸಮಯ ಸಂದರ್ಭದಲ್ಲಿ ಸ್ವಲ್ಪ ಹಣದ ವ್ಯವಾಹರಗಳು ನಡೆದಿತ್ತು. ಹೀಗಿರುವಾಗಲೇ ಬಾಬು ಶಶಿಯ ಬಳಿ ಕೆಲವು ವರ್ಷಗಳ ಹಿಂದೆ ಐವತ್ತು ಸಾವಿರ ರೂಪಾಯಿ ಹಣ ಪಡೆದಿದ್ದ.
ಹಣ ಹಿಂದಿರುಗಿಸದೆ ಸತಾಯಿಸುತ್ತಿದ್ದ ಎನ್ನಲಾಗಿದ್ದು, ಇದೇ ವಿಚಾರ ಇಬ್ಬರ ಸ್ನೇಹಕ್ಕೆ ಕೊಳ್ಳಿ ಇಟ್ಟಿತ್ತು, ಹಣದ ವಿಚಾರವಾಗಿ ಆಗಾಗ ಜಗಳವೂ ನಡೆಯುತ್ತಿತ್ತು. ಹೀಗಿರುವಾಗಲೇ ಅದೇನಾಯ್ತೋ ಗೊತ್ತಿಲ್ಲ ಕಳೆದ ರಾತ್ರಿ ಬಸ್ ನಿಲ್ದಾಣದ ಬಳಿ ಇದ್ದ ಬಾಬುವನ್ನು ಜಿಮ್ ಟ್ರೈನರ್ ಶಶಿ ಸೀದಾ ಮಾಲೂರಿನ ಹಳೇ ಸರ್ಕಸ್ ಮೈದಾನದ ಬಳಿ ಕೆರೆದುಕೊಂಡು ಹೋಗಿದ್ದಾನೆ. ಇವನೇ ಬಾಬುವಿಗೆ ಚೆನ್ನಾಗಿ ಕುಡಿಸಿದ್ದಾನೆ. ಬಾಬು ಇನ್ನಷ್ಟು ಕುಡಿಯೋದಕ್ಕೆ ಬೇಕು ಎಂದಿದ್ದಾನೆ. ಆಗ ಮತ್ತೆ ಹೋಗಿ ಎಣ್ಣೆ ತರುವುದಾಗಿ ಹೇಳಿ ಹೋದ ಶಶಿ ಬರುವಾಗ ಜೊತೆಯಲ್ಲಿ ಒಂದು ಮಚ್ಚು ತಂದಿದ್ದಾನೆ. ಎಣ್ಣೆ ಕೈಗೆಕೊಟ್ಟು ಟೈಟಾಗಿ ಕುಳಿತಿದ್ದ ಬಾಬು ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಾಬು ಸಾಯುವವರೆಗೂ ಅಲ್ಲೇ ಇದ್ದು ನಂತರ ಶಶಿ ಹೋಗಿ ಮಾಲೂರು ಪೊಲೀಸ್ ಠಾಣೆಗೆ ಶರಣಾಗಿದ್ದಾನೆ.
ಪೊಲೀಸರು ಪರಿಶೀಲನೆ ನಡೆಸಿದಾಗ ಮರ್ಡರ್ ವಿಷಯ ಬಯಲಾಗಿದೆ. ಸದ್ಯ ಆರೋಪಿಯನ್ನ ಬಂಧಿಸಿರುವ ಪೊಲೀಸರು ಕೊಲೆಗೆ ನಿಖರ ಕಾರಣವೇನು ಅನ್ನೋದರ ತನಿಖೆ ಕೈಗೊಂಡಿದ್ದಾರೆ.