ಹಣಕಾಸು ಸಂಸ್ಥೆಯವರ ಕಿರುಕುಳಕ್ಕೆ ರೈತ ಬಲಿ

ನಂಜನಗೂಡು:ಫೆ.23:- ತಾಲ್ಲೂಕಿನ ಚಿಕ್ಕಕವಲಂದೆ ಗ್ರಾಮದ ಮಹೇಶ (48) ಖಾಸಗೀ ಹಣಕಾಸು ಸಂಸ್ಥೆಯವರ ಮಾನಸಿಕ ಹಿಂಸೆ ತಾಳಲಾರದೆ ತನ್ನ ಜಮೀನಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ನಡೆದಿದ್ದು ಕವಲಂದೆ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಚಿಕ್ಕಕವಲಂದೆ ಗ್ರಾಮದ ನಾಗಪ್ಪ ನವರ ಮಗನಾದ ಮಹೇಶ ನಂಜನಗೂಡಿನ ಕೈಗಾರಿಕಾ ಪ್ರದೇಶದಲ್ಲಿರುವ ಖಾಸಗೀ ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು ಈತನಿಗೆ ಕವಲಂದೆಯಲ್ಲಿ ಜಮೀನು ಕೂಡ ಇತ್ತು. ಚೆನ್ನೈ ಮೂಲದ ಮೈಸೂರಿನಲ್ಲಿರುವ ಫೈವ್‍ಸ್ಟಾರ್ ಖಾಸಗೀ ಕಂಪನಿಯಲ್ಲಿ ತನ್ನ ಪತ್ನಿ ಗಿರಿಜಾಂಬ ಎಂಬುವವರ ಹೆಸರಿನಲ್ಲಿ ಸುಮಾರು 3 ಲಕ್ಷ ರೂ. ಸಾಲ ಪಡೆದಿದ್ದು ಕಾರಣಾಂತರಗಳಿಂದ 2 ತಿಂಗಳು ಮಾತ್ರ ಬಾಕಿ ಉಳಿದಿತ್ತು.
ಈ ಬಾಕಿ ಬಗ್ಗೆ ಹಣಕಾಸು ಕಂಪನಿಯವರ ಕಿರುಕುಳ ಹೆಚ್ಚಾಗಿದ್ದು ಇದನ್ನು ಸಹಿಸಿಕೊಳ್ಳಲಾಗದ ಮಹೇಶ ನೆನ್ನೆ ತನ್ನ ಜಮೀನಿನಲ್ಲಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ, ಈ ವಿಚಾರ ಇಂದು ಬೆಳಿಗ್ಗೆ ಮನೆಯವರಿಗೆ ತಿಳಿದಿದ್ದು ಜಮೀನಿನಲ್ಲಿ ಮಹೇಶನ ಮೃತದೇಹ ಪತ್ತೆಯಾಗಿ ಕವಲಂದೆ ಠಾಣೆಯ ಪೋಲೀಸರಿಗೆ ಸುದ್ಧಿ ಮುಟ್ಟಿಸಿ ಈಗ ದೂರು ದಾಖಲಾಗಿದ್ದು, ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಶವಪರೀಕ್ಷೆಗಾಗಿ ಮೃತದೇಹವನ್ನು ಇರಿಸಲಾಗಿದೆ.
ಮೃತರು ಪತ್ನಿ ಹಾಗೂ ಇಬ್ಬರು ಹೆಣ್ಣುಮಕ್ಕಳು, ಅಪಾರ ಬಂಧು-ಬಳಗ, ಸ್ನೇಹಿತರನ್ನು ಅಗಲಿದ್ದಾರೆ. 23-02-2023 ರಂದು ಚಿಕ್ಕಕವಲಂದೆ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.