ಹಣಕಾಸು ಸಂಸ್ಥೆಗಳು ಗ್ರಾಹಕರಿಗೆ ಸಾಲ ಸೌಲಭ್ಯಗಳನ್ನು ತ್ವರಿತವಾಗಿ ಒದಗಿಸಬೇಕು : ಡಾ. ಆರ್. ಹೈದ್ರಾಬಾದ

ಕಲಬುರಗಿ:ಜ.20: ದೇಶದ ಅಭಿವೃದ್ಧಿಯಲ್ಲಿ ಹಣಕಾಸು ವ್ಯವಸ್ಥೆ ಅತ್ಯಂತ ಮಹತ್ವ ಪಡೆದಿದೆ. ವಿದೇಶಿ ಹಣಕಾಸು ಸಂಸ್ಥೆಗಳು ಅತ್ಯುತ್ತಮ ನಿರ್ವಹಣೆಯಿಂದ ಅಭಿವೃದ್ಧಿ ಸಾಧಿಸಿವೆ. ಆದರಿಂದ ಭಾರತದ ಹಣಕಾಸು ಸಂಸ್ಥೆಗಳು ಗ್ರಾಹಕರಿಗೆ ಅತಿ ಹೆಚ್ಚು ಸಾಲ ಸೌಲಭ್ಯಗಳನ್ನು ತ್ವರಿತವಾಗಿ ಒದಗಿಸುವ ಮೂಲಕ ಹಣ ವ್ಯವಹಾರ ಪರಿಣಾಮಕಾರಿಗೊಳಿಸಬೇಕು ಎಂದು ಕರ್ನಾಟಕ ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಡಾ. ಆರ್. ಹೈದ್ರಾಬಾದ ಹೇಳಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ವಾಣಿಜ್ಯ ಅಧ್ಯಯನ ವಿಭಾಗದಲ್ಲಿ ಜರುಗಿದ ‘ಭಾರತದಲ್ಲಿ ಹಣಕಾಸು ಕ್ಷೇತ್ರದ ಸುಧಾರಣೆಗಳು’ ವಿಷಯ ರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ ಅಮೇರಿಕಾ, ಇಂಗ್ಲೆಂಡ್, ಜಪಾನ್ ಮತ್ತು ಯೂರೋಪಿಯನ್ ರಾಷ್ಟ್ರಗಳು ಅಲ್ಲಿನ ಜನರ ಅಭಿವೃದ್ಧಿ ಚಟುವಟಿಕೆಗಳಿಗೆ ಗರಿಷ್ಠ ಪ್ರಮಾಣದ ಬಂಡವಾಳವನ್ನು ಸಾಲ ರೂಪದಲ್ಲಿ ನೀಡುತ್ತಿರುವುದರಿಂದ ವಿದೇಶ ಹಣಕಾಸು ವ್ಯವಸ್ಥೆ ಸುಧಾರಣೆ ಕಂಡುಕೊಂಡಿವೆ. ದೇಶದಲ್ಲಿ ಹಣಕಾಸು ಸಂಸ್ಥೆಗಳಲ್ಲಿರುವ ಗ್ರಾಹಕರ ಉಳಿತಾಯ ಹಣವನ್ನು ರಕ್ಷಿಸುವ ಬಿಗಿ ನಿಯಮಗಳನ್ನು ಜಾರಿಗೆ ತರಬೇಕು ಎಂದರು.
ಜನಸಾಮಾನ್ಯರು ದೇಶದಲ್ಲಿ ಸ್ಥಾಪನೆಯಾಗಿರುವ ವಿವಿಧ ಹಣಕಾಸು ಸಂಸ್ಥೆಗಳಾದ ವಾಣಿಜ್ಯ ಬ್ಯಾಂಕ್, ಸರ್ಕಾರಿ ಹಾಗೂ ಖಾಸಗಿ ಬ್ಯಾಂಕುಗಳು, ಸಹಕಾರ ಬ್ಯಾಂಕುಗಳು, ನಗರ ಸಹಕಾರ ಬ್ಯಾಂಕುಗಳು ಹಾಗೂ ಗ್ರಾಮೀಣ ಸಹಕಾರಿ ಬ್ಯಾಂಕುಗಳ ನೀಡುವ ಆರ್ಥಿಕ ನೆರವಿನ ಸೇವಾ ಸೌಲಭ್ಯಗಳನ್ನು ಹೆಚ್ಚು ಬಳಸಿಕೊಂಡು ಪ್ರಗತಿ ಸಾಧಿಸಬೇಕು. ಬ್ಯಾಂಕುಗಳ ಸಹಕಾರದಿಂದ ಗ್ರಾಹಕರು ಅಭಿವೃದ್ಧಿ ಸಾಧಿಸಿದರೆ. ದೇಶದ ಹಣಕಾಸು ಕ್ಷೇತ್ರದ ನಿರ್ವಹಣೆಯಲ್ಲಿ ಸುಧಾರಣೆ ಮತ್ತು ಅಭಿವೃದ್ಧಿ ಸಾಧನೆ ಸಾಧ್ಯವಾಗುತ್ತದೆ ಎಂದು ಹೇಳಿದರು.
ವಾಣಿಜ್ಯ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ. ಬಿ. ವಿಜಯ ಅಧ್ಯಕ್ಷತೆ ವಹಿಸಿ ಮಾತನಾಡಿ ಸಮ್ಮೇಳನದ ನಾಲ್ಕು ತಾಂತ್ರಿಕ ಗೋಷ್ಠಿಗಳಲ್ಲಿ ದೇಶದ ಹಣಕಾಸು ನಿರ್ವಹಣೆ, ಬ್ಯಾಂಕಿಂಗ್ ಕ್ಷೇತ್ರ, ಇನ್ಸೂರೆನ್ಸ್ ಕ್ಷೇತ್ರಲ್ಲಿನ ಪ್ರಸ್ತುತ ಸಾಧಕ ಬಾಧಕಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು, ಪ್ರಾಧ್ಯಾಪಕರು ಹಾಗೂ ಯುವ ಸಂಶೋಧಕರು ಅತ್ಯುತ್ತಮ ಪ್ರಬಂಧ ಮಂಡಿಸಲಾಗಿದೆ ಎಂದರು.
ಮೌಲ್ಯಮಾಪನ ಕುಲಸಚಿವ ಪ್ರೊ. ಜ್ಯೋತಿ ಧಮ್ಮ ಪ್ರಕಾಶ, ಸಮಾಜ ವಿಜ್ಞಾನ ನಿಕಾಯದ ಡೀನ್ ವಿದ್ಯಾವಿಷಯಕ ಪರಿಷತ್ತ ಸದಸ್ಯ ಪ್ರೊ. ಜಿ. ಶ್ರೀರಾಮುಲು, ಸಿಂಡಿಕೇಟ್ ಸದಸ್ಯೆ ಪ್ರೊ. ಸಿ. ಸುಲೋಚನಾ, ವಿತ್ತಾಧಿಕಾರಿ ಪ್ರೊ. ರಾಜನಾಳ್ಕರ್ ಲಕ್ಷ್ಮಣ, ಉಪ ಹಣಕಾಸು ಅಧಿಕಾರಿ ಹಾಗೂ ಸಮ್ಮೇಳನ ಸಂಘಟನಾ ಕಾರ್ಯದರ್ಶಿ ಪ್ರೊ. ವಾಘ್ಮೋರೆ ಶಿವಾಜಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕರ್ನಾಟಕ, ಮಹರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಪಾಂಡಿಚೇರಿ, ರಾಜಸ್ತಾನ, ಮಣಿಪುರ ರಾಜ್ಯದ ಪ್ರತಿನಿಧಿಗಳು, ವಾಣಿಜ್ಯ ವಿಭಾಗದ ಸ್ನಾತಕ ಮತ್ತು ಸ್ನಾತಕೋತ್ತರ ಸಿಬ್ಬಂದಿಗಳು, ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ, ವಿವಿಧ ರಾಜ್ಯಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಜೇವರ್ಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಕರಿಗೂಳೇಶ್ವರ ಸಮ್ಮೇಳನದ ವರದಿ ವಾಚಿಸಿದರು. ವಾಣಿಜ್ಯ ವಿಭಾಗದ ಸಂಶೋಧನಾ ವಿದ್ಯಾರ್ಥಿ ಸಂಶೋಧನಾ ವಿದ್ಯಾರ್ಥಿ ಮಾಧುರಿ ಅತಿಥಿ ಪರಿಚಯಿಸಿದರು. ಅನಿಲ್ ಡಿಗ್ಗೆ ಅತಿಥಿ ಸ್ವಾಗತಿಸಿದರು. ಬಸವರಾಜು ವಂದಿಸಿದರು. ಡಾ. ಸವಿತಾ ಪಾಟೀಲ್ ಪ್ರಾರ್ಥಿಸಿದರು. ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ನಿವೇದಿತಾ ಕಾರ್ಯಕ್ರಮ ನಿರೂಪಿಸಿದರು.