ಹಣಕಾಸು ಬಿಕ್ಕಟ್ಟು ಬೈಜೂಸ್ ಕಂಪನಿಗಳಿಗೆ ಬೀಗ

ನವದೆಹಲಿ,ಮಾ.೧೨-ತೀವ್ರ ಹಣಕಾಸು ಬಿಕ್ಕಟ್ಟಿನಿಂದಾಗಿ, ಬೈಜೂಸ್ ದೇಶದ ಬಹುತೇಕ ಕಚೇರಿಗಳಿಗೆ ಬೀಗ ಜಡಿದಿದೆ.
ಸಾಲದ ಸುಳಿಯಲ್ಲಿ ಸಿಲುಕಿರುವ ಆನ್‌ಲೈನ್ ಶಿಕ್ಷಣ ತಂತ್ರಜ್ಞಾನ ವಲಯದ ಬೈಜೂಸ್ ಕಂಪನಿಯು ದೇಶದಲ್ಲಿನ ತನ್ನ ಬಹತೇಕ ಕಚೇರಿಗಳನ್ನು ಮುಚ್ಚಿದೆ. ಆರ್ಥಿಕ ಹೊರೆಯನ್ನು ಕಡಿತಗೊಳಿಸಲು ಬೈಜೂಸ್ ಈ ತೀರ್ಮಾನ ತೆಗೆದುಕೊಂಡಿದೆ ಎಂದು ಹೇಳಲಾಗಿದೆ, ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಿದೆ.
ಸುಮಾರು ೨೦ ಸಾವಿರ ಉದ್ಯೋಗಿಗಳಿಗೆ ಸಂಬಳ ನೀಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕಚೇರಿಗಳನ್ನು ಮುಚ್ಚಲಾಗಿದೆ. ಬೆಂಗಳೂರಿನ ಐಬಿಸಿ ನಾಲೆಡ್ಜ್ ಪಾರ್ಕ್‌ನಲ್ಲಿರುವ ಪ್ರಧಾನ ಕಚೇರಿಯನ್ನು ಹೊರತುಪಡಿಸಿ ದೇಶದಾದ್ಯಂತ ಬೈಜು ತನ್ನ ಎಲ್ಲಾ ಕಚೇರಿಗಳನ್ನು ಮುಚ್ಚಿದೆ ಎಂದು ತಿಳಿದುಬಂದಿದೆ. ಮುಂದಿನ ಸೂಚನೆ ಬರುವವರೆಗೆ ಎಲ್ಲಾ ಉದ್ಯೋಗಿಗಳಿಗೆ
ಮನೆಯಿಂದಲೇ ಕೆಲಸ ಮಾಡಲು ಸೂಚಿಸಲಾಗಿದೆ. ಬೈಜೂಸ್ ಇಂಡಿಯಾ ಸಿಇಒ ಅರ್ಜುನ್ ಮೋಹನ್ ಅವರು ಅನುಷ್ಠಾನಗೊಳಿಸುತ್ತಿರುವ ಪುನರಚನಾ ಯೋಜನೆಯ ಭಾಗವಾಗಿ ಕಂಪನಿಯು ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂಬ ಮಾಹಿತಿ ನೀಡಿದ್ದಾರೆ.
ಆದರೆ ಬೈಜೂಸ್ ಟ್ಯೂಷನ್ ಸೆಂಟರ್‌ಗಳು ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತವೆ ಎಂದು ಕಂಪನಿ ತಿಳಿಸಿದೆ. ಟ್ಯೂಷನ್ ಸೆಂಟರ್‌ಗಳನ್ನು ಮುಚ್ಚಿಲ್ಲ ಏಕೆಂದರೆ ಇದು ಆದಾಯವನ್ನು ಭದ್ರಪಡಿಸಿಕೊಳ್ಳಲು ಸಹಾಯ ಮಾಡುತ್ತದೆ ಎನ್ನಲಾಗಿದೆ ಬೈಜೂಸ್‌ನ ಸಂಸ್ಥಾಪಕ ಮತ್ತು ಸಿಇಒ ಬೈಜು ರವೀಂದ್ರನ್ ಅವರು ಈ ಹಿಂದೆ ಉದ್ಯೋಗಿಗಳಿಗೆ ಫೆಬ್ರವರಿ ತಿಂಗಳ ಸಂಬಳವನ್ನು ಮಾರ್ಚ್ ೧೦ ರೊಳಗೆ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಕಂಪನಿಯು ಸಂಬಳ ನೀಡಲು ವಿಫಲವಾಗಿದೆ.
ಬೈಜು ರವೀಂದ್ರನ್ ಮತ್ತು ಕಂಪನಿಯ ಕೆಲವು ಷೇರುದಾರರ ನಡುವೆ ಹೊಸ ಮಂಡಳಿ ರಚನೆಗೆ ಸಂಬಂಧಿಸಿದಂತೆ ವಿವಾದವಿದೆ. ಕೆಲವು ದಿನಗಳ ಹಿಂದೆ, ಷೇರುದಾರರು ಬೈಜು ರವೀಂದ್ರನ್ ಮತ್ತು ಅವರ ಕುಟುಂಬವನ್ನು ಮಂಡಳಿಯಿಂದ ತೆಗೆದುಹಾಕಲು ನಿರ್ಧರಿಸಿದ್ದರು ಎನ್ನಲಾಗಿದೆ.