ಹಣಕಾಸು ಇಲಾಖೆ ಅಧಿಕಾರಿಗಳ ವಿರುದ್ಧ ಕೈ ಶಾಸಕ ಗರಂ

ಬೆಂಗಳೂರು, ಸೆ. ೧೭- ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಹಣ ಬಿಡುಗಡೆ ಮಾಡುವಂತೆ ಸಚಿವರು, ಮುಖ್ಯಮಂತ್ರಿಗಳು ಕರೆದು ಸೂಚನೆ ನೀಡಿದರೂ ಹಣಕಾಸು ಇಲಾಖೆ ಅಧಿಕಾರಿಗಳು ಅದನ್ನು ತಿರಸ್ಕರಿಸುತ್ತಿದ್ದಾರೆ. ಸಚಿವರಿಗೆ ಮುಖ್ಯಮಂತ್ರಿಗಳಿಗೆ ಹಣಕಾಸು ಇಲಾಖೆ ಅಧಿಕಾರಿಗಳ ಮೇಲೆ ನಿಯಂತ್ರಣ ಇಲ್ಲವೆ ಎಂದು ಸಿಟ್ಟು ಪ್ರದರ್ಶಿಸಿದ ಪ್ರಸಂಗ ವಿಧಾನಸಭೆಯಲ್ಲಿಂದು ನಡೆಯಿತು.
ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ನ ಶಿವಾನಂದಪಾಟೀಲ್ ಅವರು ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಪುರಸಭೆಯಲ್ಲಿ ಮೆಗಾ ಬೃಹತ್ ಮಾರುಕಟ್ಟೆ . ಕಟ್ಟಡ ಕಾಮಗಾರಿಗೆ ೩ ಕೋಟಿ ರೂ. ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದರೂ ಹಣಕಾಸು ಇಲಾಖೆ ಅಧಿಕಾರಿಗಳು ಬಿಡುಗಡೆ ಮಾಡಿಲ್ಲ. ಹೀಗಾದರೆ ಹೇಗೆ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿಗಳು ಹಣಕಾಸು ಇಲಾಖೆ, ರಾಜ್ಯದ ಹಣಕಾಸು ಸ್ಥಿತಿ ಸದೃಢವಾಗಿದೆ ಎಂದು ಹೇಳುತ್ತಾರೆ. ಆದರೆ ಸಚಿವರು ಹಾಗೂ ಮುಖ್ಯಮಂತ್ರಿಗಳು ಹಣ ಬಿಡುಗಡೆ ಮಾಡಿ ಎಂದು ಹೇಳಿದರೂ ಹಣಕಾಸು ಇಲಾಖೆ ಅಧಿಕಾರಿಗಳು ಹಣ ಬಿಡುಗಡೆ ಮಾಡದೆ ತಿರಸ್ಕರಿಸುತ್ತಾರೆ. ಹಾಗಾದರೆ ಹಣಕಾಸು ಸ್ಥಿತಿ ಸದೃಢವಾಗಿದಿಯೇ ಇಲ್ಲವೆ ಎಂಬ ಬಗ್ಗೆ ಹಣಕಾಸು ಕಾರ್ಯದರ್ಶಿಗಳೆ ಉತ್ತರ ಹೇಳಲಿ ಎಂದು ಆಕ್ರೋಶದಿಂದ ಹೇಳಿದರು.
ಬಸವನಬಾಗೇವಾಡಿಯ ಮೆಗಾ ಮಾರುಕಟ್ಟೆಗೆ ೫ ಕೋಟಿ ರೂ. ಹೆಚ್ಚುವರಿ ಹಣ ಖರ್ಚಾಗುತ್ತಿದೆ. ಇದಕ್ಕೆ ಕೂಡಲೇ ೩ ಕೋಟಿ ರೂ. ಹಣ ಬಿಡುಗಡೆ ಮಾಡಿ ಎಂದು ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ, ಈಗಿನ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಇಬ್ಬರು ಪತ್ರ ಮುಖೇನ ಹಣಕಾಸು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇಷ್ಟಾದರೂ ಹಣಕಾಸು ಇಲಾಖೆ ಅಧಿಕಾರಿಗಳು ತಿರಸ್ಕರಿಸಿದ್ದಾರೆ. ನಾವು ಪ್ರಧಾನಮಂತ್ರಿಗಳ ಕಡೆಯಿಂದ ಪತ್ರ ಬರೆಸಬೇಕಾ ಎಂದು ಸಿಟ್ಟಿನಿಂದ ಕೇಳಿದರು.
ತಮ್ಮ ಕ್ಷೇತ್ರದ ಪಟ್ಟಣ ಪಂಚಾಯ್ತಿ ಹೆಸರಿನಲ್ಲಿ ಒಳಚರಂಡಿ ಒಡೆದು ಜನರಿಗೆ ತೊಂದರೆಯಾಗುತ್ತಿದ್ದ ಹಿನ್ನೆಲೆಯಲ್ಲಿ ೩೬ ಲಕ್ಷ ರೂ.ಗಳ ಅನುದಾನ ಬಿಡುಗಡೆ ಮಾಡುವಂತೆ ಸಚಿವ ಎಂಟಿಬಿ ನಾಗರಾಜು ರವರಿಗೆ ಮನವಿ ಮಾಡಿದ್ದೆ. ಸಚಿವರು ತಕ್ಷಣ ಸ್ಪಂದಿಸಿ ಹೃದಯ ವಿಶಾಲತೆ ತೋರಿ ಹಣಕಾಸು ಇಲಾಖೆಗೆ ಹಣ ಬಿಡುಗಡೆ ಮಾಡುವಂತೆ ಸೂಚಿಸಿದ್ದರೂ ಹಣಕಾಸು ಇಲಾಖೆಯವರು ಹಣ ಬಿಡುಗಡೆ ಮಾಡಿಲ್ಲ. ಹೀಗಾದರೆ ಹೇಗೆ ಆರ್ಥಿಕ ಇಲಾಖೆಯಿಂದ ಹಣ ಬಿಡುಗಡೆ ಮಾಡಿಸುವ ಯೋಗ್ಯತೆ ಸರ್ಕಾರಕ್ಕಿಲ್ಲವೆ ಎಂದರು.
ಸದಸ್ಯರ ಪ್ರಸ್ತಾಪಕ್ಕೆ ಮಾತುಗಳಿಗೆ ಸಮಾಧಾನವಾಗಿಯೇ ಉತ್ತರ ನೀಡಿದ ಸಚಿವ ಎಂಟಿಬಿ ನಾಗರಾಜು, ಕೂಡಲೇ ೩ ಕೋಟಿ ರೂ. ಗಳ ಬಿಡುಗಡೆಗೆ ಕ್ರಮ ಕೈಗೊಳ್ಳುತ್ತೇನೆ. ಹಣ ಬಿಡುಗಡೆ ಮಾಡಿಸಿಕೊಡುತ್ತೇನೆ ಎಂದು ಹೇಳಿ ಸದಸ್ಯರನ್ನು ಸಮಾಧಾನಪಡಿಸಿದರು