ಹಣಕಾಸಿನ ಪ್ರಗತಿ, ಜೀವನಶೈಲಿ ಬದಲಾವಣೆಗೆ ಸೌರಶಕ್ತಿ ಪೂರಕ

ಕಲಬುರಗಿ:ಎ.20: ಶುದ್ಧ ಮತ್ತು ಅತ್ಯುತ್ತಮ ಸುಸ್ಥಿರ ಇಂಧನವಾದ ಸೌರಶಕ್ತಿಯ ಬಳಕೆಯು ಹಣಕಾಸಿನ ಪ್ರಗತಿ, ಜೀವನಶೈಲಿ ಬದಲಾವಣೆಗೆ ಪೂರಕವಾಗುವುದರ ಜೊತೆಗೆ ಒಟ್ಟಾರೆ ಬದುಕಿನ ಭರವಸೆ ಮೂಡಿಸುತ್ತದೆ ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪಿ.ಶುಭಾ ಅಭಿಪ್ರಾಯಪಟ್ಟರು.

ನಗರದ ಹೈಕೋರ್ಟ್ ರಸ್ತೆಯ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಸೆಲ್ಕೋ ಸೋಲಾರ್ ಪ್ರವೈಟ್ ಹಾಗೂ ಜಿಐಝಡ್ ಸಂಸ್ಥೆಗಳ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸೌರಶಕ್ತಿ ಆಧಾರಿತ ಜೀವನೋಪಾಯ ಪರಿಹಾರಗಳಿಗೆ ಹಣಕಾಸು ಸೌಲಭ್ಯ ಮತ್ತು ಅಭಿವೃದ್ಧಿಗಾಗಿ ಕಲಿಕಾ ತರಬೇತಿ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಸೌರಶಕ್ತಿಯ ಉಪಯೋಗಗಳು ವಿವಿಧ ಕ್ಷೇತ್ರದಲ್ಲಿ ಬಹಳಷ್ಟಿದೆ. ಸೆಲ್ಕೋ ಸೋಲಾರ್ ಶಕ್ತಿ ಪರಿಚಯವಾದಾಗಿನಿಂದ ಸಮಾಜ ಕಲ್ಯಾಣ ಇಲಾಖೆಗೆ ಚೈತನ್ಯದಾಯಕ ಶಕ್ತಿ ಒದಗಿಬಂದಿದೆ. ಮುಂದಿನ ಪೀಳಿಗೆಗೆ ಸೌರಶಕ್ತಿ ವರದಾನವಾಗಲಿದ್ದು, ಆರಂಭದಲ್ಲಿ ಸೌರಶಕ್ತಿ ದುಬಾರಿ ಅನಿಸಬಹುದು. ನಂತರದ ಬಾಳಿಕೆ ಉತ್ಕøಷ್ಟವಾಗಿದೆ. ಈಗಾಗಲೇ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ ಸೌರಶಕ್ತಿಯ ಬಳಕೆಯಾಗುತ್ತಿದೆ, 5 ರಿಂದ 10ನೇ ತರಗತಿ ವಿದ್ಯಾರ್ಥಿಗಳ ಸ್ಮಾರ್ಟ್ ಕ್ಲಾಸ್ ಗಳಿಗೆ ಸೌರಶಕ್ತಿ ಪ್ರಯೋಜನಕ್ಕೆ ಬಂದಿದ್ದು ಹೆಮ್ಮೆ ಮೂಡಿಸಿದೆ. ಒಟ್ಟಿನಲ್ಲಿ ಸರಕಾರಿ ಸಂಸ್ಥೆಗಳಿಗೂ ಇದರ ಸಹಾಯವಾಗುತ್ತಿದೆ ಎಂದು ಅವರು ವಿವರಿಸಿದ ಅವರು, ಸೌರಶಕ್ತಿ ಇಂದು, ಮುಂದು ಮತ್ತು ಎಂದೆಂದಿಗೂ ವರದಾನ. ಇದರ ಬೆಲೆ ಮತ್ತು ನೆಲೆ ಎಲ್ಲವೂ ಒಳಗೊಂಡಂತೆ ಇರುವುದರಿಂದ ‘ಸೌರಶಕ್ತಿ ಬಳಸಿ ಇಂಧನ ಉಳಿಸಿ’ ಎನ್ನುವ ಅಭಿಯಾನಕ್ಕೆ ಪೂರಕವಾಗಿ ನಿಲ್ಲುತ್ತದೆ ಎಂದರು.

ನಬಾರ್ಡ್ ಡಿಡಿಎಂ ರಮೇಶ ಭಟ್ ಮಾತನಾಡಿ, ಸೌರಶಕ್ತಿ ಬಳಕೆ ಬಗ್ಗೆ ಮಾಹಿತಿಯ ಕೊರತೆ ಇದೆ. ಇಂಥಹ ಅವಿಷ್ಕಾರದ ವಿವರಗಳನ್ನು ಜನರಿಗೆ ಮುಟ್ಟಿಸುವಲ್ಲಿ ವಿಫಲರಾಗಿದ್ದೇವೆ. ಅಗರಬತ್ತಿ ತಯಾರಿಕೆ ಘಟಕಕ್ಕಾಗಿ ಸೋಲಾರ ಬಳಕೆಯಾಗಿರುವ ಮಾಹಿತಿ ಇಷ್ಟವಾಯಿತು. ಕೃಷಿ ಮತ್ತು ಮಹಿಳಾ ಸಬಲೀಕರಣಕ್ಕಾಗಿ ನಬಾರ್ಡ ಹೆಚ್ಚು ಆದ್ಯತೆ ಕೊಟ್ಟಿರುವ ವಿಷಯ ಗೊತ್ತಿರುವ ಸಂಗತಿ. ಹಾಗಾಗಿ ಸ್ತ್ರೀ ಶಕ್ತಿ ಸಂಘಟನೆಗಳ ಸದಸ್ಯರಿಗೆ ಮತ್ತು ಕೃಷಿಕರಿಗೆ ಹೆಚ್ಚು ಹೆಚ್ಚು ಸೌರಶಕ್ತಿಯ ಉಪಯೋಗವಾಗಬೇಕೆನ್ನುವ ಅಭಿಲಾಷೆ ತಮ್ಮದು ಎಂದರು. ಕಲಬುರಗಿಯ ಕೆವಿಕೆ ಸಹಾಯಕ ಪ್ರಾಧ್ಯಾಪಕ ಡಾ.ಅಂಬರೀಶ ಗಣಚಾರಿ, ಸೆಲ್ಕೋನ ಡಿಜಿಎಂ ಗಳಾದ ಪ್ರಸನ್ನ ಹೆಗಡೆ, ಸುದೀಪ್ತ ಘೋಷ ಮಾತನಾಡಿದರು.

ಸಾಧನಾ ಮತ್ತು ದಿವ್ಯಾ ಅವರು ಸೆಲ್ಕೋ ಮತ್ತು ಜಿಐಝಡ್ ಸಂಸ್ಥೆಗಳ ಸಹಯೋಗದ ಕುರಿತು ವಿವರ ನೀಡಿದರು. ಸೆಲ್ಕೋ ವಲಯ ವ್ಯವಸ್ಥಾಪಕ ಡಿ.ಯಲ್ಲಾಲಿಂಗ್ ಅವರು ಸೋಲಾರ ಬಳಕೆ ಕುರಿತು ಮಾಹಿತಿ ನೀಡಿದರು. ಶಾಖಾ ವ್ಯವಸ್ಥಾಪಕ ಗುರುರಾಜ ಕುಲಕರ್ಣಿ ನಿರೂಪಿಸಿದರು. ಎಜಿಎಂ ಕರಿಸ್ವಾಮಿ ಕೆ. ಸ್ವಾಗತಿಸಿದರು. ಸೆಲ್ಕೋ ಆಡಳಿತ ವಿಭಾಗದ ಗುಂಡುರಾವ್ ಕವಡೆ, ವಿಷ್ಣು, ಜ್ಯೋತಿ ಚಕ್ರವರ್ತಿ, ಡಿ.ಸೀರಿಜಾ, ಸಂಪನ್ಮೂಲ ವ್ಯಕ್ತಿಗಳಾದ ಸಂತೋಷ ಜವಳಿ, ಸೋನಾವಾರಕರ್ ಉಪಸ್ಥಿತರಿದ್ದರು.

ಕಲಬುರಗಿ ಜಿಲ್ಲೆಯ ವಿವಿಧ ಭಾಗಗಳಿಂದ ಸರ್ಕಾರಿ, ಅರೆ ಸರ್ಕಾರಿ, ಸರ್ಕಾರೇತರ ಸಂಸ್ಥೆಗಳ ಹಾಗೂ ವಿವಿಧ ಬ್ಯಾಂಕುಗಳ ಅಧಿಕಾರಿಗಳು ಮತ್ತು ಮಹಿಳಾ ಸ್ವಸಹಾಯ ಗುಂಪುಗಳ ಪ್ರತಿನಿಧಿಗಳು, ಸೌರಶಕ್ತಿ ಆಧಾರಿತ ಜೀವನೋಪಾಯ ಕಸುಬುಗಳ ಆಕಾಂಕ್ಷಿಗಳು ಹಾಗೂ ಯಶಸ್ವೀ ಫಲಾನುಭವಿಗಳು ಭಾಗವಹಿಸಿದ್ದರು.