ಹಡ್ಲಿಗಿ ಗ್ರಾಮದ ಕುಡಿಯುವ ನೀರಿನ ಸಮಸ್ಯೆ  ಪರಿಹರಿಸಲು ಒತ್ತಾಯ


ಸಂಜೆವಾಣಿ ವಾರ್ತೆ
ಕುರುಗೋಡು.ಜು. 21  ಸಮೀಪದ ಹಡ್ಲಿಗಿ ಗ್ರಾಮದಲ್ಲಿ ಅಧಿಕಾರಿಗಳು ಹಾಗು ಕುಡಿಯುವ ನೀರಿನ ಗುತ್ತಿಗೆದಾರರ ನಿರ್ಲಕ್ಷದಿಂದಾಗಿ ಗ್ರಾಮದಲ್ಲಿ ಒಂದು ತಿಂಗಳುಕಾಲ ಸಕಾಲಕ್ಕೆ ಕುಡಿಯುವ ನೀರು ಸರಬರಾಜು ಇಲ್ಲದೆ ಗ್ರಾಮಸ್ಥರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ.  ಇದರಿಂದಾಗಿ ಕುಡಿಯುವ ನೀರಿಗಾಗಿ ಗ್ರಾಮಸ್ಥರು ಪಕ್ಕದ ಊರುಗಳಿಗೆ ಹೋಗಿ ನೀರು ಕುಡಿಯುವ ದುಸ್ತಿತಿ ಬಂದಿದೆ ಎಂದು ಹಡ್ಲಿಗಿ ಗ್ರಾಮದ ತಾಪಂ ಮಾಜಿ ಉಪಾದ್ಯಕ್ಷ ಸಿ.ಮಲ್ಲಿಕಾರ್ಜುನ ವಿಷಾದವ್ಯಕ್ತಪಡಿಸಿದರು.
ಅವರು ಗುರುವಾರ ಸಮೀಪದ ಹಡ್ಲಿಗಿ ಗ್ರಾಮದಲ್ಲಿ ಗ್ರಾಮಸ್ಥರಿಂದ ಕುಡಿಯುವ ನೀರಿಗಾಗಿ ಕರೆಯಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಗ್ರಾಮದ ಕುಡಿಯುವ ನೀರಿನ ಕೆರೆಯು ಸರಿಯಾಗಿ ನಿರ್ವಹಣೆ ಇಲ್ಲದೆ ಗ್ರಾಮಸ್ಥರು 1 ತಿಂಗಳಿನಿಂದಲೂ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಾ ಬಂದಿದ್ದಾರೆ ಎಂದು ದೂರಿದರು. ಪ್ರಾರಂಭದಲ್ಲಿ ಮಾಜಿಶಾಶಕ ಎನ್.ಸೂರ್ಯನಾರಾಯಣರೆಡ್ಡಿಯವರು ಗ್ರಾಮದ ಜನತೆಗೆ ಕುಡಿಯುವ ನೀರನ ಸಮಸ್ಯೆಯನ್ನು ನೀಗಿಸಲು ತಾತ್ಕಾಲಿಕವಾಗಿ ನೀರಿನ ಟ್ಯಾಂಕನ್ನು ಬಿಟ್ಟಿದ್ದರು. ಅದಕ್ಕೆ ತಡೆಯೊಡ್ಡಿ ನೀರಾವರಿ ಇಲಾಖೆಯ ಸಹಬಾಗಿತ್ವದಲ್ಲಿ ಸ್ಥಳೀಯ ಗ್ರಾಮಪಂಚಾಯಿತಿ ಆಡಳಿತ ಕೇವಲ 2 ಕುಡಿಯುವ ನೀರಿನಟ್ಯಾಂಕನ್ನು ಬಿಟ್ಟು ಕೈತೊಳೆದುಕೊಂಡಿದೆ. ಇದರಿಂದಾಗಿ ಗ್ರಾಮದಲ್ಲಿ 5 ಸಾವಿರ ಜನಸಂಖ್ಯೆಯನ್ನು ಉಳ್ಳ ಜನತೆಗೆ ಕಡಿಮೆ ಟ್ಯಾಂಕಿನಿಂದ ನೀರು ಸಾಕಾಗುವುದಿಲ್ಲ ಎಂದು ಊರಿನ ಮಹಿಳೆಯರು ಕಿತ್ತಾಟ ಸುರುಮಾಡಿದ್ದಾರೆ. ಈಗ ಗ್ರಾಮಕ್ಕೆ ಕುಡಿಯುವ ನೀರಿನ ಟ್ಯಾಂಕು  ಸಹ ಬಂದಿಲ್ಲ. ಪರಿಸ್ಥಿತಿ ಹೀಗೆ ಮುಂದುವರಿದರೆ ಗ್ರಾಮಸ್ಥರ ಕುಡಿಯುವ ನೀರಿನ ಗತಿ ಏನು ಎಂದು ಪ್ರಶ್ನಿಸಿದರು ?  ಆದ್ದರಿಂದ ಕೂಡಲೇ ಜಿಲ್ಲಾಡಳಿತ ಮುತುವರ್ಜಿವಹಿಸಿ ಗ್ರಾಮಕ್ಕೆ ಸಂಪೂರ್ಣವಾಗಿ ಕುಡಿಯುವ ನೀರನ್ನು ಪೂರೈಸಬೇಕು, ಇಲ್ಲದಿದ್ದರೆ ಗ್ರಾಮಸ್ಥರಿಂದ ಹೋರಾಟ ಮಾಡಲಾಗುವುದು ಎಂದು ನುಡಿದರು.
ಗ್ರಾಮದ ಹಿರಿಯ ಮುಖಂಡ  ಎಂ.ಚೌಡಪ್ಪ ಮಾತನಾಡಿ, ಗ್ರಾಮದಲ್ಲಿ ಈಗಾಗಲೇ ಕೇವಲ 1 ಶುದ್ದಕುಡಿಯುವ ನೀರಿನ ಘಟಕ ಇದ್ದು, ಅದು ರಿಪೇರಿಬಂದು ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು, ಗ್ರಾಮಸ್ಥರು ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ ಎಂದರು. ಆದ್ದರಿಂದ ಸಂಬಂದಪಟ್ಟ ಇಲಾಖೆ ಅಧಿಕಾರಿಗಳು ದುರಸ್ತಿಯಲ್ಲಿರುವ ಕುಡಿಯುವ ನೀರಿನ ಕೆರೆಯನ್ನು ಸರಿಪಡಿಸಿ ಕೂಡಲೇ ಹಡ್ಲಿಗಿ ಗ್ರಾಮಕ್ಕೆ ಕುಡಿಯುವ ನೀರಿನ್ನು ಪೂರೈಸಿ, ಜನತೆಗೆ ಅನುಕೂಲಕಲ್ಪಿಸಬೇಕೆಂದು ಆಗ್ರಹಿಸಿದರು. ಪತ್ರಿಕಾಗೋಷ್ಟಿಯಲ್ಲಿ ರೈತ ಸಂಘದ ಅದ್ಯಕ್ಷ ಬಿ.ಚನ್ನಪ್ಪ, ಉಪಾದ್ಯಕ್ಷ ಎಂ.ಪೋತಯ್ಯ, ಸಿದ್ದಪ್ಪ, ಎಂ.ಮಂಜು, ಗಾದಿಲಿಂಗಪ್ಪ ಸೇರಿದಂತೆ ಇತರೆ ಗ್ರಾಮಸ್ಥರು ಇದ್ದರು.

Attachments area