ಹಡೀಲು ಬಿದ್ದ ಗದ್ದೆಗಳಿಗೆ ಮರುಜೀವ: ೫೦ ಎಕರೆ ಪ್ರದೇಶದಲ್ಲಿ ಭತ್ತದ ಕೃಷಿ

ಪುತ್ತೂರು, ಜೂ.೫- ದ.ಕ.ಜಿಲ್ಲೆಯಲ್ಲಿ ಸುಮಾರು ಐದು ಸಾವಿರಕ್ಕೂ ಮಿಕ್ಕಿ ಹಡೀಲು ಬಿದ್ದ ಕೃಷಿಭೂಮಿಗಳಿರುವ ಮಾಹಿತಿ ಲಭ್ಯವಾಗಿದ್ದು, ಭತ್ತದ ಕೃಷಿ ಮಾಡುವ ಮೂಲಕ ಕೃಷಿಗೆ ಹೆಚ್ಚಿನ ಒತ್ತು ನೀಡುವಂತೆ ಕ್ಷೇತ್ರವಾರು ಆಯಾ ಶಾಸಕರ ಜತೆ ಮಾತುಕತೆ ನಡೆಸಲಾಗಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಶುಕ್ರವಾರ ಇಲ್ಲಿಯ ತಾಪಂನ ಸಾಮರ್ಥ್ಯ ಸೌಧದಲ್ಲಿ ಭತ್ತದ ಕೃಷಿಗೆ ಒತ್ತು ನೀಡುವ ನಿಟ್ಟಿನಲ್ಲಿ ಕೃಷಿ ಇಲಾಖಾ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಅಡಕೆ ಕೃಷಿ ಜಾಸ್ತಿಯಾಗಿರುವ ಹಿನ್ನಲೆಯಲ್ಲಿ ಸುಮಾರು ೫೧ ಎಕ್ರೆ ಹಡೀಲು ಬಿದ್ದ ಕೃಷಿ ಭೂಮಿಯನ್ನು ಗುರುತಿಸಲಾಗಿದೆ. ಇಲ್ಲಿ ಭತ್ತದ ಕೃಷಿ ಮಾಡುವ ನಿಟ್ಟಿನಲ್ಲಿ ತಾಲೂಕಿನ ಜೆಡಿ, ಎಡಿ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳ ಸಮಕ್ಷಮ ಈ ಸಭೆಯನ್ನು ನಡೆಸಿ ಬೇಕಾದ ಪೂರ್ವ ತಯಾರಿಗಳಾದ ಬಿತ್ತನೆ ಬೀಜ, ನೇಜಿ ತಯಾರಿ, ಉಳುಮೆಗೆ ಸಂಬಂಧಿಸಿ ಹಾಗೂ ಮೂಲ ಕೃಷಿಕರ ಸಹಕಾರದೊಂದಿಗೆ ಎಲ್ಲರೂ ಒಟ್ಟಾಗಿ ಭತ್ತದ ಕೃಷಿ ಮಾಡುವ ಹಾಗೂ ಎಂಎ೪ ಭತ್ತದ ತಳಿಯನ್ನು ಬಳಕೆ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ಒಟ್ಟಾರೆಯಾಗಿ ಹಡೀಲು ಬಿದ್ದಿರುವ ೫೧ ಎಕ್ರೆ ಭೂಮಿಯಲ್ಲಿ ಭತ್ತದ ಕೃಷಿಯನ್ನು ಬೆಳೆಯುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಲಿದ್ದೇವೆ ಎಂದು ಅವರು ತಿಳಿಸಿದರು. ತಾಲೂಕಿನಲ್ಲಿ ಮಂಗಳ, ನವಿಲು, ಆನೆ ಮುಂತಾದ ಕಾಡು ಪ್ರಾಣಿಗಳ ಹಾವಳಿ ಜಾಸ್ತಿಯಾಗಿದ್ದು, ಏನಾದರೂ ಸೂಕ್ತ ಪರಿಹಾರ ಇದೆಯಾ ಎಂಬುದನ್ನು ನೋಡುತ್ತೇವೆ. ಜತೆಗೆ ಬೆಳೆ ವಿಮೆಗೂ ಒತ್ತು ನೀಡಲಾಗುವುದು ಎಂದು ಅವರು ತಿಳಿಸಿದರು.
ಹಾಲುತ್ಪಾದಕರ ಸಹಕಾರಿ ಸಂಘ, ಕೃಷಿಪತ್ತಿನ ಸಹಕಾರಿ ಸಂಘದವರಿಗೆ ಒಟ್ಟು ಬ್ಯಾಂಕರ‍್ಸ್‌ಗಳು ಎದುರುಗಡೆ ನಿಂತು ಕೆಲಸ ಕಾರ್ಯಗಳನ್ನು ಮಾಡುವುದರಿಂದ ಪ್ರಥಮ ಪ್ರಾಶಸ್ತ್ಯದಡಿ ಲಸಿಕೆ ನೀಡಬೇಕು ಎಂಬ ಮನವಿಯನ್ನು ನೀಡಿದ್ದಾರೆ. ಅಲ್ಲದೆ ಗ್ರಾಪಂ , ಪಟ್ಟಣ ಪಂಚಾಯಿತಿ, ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು ಕೊರೊನಾ ವಾರಿಯರ‍್ಸ್ ಆಗಿ ಕೆಲಸ ಕಾರ್ಯ ಮಾಡುತ್ತಿದ್ದು, ಅವರಿಗೂ ಲಸಿಕೆ ನೀಡುವ ಕುರಿತು ಪ್ರಾಶಸ್ತ್ಯ ನೀಡಬೇಕು ಎಂದು ಮುಖ್ಯಮಂತ್ರಿಗಳ ಆದೇಶದಂತೆ ನೀಡಲಾಗುತ್ತಿದೆ ಎಂದರು.
ಸಹಜವಾಗಿ ಯಾರಿಗೂ ಲಾಕ್‌ಡೌನ್ ವಿಸ್ತರಣೆ ಮಾಡುವ ಕುರಿತು ಇಷ್ಟವಿಲ್ಲ. ಆದರೆ ಕೊರೋನಾ ಸರಪಣಿಯನ್ನು ತುಂಡರಿಸುವ ನಿಟ್ಟಿನಲ್ಲಿ ಲಾಕ್‌ಡೌನ್ ಅನಿವಾರ್ಯ ಪರಿಸ್ಥಿತಿ ಉಂಟಾಗಿದೆ. ಪ್ರತೀ ಗ್ರಾಪಂ, ನಗರಸಭೆಯಲ್ಲೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಕುರಿತು ಸೂಚನೆ ನೀಡಲಾಗಿದೆ. ಕೊರೋನಾ ಶೂನ್ಯಮಟ್ಟಕ್ಕೆ ಬರುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದು ಅವರು ತಿಳಿಸಿದರು.
ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿದಂತೆ ಸಮೀಕ್ಷೆ ನಡೆಸಲು ಕೇಂದ್ರದ ತಂಡವೊಂದು ಆಗಮಿಸಲಿದೆ ಎಂದು ಮಾಹಿತಿ ಲಭ್ಯವಾಗಿದೆ. ಈಗಾಗಲೇ ಜಿಲ್ಲಾಧಿಕಾರಿಗಳ ಮೂಲಕ ಸುಮಾರು ೮೦ ಕೋಟಿ ರೂ. ಪರಿಹಾರದ ಸಮೀಕ್ಷೆಗಳು ಹೋಗಿದೆ. ಮತ್ತೆ ಸುಮಾರು ೧೨೫ ಕೋಟಿ ರೂ.ನಲ್ಲಿ ಪಿಡಬ್ಲ್ಯೂಡಿ, ಗ್ರಾಪಂ ರಸ್ತೆಗಳು, ಮನೆಗೆ ಜರಿದು ಬಿದ್ದಿರುವ ಘಟನೆ, ಸಮುದ್ರ ಕೊರೆತ ಪರಿಹಾರದ ಮೊತ್ತ ಇಡಲಾಗಿದೆ ಎಂಬ ಮಾಹಿತಿ ಸಿಕ್ಕಿದೆ. ಒಟ್ಟಾರೆ ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿದಂತೆ ಗರಿಷ್ಠ ಪರಿಹಾರ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಸಭೆಯಲ್ಲಿ ಪುತ್ತೂರು ಶಾಸಕ ಸಂಜೀವ ಮಠಂದೂರು, ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸೀತಾ, ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಉಪಸ್ಥಿತರಿದ್ದರು.
ವಿಟ್ಲ ಎಡಿ ವಿರುದ್ಧ ಸಚಿವರು ಗರಂ : ಸಭೆಗೆ ವಿಳಂಬವಾಗಿ ಆಗಮಿಸಿದ ವಿಟ್ಲ ಕೃಷಿ ಇಲಾಖೆ ಎಡಿ ವಿರುದ್ಧ ಸಚಿವರು ಗರಂ ಆಗಿ, ಜವಾಬ್ದಾರಿ ಅರಿತು ಸಭೆ ಆರಂಭಗೊಳ್ಳುವ ಮುಂಚಿತವಾಗಿ ಪಾಲ್ಗೊಳ್ಳಬೇಕು. ಈ ಕುರಿತು ನಾನೇನೂ ಹೇಳುವುದಿಲ್ಲ. ಜಿಲ್ಲಾಧಿಕಾರಿಗಳ ಜತೆ ಮಾತನಾಡಿ ಎಂದರು.
ಅತಿಥಿ ಶಿಕ್ಷಕರಿಗೂ ಪ್ಯಾಕೇಜ್ ಪರಿಶೀಲನೆ-ಕೋಟ
ಪುತ್ತೂರು, ಜೂ.೫- ರಾಜ್ಯದಲ್ಲಿ ಅತಿಥಿ ಶಿಕ್ಷಕರಾಗಿ ಕೆಲಸ ಮಾಡುತ್ತಿರುವವರ ಬದುಕು ಕಷ್ಟದಲ್ಲಿರುವುದು ಗೊತ್ತಾಗಿದೆ. ಸರ್ಕಾರ ಪ್ರಕಟಿಸುತ್ತಿರುವ ಪ್ಯಾಕೇಜ್‌ನಲ್ಲಿ ಅತಿಥಿ ಶಿಕ್ಷಕರನ್ನು ಕೂಡ ಸೇರಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಪುತ್ತೂರಿನಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ
ಅವರು ಈ ವಿಷಯ ತಿಳಿಸಿದರು.
ಬಸ್ ಕಂಡಕ್ಟರ್‌ಗಳು, ಡ್ರೈವರ್‌ಗಳು, ಫೊಟೋಗ್ರಾಫರ್‌ಗಳು ಸೇರಿದಂತೆ ಹಲವು ವರ್ಗದ ಜನ ಅತಿಥಿ ಶಿಕ್ಷಕರಂತೆ ತಮ್ಮ ಬೇಡಿಕೆಗಳನ್ನು ಸಲ್ಲಿಸಿದ್ದಾರೆ. ಈಗಾಗಲೇ ಮುಖ್ಯಮಂತ್ರಿಗಳು ಅನೇಕ ವರ್ಗಕ್ಕೆ ತಮ್ಮ ಪ್ಯಾಕೇಜ್‌ನಲ್ಲಿ ನೆರವು ಪ್ರಕಟಿಸಿದ್ದಾರೆ. ಇನ್ನು ಉಳಿದವರನ್ನು ಪಟ್ಟಿ ಮಾಡಿ ಅದನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸುತ್ತೇನೆ. ಇದಲ್ಲದೆ ಗರಡಿ ಅರ್ಚಕರು ಕೂಡ ಸಮಸ್ಯೆಯಲ್ಲಿದ್ದಾರೆ. ಅವರು ಸೇರಿದಂತೆ ಸಂಕಷ್ಟದಲ್ಲಿರುವ ಇನ್ನೂ ಹಲವು ವರ್ಗದ ಜನರನ್ನು ಗಮನಿಸಬೇಕಾಗಿದೆ. ಎಲ್ಲರೂ ಒಟ್ಟಾಗಿ ಒಂದಾಗಿ ಈ ಪರಿಸ್ಥಿತಿಯನ್ನು ಎದುರಿಸಿಕೊಂಡು ಮುನ್ನುಗ್ಗುವ ಅನಿವಾರ್ಯತೆ ಇದೆ ಎಂದು ಸಚಿವರು ಹೇಳಿದರು.
ಇದಕ್ಕೂ ಮೊದಲು ದಕ್ಷಿಣ ಕನ್ನಡ ಜಿಲ್ಲಾ ಅತಿಥಿ ಶಿಕ್ಷಕರ ಸಂಘದ ಕಾರ್ಯದರ್ಶಿ ಚಿತ್ರಲೇಖ ಅವರು ಸಚಿವರನ್ನು ಕಂಡು ಮನವಿ ಮಾಡಿದರು. ನಿಮ್ಮ ಕಷ್ಟ ನಮಗೆ ಅರ್ಥವಾಗುತ್ತದೆ. ಸರ್ಕಾರದ ಮಟ್ಟದಲ್ಲಿ ಗಮನ ಸೆಳೆಯಲಾಗುವುದು
ಎಂದು ಸಚಿವರು ತಿಳಿಸಿದರು.