ಹಡಿಲು ಬಿದ್ದ ಭತ್ತ ಕೃಷಿ ಭೂಮಿ ಕೃಷಿ ಕಾರ್ಯ ಸಕಲ ಸಿದ್ದತೆಗೆ ಯೋಜನೆ

ಬಂಟ್ವಾಳ, ಜೂ.೧-ಹಡಿಲು ಬಿದ್ದ ಭತ್ತ ಕೃಷಿ ಭೂಮಿಗೆ ಕಾಯಕಲ್ಪ ನೀಡುವ ಮಹತ್ವಾಕಾಂಕ್ಷೆಯ ಯೋಜನೆ ತಯಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಜಂಟಿಯಾಗಿ ಕೃಷಿಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ದ.ಕ.ಜಿಲ್ಲೆಯ ರೇಷನ್ ಕಾರ್ಡುದಾರರಿಗೆ ಕೆಂಪು ಕಜೆ ನೀಡುವ ಬಗ್ಗೆ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಚಿಂತನೆ ನಡೆಸಿದ್ದು ಇದರ ಪೂರ್ವಭಾವಿ ಯಾಗಿ ಹಡಿಲು ಬಿದ್ದ ಭತ್ತ ಕೃಷಿ ಭೂಮಿಯನ್ನು ಗುರುತಿಸಿ ಕೃಷಿ ಮಾಡುವ ಉದ್ದೇಶದಿಂದ ಅಧಿಕಾರಿಗಳಿಂದ ಮಾಹಿತಿ ಪಡೆಯುವ ನಿಟ್ಟಿನಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ಜೊತೆಗೆ ಶಾಸಕರ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದರು.
ಮುಂಗಾರು ಮಳೆ ಆರಂಭವಾದ ಕೂಡಲೇ ಕರಾವಳಿಯಲ್ಲಿ ಕೃಷಿ ಚಟುವಟಿಕೆಗಳು ಚುರುಕುಗೊಳ್ಳಬೇಕಾದ ಹಿನ್ನೆಲೆಯಲ್ಲಿ ಹಡಿಲು ಬಿದ್ದ ಭತ್ತ ಕೃಷಿ ಭೂಮಿಯನ್ನು ಹದಮಾಡಿ ನೇಜಿ ನೆಡುವ ಕಾರ್ಯಕ್ಕೆ ಸಕಲ ಸಿದ್ದತೆ ಮಾಡಲು ಯೋಜನೆ ರೂಪಿಸಲಾಯಿತು.
ಈಗಾಗಲೇ ಹಡಿಲು ಬಿದ್ದ ಕೃಷಿ ಭೂಮಿಯ ಗುರುತಿಸುವಿಕೆ ಕಾರ್ಯ ಈಗಾಗಲೇ ಮುಗಿದಿದ್ದು ಬಂಟ್ಚಾಳ ತಾಲೂಕಿನಲ್ಲಿ ಒಟ್ಟು ೪೦೦ ಎಕರೆ ಭತ್ತ ಕೃಷಿ ಭೂಮಿ ಹಡಿಲು ಬಿದ್ದಿದ್ದು ಅದರಲ್ಲಿ ೧೬೦ ಎಕರೆ ಕೃಷಿಗೆ ಯೊಗ್ಯವಾಗಿದ್ದು ಈ ಬಾರಿ ೭೫ ಎಕರೆಯಲ್ಲಿ ಭತ್ತ ಕೃಷಿ ಮಾಡಲು ಯೋಜನೆಗೆ ಸಿದ್ದ ಮಾಡಿ ಎಂದು ಅಧಿಕಾರಿಗಳಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಆರಂಭಿಕ ಹಂತದಲ್ಲಿ ನರ್ಸರಿ ಕ್ರಮದ ಮೂಲಕ ಭತ್ತ ಕೃಷಿ ಚಟುವಟಿಕೆ ಮಾಡಲು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ನೇತ್ರತ್ವದಲ್ಲಿ ಸಿದ್ದತೆ ನಡೆಸಲಾಗಿದೆ ಎಂದು ಅವರು ತಿಳಿಸಿದರು.
ಸಂಗಬೆಟ್ಟು ಗ್ರಾ.ಪಂ.ವ್ಯಾಪ್ತಿಯಲ್ಲಿ ಒಟ್ಟು ೨೪ ಎಕರೆ ಭತ್ತ ಕೃಷಿ ಭೂಮಿ ಹಡಿಲು ಬಿದ್ದಿದ್ದು, ಸಿದ್ದಕಟ್ಟೆ ಯಲ್ಲಿ ಒಂದೇ ಕಡೆ ೧೦ ಎಕರೆ ಇದೆ. ಇಲ್ಲಿನ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಪ್ರಭಾಕರ ಪ್ರಭು ಅವರ ಮುತುವರ್ಜಿಯಿಂದ ಬ್ಯಾಂಕ್ ಸಹಕಾರ ಹಾಗೂ ಕೃಷಿ ಇಲಾಖೆ ಜಂಟಿ ಸಹಕಾರದಿಂದ ಈಗಾಗಲೇ ಭತ್ತ ಕೃಷಿ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಹಿರಿಯ ಅಧಿಕಾರಿಗಳ ಜೊತೆ ೧೬೦ ಎಕರೆ ಗುರುತಿಸಿ ಲಾಗಿದೆ ಶಾಸಕರ ನೇತ್ರತ್ವದಲ್ಲಿ . ಜಯ, ಎಮ್ ಒ.೪ , ಜ್ಯೋತಿ, ಒಟ್ಟು ನಾಲ್ಕು ತಳಿಗಳನ್ನು ಉಪಯೋಗ ಮಾಡಿಕೊಂಡು ಕೃಷಿ ಮಾಡಲಿದ್ದೇವೆ ಎಂದರು.
ಬಂಟ್ವಾಳ ಶಾಸಕರು ಕೃಷಿಯ ಬಗ್ಗೆ ವಿಶೇಷ ಮುತುವರ್ಜಿ ವಹಿಸಿಕೊಂಡದ್ದಲ್ಲದೆ ಅವರ ಕ್ಷೇತ್ರದ ಲ್ಲಿ ಪ್ರಥಮವಾಗಿ ಹಡಿಲು ಬಿದ್ದ ಭತ್ತ ಕೃಷಿಮಾಡಲು ಅವರು ಮುಂದಾಗಿದ್ದಾರೆ ಹಾಗಾಗಿ ಅವರಿಗೆ ಸರಕಾರದ ವತಿಯಿಂದ ವಿಶೇಷ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಶಾಸಕರು ಮತ್ತು ಅವರ ಜೊತೆ ಇರುವ ಶಾಸಕರ ತಂಡ ಮತ್ತು ಅಯಾಯ ಭಾಗದ ಕೃಷಿಕರನ್ನು ಪೂರ್ಣ ಪ್ರಮಾಣದಲ್ಲಿ ಜೋಡಿಸಿಕೊಂಡು ಕೃಷಿ ಮಾಡಲು ಯೋಜನೆ ರೂಪಿಸಲಾಗಿದೆ. ಈ ಜಿಲ್ಲೆಯಲ್ಲಿರುವ ಗುಣಮಟ್ಟದ ಕೆಂಪು ಕುಚಲಕ್ಕಿಯನ್ನು ನವೆಂಬರ್ ತಿಂಗಳಲ್ಲಿ ಜಿಲ್ಲೆಯ ರೇಷನ್ ಕಾರ್ಡುದಾರರಿಗೆ ನೀಡುವ ವಿಶ್ವಾಸವಿದೆ ಎಂದರು.
ಬಂಟ್ವಾಳ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಈ ಬಾರಿ ಮುಂಗಾರು ಮಳೆಯನ್ನೇ ಅವಲಂಭಿಸಿ ಭತ್ತ ಕೃಷಿ ಮಾಡಲು ಇಲಾಖೆ ಮುಂದಾಗಿದ್ದು , ಕೃಷಿ ಚಟುವಟಿಕೆಗಳಿಗೆ ಸುಲಭ ಸಾಧ್ಯ ವಾಗುವ ನಿಟ್ಟಿನಲ್ಲಿ ಒಂದೇ ಕಡೆಗಳಲ್ಲಿ ಹಡಿಲು ಬಿದ್ದ ಜಮೀನುಗಳನ್ನು ಗುರುತಿಸಿ ಆರಂಭದಲ್ಲಿ ಕೃಷಿ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ತಿಳಿಸಿದರು.
ಪ್ರಸ್ತುತ ಅಮ್ಟಾಡಿ ೧೮ ಎಕರೆ ಇದೆ, ಪಾಣೆಮಂಗಳೂರು ೧೬ ಎಕರೆ , ಶಂಭೂರು ೩೩ ಎಕರೆ , ಕಾವಳಮೂಡೂರು ೧೫ ಎಕರೆ ಕಡೆಗಳಲ್ಲಿ ಯಾಂತ್ರಿಕವಾಗಿ ಕೃಷಿ ಮಾಡಲು ಅವಕಾಶವಿದ್ದು ಇಲ್ಲಿನ ಒಟ್ಟು ೭೫ ಎಕರೆ ಜಮೀನಿನಲ್ಲಿ ಈ ಬಾರಿ ಉತ್ತಮ ಇಳುವರಿ ಕೊಡುವ ಸಾವಯವ ಭತ್ತ ಕೃಷಿ ಮಾಡಲು ಯೋಜನೆ ಸಿದ್ದವಾಗಿದೆ ಎಂದು ಶಾಸಕರು ತಿಳಿಸಿದರು.
ಈ ಸಂದರ್ಭದಲ್ಲಿ ಬಂಟ್ವಾಳ ತಹಶಿಲ್ದಾರ್ ರಶ್ಮಿ. ಎಸ್.ಆರ್. ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಡಾ! ಸೀತಾ ಉಪಸ್ಥಿತರಿದ್ದರು.