ಹಡಪದ ಅಪ್ಪಣ್ಣನವರ ಜಯಂತಿ ಆಚರಣೆ

ಬ್ಯಾಡಗಿ,ಜು.15: 12ನೇ ಶತಮಾನದಲ್ಲಿ ಶಿವಶರಣ ಹಡಪದ ಅಪ್ಪಣ್ಣನವರು ಆದ್ಯ ವಚನಕಾರರಾಗಿ, ಪ್ರಮುಖವಾದ ವಚನಗಳ ಮುಖಾಂತರ ಮಹತ್ತರ ಬದಲಾವಣೆಗೆ ಮುನ್ನುಡಿ ಬರೆದ ಮಹನೀಯರಾಗಿದ್ದಾರೆ ಎಂದು ತಹಶೀಲ್ದಾರ ಎನ್.ತಿಪ್ಪೇಸ್ವಾಮಿ ಹೇಳಿದರು
ತಾಲೂಕು ಕಛೇರಿಯ ಸಭಾಂಗಣದಲ್ಲಿ ತಾಲೂಕಾಡಳಿತ ಹಾಗೂ ಹಡಪದ ಅಪ್ಪಣ್ಣ ಸಮಾಜ ಸಂಘದ ವತಿಯಿಂದ ಆಯೋಜಿಸಲಾಗಿದ್ದ ನಿಜಶರಣ ಹಡಪದ ಅಪ್ಪಣ್ಣನವರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಪ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅವರು, ಬಸವಣ್ಣನವರು 12ನೇ ಶತಮಾನದಲ್ಲಿ ನೂರಾರು ಶರಣರನ್ನು ಒಂದು ಕಡೆ ಸೇರಿಸಿ ಕಾಯಕ ವೃತ್ತಿಯನ್ನು ಪ್ರಾರಂಭಿಸಿದರು. ಯಾರು ಕಾಯಕವನ್ನು ಮಾಡುತ್ತಾರೋ ಅಲ್ಲಿ ನಿರುದ್ಯೋಗದ ಸಮಸ್ಯೆ ಇರುವುದಿಲ್ಲ, ಪ್ರತಿಯೊಬ್ಬರೂ ಕೂಡ ಅವರವರ ಕಾಯಕದಲ್ಲಿ ತೊಡಗಿಕೊಂಡರೆ ನಿರುದ್ಯೋಗವನ್ನು ತೊಲಗಿಸಬಹುದು. ನಿಜಶರಣ ಹಡಪದ ಅಪ್ಪಣ್ಣ ಅವರು ರಚಿಸಿದ್ದ ವಚನಗಳು ಸಮಾಜಕ್ಕೆ ದಾರಿದೀಪವಾಗಿವೆ ಎಂದರು.
ಬಸವಪ್ರಸಾರ ಸಮಿತಿಯ ಶರಣೆ ಹರ್ಷಿತಾ ಲಾಳಸಂಗಿ ಉಪನ್ಯಾಸ ನೀಡಿ, ಶರಣರಾದ ಅಂಬಿಗರ ಚೌಡಯ್ಯ, ಹಡಪದ ಅಪ್ಪಣ್ಣ, ಮೋಳಿಗೆಯ ಮಾರಯ್ಯ, ಡೋಹರ ಡಕ್ಕಯ್ಯ, ಮೇಧಾರ ಕೇತಯ್ಯ, ಸಮಗಾರ ಹರಳಯ್ಯ, ಸೊನ್ನಲಗದ ಸಿದ್ದರಾಮ ಸೇರಿದಂತೆ ಜಗತ್ತಿನ ಎಲ್ಲ ಧರ್ಮದ ಶರಣರಿಗೆ ಬಸವಣ್ಣನವರು 12ನೇ ಶತಮಾನದ ಅನುಭವ ಮಂಟಪದಲ್ಲಿ ಅವಕಾಶ ಕಲ್ಪಿಸಿದ್ದರು. ಈ ಸಮಾಜದಲ್ಲಿ ಬೆಳಗ್ಗೆ ಎದ್ದ ತಕ್ಷಣವೇ ಹಡಪದ ಅವರ ಮುಖ ನೋಡಬಾರದು ಎಂಬ ತಪ್ಪು ಕಲ್ಪನೆಯನ್ನು ದೂರ ಮಾಡಲು ಬಸವಣ್ಣನವರು ಅಪ್ಪಣ್ಣನವರನ್ನು ತಮ್ಮ ಆಪ್ತ ಕಾರ್ಯದರ್ಶಿಯನ್ನಾಗಿ ಮಾಡಿಕೊಳ್ಳುವ ಮೂಲಕ ತಮ್ಮನ್ನು ನೋಡಲು ಬರುವವರೆಲ್ಲರೂ ಮೊದಲು ಅಪ್ಪಣ್ಣನವರನ್ನು ಭೇಟಿ ಮಾಡಿ ಬರುವಂತೆ ಮಾಡಿದ್ದರು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದು ಉತ್ತೀರ್ಣರಾದ ಸಮಾಜದ ವಿದ್ಯಾರ್ಥಿಗಳನ್ನು ಮತ್ತು ಅಧಿಕಾರಿಗಳನ್ನು, ಗಣ್ಯರನ್ನು ಗೌರವಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಪುರಸಭಾಧ್ಯಕ್ಷೆ ಸರೋಜಾ ಉಳ್ಳಾಗಡ್ಡಿ, ಪಿಎಲ್’ಡಿ ಬ್ಯಾಂಕ್ ನಿರ್ದೇಶಕ ಸುರೇಶ ಯತ್ನಳ್ಳಿ, ವಿಜಯಭರತ್ ಬಳ್ಳಾರಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎನ್.ತಿಮ್ಮಾರೆಡ್ಡಿ, ತಾಲೂಕಾಧ್ಯಕ್ಷ ದುಂಡೆಪ್ಪ ಕಾಯಕದ, ಉಪಾಧ್ಯಕ್ಷ ಶಿವಾನಂದ ಕಟ್ಟಿಮನಿ, ಜಯದೇವಪ್ಪ ಶೀಗಿಹಳ್ಳಿ, ವಿಶಾಲಾಕ್ಷಮ್ಮ ಲಾಳಸಂಗಿ, ಗಣೇಶ ಹಡಪದ, ನಾಗರಾಜ ಅರಬಗೊಂಡ, ಮಾಲತೇಶ ಹೊಳಲ, ನಾಗರಾಜ ಕಟ್ಟಿ ಹಾಗೂ ಸಮಾಜದ ಬಾಂಧವರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ವಿದ್ಯಾ ಕಾಯಕದ ಸ್ವಾಗತಿಸಿದರು. ವಿಜಯ ಕಾಯಕದ ವಂದಿಸಿದರು.